Russia Ukraine Crisis: ಉಕ್ರೇನ್‌ನ 2ನೇ ದೊಡ್ಡ ನಗರಕ್ಕೆ ರಷ್ಯಾ ಸೇನೆ ಲಗ್ಗೆ

By Kannadaprabha News  |  First Published Feb 28, 2022, 1:45 AM IST

ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ರಷ್ಯಾ-ಉಕ್ರೇನ್‌ ಯುದ್ಧದ ನಾಲ್ಕನೇ ದಿನ ಭಾನುವಾರ ಬಲಾಢ್ಯ ರಷ್ಯಾ ಸೇನೆ ಉಕ್ರೇನ್‌ನ 2ನೇ ಅತಿದೊಡ್ಡ ನಗರ ಖಾರ್ಕೀವ್‌ ಮೇಲೆ ಭೀಕರ ದಾಳಿ ನಡೆಸಿದೆ.


ಕೀವ್‌/ಮಾಸ್ಕೋ (ಫೆ.28): ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ರಷ್ಯಾ-ಉಕ್ರೇನ್‌ ಯುದ್ಧದ (Russia Ukraine War) ನಾಲ್ಕನೇ ದಿನ ಭಾನುವಾರ ಬಲಾಢ್ಯ ರಷ್ಯಾ ಸೇನೆ ಉಕ್ರೇನ್‌ನ 2ನೇ ಅತಿದೊಡ್ಡ ನಗರ ಖಾರ್ಕೀವ್‌ (Kharkiv) ಮೇಲೆ ಭೀಕರ ದಾಳಿ ನಡೆಸಿದೆ. ಇದೇ ವೇಳೆ, ರಷ್ಯಾ ಸೈನಿಕರು ಕೆಲವು ಬಂದರು, ತೈಲ ಪೈಪ್‌ಲೈನ್‌ ಮತ್ತು ತೈಲ ಬಂಕರ್‌ಗಳ ಮೇಲೂ ದಾಳಿ ನಡೆಸಿದ್ದಾರೆ. ಆದರೆ ಭಾರೀ ಸಂಘರ್ಷದ ಬಳಿಕ ಖಾರ್ಕೀವ್‌ನಿಂದ ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಉಕ್ರೇನ್‌ ಹೇಳಿಕೊಂಡಿದೆ.

ಇನ್ನೊಂದೆಡೆ ನಾಟಕೀಯ ವಿದ್ಯಮಾನವೊಂದರಲ್ಲಿ, ಉಕ್ರೇನ್‌ಗೆ ಸಹಕಾರ ನೀಡುತ್ತಿರುವ ನ್ಯಾಟೋ ಪಡೆಗಳ ಮೇಲೆ ರಷ್ಯಾದ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌ ತಿರುಗಿಬಿದ್ದಿದ್ದಾರೆ. ‘ಅಮೆರಿಕ, ಜರ್ಮನಿ ಸೇರಿದಂತೆ ಪಾಶ್ಚಾತ್ಯ ದೇಶಗಳು ಹಾಗೂ 30 ದೇಶಗಳ ಒಕ್ಕೂಟವಾದ ನ್ಯಾಟೋ ಸಂಘಟನೆಯು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ಹೇರುತ್ತಿದೆ. ಹಾಗೂ ಉಕ್ರೇನ್‌ಗೆ ಸೇನಾ ನೆರವು, ಹಣಕಾಸು ನೆರವು ನೀಡುತ್ತಿದೆ. ಹಾಗಾಗಿ ಭವಿಷ್ಯದಲ್ಲಿ ನ್ಯಾಟೋ ಪಡೆಗಳು ನಮ್ಮ ಮೇಲೆ ಅಣ್ವಸ್ತ್ರ ದಾಳಿಗೆ ಮುಂದಾಗಬಹುದು. ಹೀಗಾಗಿ ನಮ್ಮ ‘ಅಣ್ವಸ್ತ್ರ ಪಡೆ’ಗಳನ್ನು ಸಜ್ಜಾಗಿ ಇರಿಸಿ’ ಎಂದು ಆದೇಶಿಸಿದ್ದಾರೆ. ತನ್ಮೂಲಕ ನ್ಯಾಟೋ ಪಡೆಗಳಿಗೆ ಪರೋಕ್ಷವಾಗಿ ಅಣ್ವಸ್ತ್ರ ದಾಳಿಯ ಬೆದರಿಕೆಯನ್ನೂ ಒಡ್ಡಿದ್ದಾರೆ.

