
ಜರ್ಮನಿಯ ಮೆಮ್ಮಿಂಗೆನ್‌ಗೆ ಹೊರಟಿದ್ದ ರಯಾನ್‌ಏರ್ (Ryanair) FR1879 ವಿಮಾನದಲ್ಲಿ ಗಗನದಲ್ಲೇ ತೀವ್ರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇಂಜಿನ್‌ನಲ್ಲಾದ ಲೋಪದಿಂದಾಗಿ ಅದರ ಒಂದು ಭಾಗ ವಿಮಾನದ ಬಾಡಿಗೆ ಬಡಿದು, ಕಿಟಕಿ ಒಡೆದು ಹೋಗಿದೆ. ಇದರಿಂದಾಗಿ ಕ್ಯಾಬಿನ್‌ನಲ್ಲಿ ಏಕಾಏಕಿ ವಾಯುಭಾರ ಕುಸಿತ (Decompression) ಉಂಟಾಗಿ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಥೆಸ್ಸಲೋನಿಕಿಯಿಂದ ಹೊರಟಿದ್ದ ಈ ವಿಮಾನವು ಉತ್ತರ ಮ್ಯಾಸಿಡೋನಿಯಾ ಗಗನಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಇಂಜಿನ್‌ನಿಂದ ಸಿಡಿದ ತುಂಡು ವಿಮಾನದ ಪಕ್ಕದ ಭಾಗಕ್ಕೆ ಬಡಿದಿದ್ದರಿಂದ ಕಿಟಕಿ ಸಂಪೂರ್ಣವಾಗಿ ಧ್ವಂಸಗೊಂಡಿದೆ.
ಕಿಟಕಿ ಒಡೆದ ತಕ್ಷಣ ಉಂಟಾದ ಗಾಳಿಯ ತೀವ್ರ ಒತ್ತಡಕ್ಕೆ, ಆ ಕಿಟಕಿಯ ಪಕ್ಕದಲ್ಲೇ ಕುಳಿತಿದ್ದ 61 ವರ್ಷದ ಸೆರ್ಬಿಯಾ ಮೂಲದ ಪ್ರಯಾಣಿಕ ಅರ್ಧದಷ್ಟು ವಿಮಾನದಿಂದ ಹೊರಕ್ಕೆ ಎಳೆಯಲ್ಪಟ್ಟಿದ್ದಾರೆ! ಆದರೆ, ಅದೃಷ್ಟವಶಾತ್ ಪಕ್ಕದಲ್ಲೇ ಇದ್ದ ಅವರ ಪತ್ನಿ ತಕ್ಷಣವೇ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದಾಗಿ ಅವರು ವಿಮಾನದಿಂದ ಕೆಳಗೆ ಬೀಳುವುದು ತಪ್ಪಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಇತರ ಪ್ರಯಾಣಿಕರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.
A 61-year-old Ryanair passenger was nearly pulled from a Greece-to-Germany flight after debris from a damaged engine shattered a cabin window, leaving the passenger with friction burns. pic.twitter.com/ELPbb9SHm6
— Breaking911 (@Breaking911) July 10, 2026
ಘಟನೆ ಸಂಭವಿಸುತ್ತಿದ್ದಂತೆ ವಿಮಾನದ ಸಿಬ್ಬಂದಿ ತುರ್ತು ಪರಿಸ್ಥಿತಿ ಘೋಷಿಸಿ, ವಿಮಾನವನ್ನು ತಕ್ಷಣವೇ ಕಡಿಮೆ ಎತ್ತರಕ್ಕೆ ಇಳಿಸಿ, ಗ್ರೀಸ್‌ನ ಥೆಸ್ಸಲೋನಿಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ತಿರುಗಿಸಿದ್ದಾರೆ. ರನ್‌ವೇನಲ್ಲಿ ಮೊದಲೇ ಸಿದ್ಧವಾಗಿದ್ದ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡಗಳು ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿವೆ.
WATCH: Video showing the damaged engine that caused debris to smash through a Ryanair 737 cabin window earlier today. https://t.co/oWAPFHOt76 pic.twitter.com/ZSOAu0oOE2
— Breaking Aviation News & Videos (@aviationbrk) July 10, 2026
ಹೊರಕ್ಕೆ ಎಳೆಯಲ್ಪಟ್ಟ 61 ವರ್ಷದ ವ್ಯಕ್ತಿಯ ಹೆಗಲು ಹಾಗೂ ದೇಹದ ಮೇಲ್ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತೀವ್ರ ಆಘಾತಕ್ಕೊಳಗಾಗಿದ್ದರಿಂದ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಉಳಿದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಟರ್ಮಿನಲ್‌ಗೆ ಕರೆತರಲಾಗಿದ್ದು, ಅವರನ್ನು ಜರ್ಮನಿಗೆ ತಲುಪಿಸಲು ರಯಾನ್‌ಏರ್ ಸಂಸ್ಥೆಯು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ.
ರಯಾನ್‌ಏರ್ ಸಂಸ್ಥೆಯು ವಿಮಾನ ಮರುನಿರ್ದೇಶನವನ್ನು ಖಚಿತಪಡಿಸಿದ್ದು, ಕಿಟಕಿಯ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಆದರೆ ಇಂಜಿನ್ ದೋಷದ ತೀವ್ರತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸದ್ಯ ಅಧಿಕಾರಿಗಳು ಈ ಘಟನೆಯ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