Tap to resize

Latest Videos

Russia Ukraine Crisis: ಸಾಕು ನಾಯಿ ಬಿಟ್ಟು ಬರಲು ಒಪ್ಪುತ್ತಿಲ್ಲ ಭಾರತೀಯ ವಿದ್ಯಾರ್ಥಿ

ಇದರ ಬೆನ್ನಲ್ಲೇ ರಷ್ಯಾ ಏರ್‌ಲೈನ್ಸ್‌ಗೆ 27 ದೇಶಗಳ ಯುರೋಪ್‌ ಒಕ್ಕೂಟ ತನ್ನ ವಾಯುವಲಯ ನಿರ್ಭಂಧಿಸಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ ಖರೀದಿಗೆ ಧನಸಹಾಯ ಮಾಡಲು ಮತ್ತು ರಷ್ಯಾ ಪರ ಮಾಧ್ಯಮಗಳುಗೆ ನಿರ್ಭಂಧ ಹೇರಲು ತೀರ್ಮಾನಿಸದೆ. ಇನ್ನೊಂದು ಕಡೆ ಪುಟಿನ್‌ ಹೇಳಿಕೆಯನ್ನು ಅಮೆರಿಕ ಖಂಡಿಸಿದೆ. ಇನ್ನು ರಾಜಧಾನಿ ಕೀವ್‌ನಲ್ಲೂ ಕೂಡ ಬೀದಿ ಸಂಘರ್ಷ, ಬಾಂಬ್‌ ದಾಳಿ ಮುಂದುವರಿದಿದೆ. ಆದರೆ ಅಲ್ಲಿನ ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು ಬೀದಿಗೆ ಇಳಿದಿದ್ದು, ಸೇನೆಗೆ ಸಾಥ್‌ ನೀಡಿದ್ದಾರೆ. ರಷ್ಯಾ ಪಡೆಗೆ ಹೆಚ್ಚು ಮುನ್ನುಗ್ಗಲು ಬಿಟ್ಟಿಲ್ಲ ಎಂದು ಉಕ್ರೇನ್‌ ಸರ್ಕಾರ ಹೇಳಿದೆ. ಹೀಗಾಗಿ ಕೀವ್‌ ಇನ್ನೂ ಉಕ್ರೇನ್‌ನ ಭದ್ರಕೋಟೆಯಾಗೇ ಉಳಿದುಕೊಂಡಿದೆ.

ಖಾರ್ಕೀವ್‌ನಲ್ಲಿ ಕಾಳಗ: ರಷ್ಯಾ ಅಧ್ಯಕ್ಷ ಪುಟಿನ್‌ ನಾಲ್ಕು ದಿಕ್ಕುಗಳಿಂದಲೂ ಉಕ್ರೇನ್‌ ಮೇಲೆ ತೀವ್ರ ದಾಳಿಗೆ ಶನಿವಾರವಷ್ಟೇ ಸೂಚಿಸಿದ್ದರು. ಹೀಗಾಗಿ ಈವರೆಗೂ ರಾಜಧಾನಿ ಕೀವ್‌ ಮೇಲೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿದ್ದ ರಷ್ಯಾ ಪಡೆಗಳು, ಭಾನುವಾರ ಉಕ್ರೇನ್‌ನ 2ನೇ ಅತಿದೊಡ್ಡ ನಗರವಾದ 14 ಲಕ್ಷ ಜನಸಂಖ್ಯೆಯ ಖಾರ್ಕೀವ್‌ ಸೇರಿದಂತೆ ಹಲವು ನಗರಗಳ ಮೇಲೂ ಭಾರೀ ದಾಳಿ ನಡೆಸಿವೆ. ಕಳೆದ ಗುರುವಾರವೇ ಖಾರ್ಕೀವ್‌ ನಗರದ ಗಡಿಗೆ ರಷ್ಯಾ ಪಡೆಗಳು ಆಗಮಿಸಿದ್ದವಾದರೂ, ಒಳಗೆ ಪ್ರವೇಶ ಮಾಡಿರಲಿಲ್ಲ. ಆದರೆ ಭಾನುವಾರ ದೊಡ್ಡ ಪ್ರಮಾಣದಲ್ಲಿ ನಗರವನ್ನು ಪ್ರವೇಶಿಸುವ ಯತ್ನವನ್ನು ರಷ್ಯಾ ಪಡೆಗಳು ಮಾಡಿವೆ. 

Ukraine Entrepreneurs ನೀವು ಬಳಸುವ ಪೇಪಾಲ್, ವಾಟ್ಸಾಪ್, ಸ್ನ್ಯಾಪ್‌ಚಾಟ್ ಶುರು ಮಾಡಿದವರು ಉಕ್ರೇನಿಯರು!

ಇದಕ್ಕೆ ಮುನ್ನುಡಿಯಾಗಿ ನಗರದ ಮೇಲೆ ಭಾರಿ ಪ್ರಮಾಣದ ಬಾಂಬ್‌, ಕ್ಷಿಪಣಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ನಗರದ ತೈಲ ಹಾಗೂ ಅನಿಲ ಪೈಪ್‌ಲೈನ್‌, ವಿಮಾನ ನಿಲ್ದಾಣ, ಜನವಸತಿ ಪ್ರದೇಶ, ಸೇನಾ ನೆಲೆ ನಾಶವಾಗಿವೆ. ಅನಿಲ ಪೈಪ್‌ಲೈನ್‌, ತೈಲ ಪೈಪ್‌ಲೈನ್‌ ಮೇಲಿನ ರಷ್ಯಾದ ದಾಳಿಯ ಹೊಸ ತಂತ್ರಗಾರಿಕೆ ಆಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಆದರೆ ಉಕ್ರೇನ್‌ ಪಡೆಗಳು ಕೂಡಾ ತೀವ್ರ ಪ್ರತಿರೋಧ ಒಡ್ಡುವ ಮೂಲಕ ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸಿವೆ. ಆದರೆ, ಕೀವ್‌ ಮತ್ತು ಕಾರ್ಖೀವ್‌ನಲ್ಲಿ ಎರಡೂ ನಗರಗಳಲ್ಲಿ ಜನಜೀವನ ಬಹುತೇಕ ಸ್ತಬ್ಧಗೊಂಡಿದ್ದು, ಸಾವಿರಾರು ಜನರು 4ನೇ ದಿನವೂ ಬಂಕರ್‌ಗಳಲ್ಲಿ ತಂಗಿ ಉಳಿಸಿಕೊಳ್ಳುವ ಯತ್ನ ಮಾಡಿದ್ದರೆ, ಮತ್ತೊಂದೆಡೆ ಲಕ್ಷಾಂತರ ಜನರು ನೆರೆಯ ಸುರಕ್ಷಿತ ನಗರ, ದೇಶಗಳಿಗೆ ವಲಸೆ ಮುಂದುವರೆಸಿದ್ದಾರೆ.

ವ್ಯಾಪಕ ಸಾವು ನೋವು: ಕಳೆದ 4 ದಿನದಲ್ಲಿ ತನ್ನ ದಾಳಿಗೆ ರಷ್ಯಾದ 4300 ಯೋಧರು ಹತರಾಗಿದ್ದಾರೆ. ಜೊತೆಗೆ ರಷ್ಯಾದ 146 ಟ್ಯಾಂಕ್‌, 27 ವಿಮಾನ ಮತ್ತು 26 ಕಾಪ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಸರ್ಕಾರ ಹೇಕೊಂಡಿದೆ.

ನಾವು ಹೋರಾಡುತ್ತಿದ್ದೇವೆ, ನಮ್ಮ ದೇಶಕ್ಕಾಗಿ ಹೋರಾಡುತ್ತಿದ್ದೇವೆ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಏಕೆಂದರೆ ಹಾಗೆ ಮಾಡಲು ನಮಗೆ ಹಕ್ಕಿದೆ.
-ವೊಲೊಡಿಮೀರ್‌ ಜೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

click me!