ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾದ ಹಣಕಾಸು ವ್ಯವಸ್ಥೆಗೆ ದೊಡ್ಡ ಮಟ್ಟಿನ ಹೊಡೆತ ನೀಡಲು, ಜಾಗತಿಕ ಸಮುದಾಯ ಸಮ್ಮತಿ ಸೂಚಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಷ್ಯಾದ ಕೇಂದ್ರೀಯ ಬ್ಯಾಂಕ್ ಮತ್ತು ಈಗಾಗಲೇ ನಿರ್ಬಂಧಕ್ಕೆ ಒಳಗಾಗಿರುವ ಹಲವು ಬ್ಯಾಂಕ್‌ಗಳು ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರಲಿದೆ.
ವಾಷಿಂಗ್ಟನ್ (ಫೆ.28): ಉಕ್ರೇನ್ (Ukraine) ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾದ (Russia) ಹಣಕಾಸು ವ್ಯವಸ್ಥೆಗೆ ದೊಡ್ಡ ಮಟ್ಟಿನ ಹೊಡೆತ ನೀಡಲು, ಜಾಗತಿಕ ಸಮುದಾಯ ಸಮ್ಮತಿ ಸೂಚಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಷ್ಯಾದ ಕೇಂದ್ರೀಯ ಬ್ಯಾಂಕ್ ಮತ್ತು ಈಗಾಗಲೇ ನಿರ್ಬಂಧಕ್ಕೆ ಒಳಗಾಗಿರುವ ಹಲವು ಬ್ಯಾಂಕ್‌ಗಳು ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರಲಿದೆ. ಅಲ್ಲದೆ ಈ ಬೆಳವಣಿಗೆ ರಷ್ಯಾದ ಆಮದು ಮತ್ತು ರಫ್ತು ವಲಯಕ್ಕೂ ಭಾರೀ ಪೆಟ್ಟು ನೀಡಲಿದೆ ಎನ್ನಲಾಗಿದೆ.
ಸ್ವಿಫ್ಟ್ ಶಾಕ್: ಭಾರತ ಸೇರಿದಂತೆ ವಿಶ್ವದ 200 ದೇಶಗಳ 11000ಕ್ಕೂ ಹೆಚ್ಚು ಬ್ಯಾಂಕ್‌ಗಳು ಸ್ವಿಫ್ಟ್ (ಸೊಸೈಟಿ ಫಾರ್ ವಲ್ಡ್‌ರ್‍ವೈಡ್ ಇಂಟರ್‌ಬ್ಯಾಂಕ್ ಪೈನಾನ್ಷಿಯಲ್ ಟೆಲಿಕಮ್ಯುನಿಕೇಷನ್) ಎಂಬ ಹಣಕಾಸು ವ್ಯವಸ್ಥೆಯನ್ನು ಬಳಸುತ್ತಿವೆ. ಈ ವ್ಯವಸ್ಥೆಯು ಎಲ್ಲಾ ಬ್ಯಾಂಕ್‌ಗಳಿಗೆ ದೇಶದಿಂದ ದೇಶಕ್ಕೆ ಹಣ ವರ್ಗಾವಣೆ ಕುರಿತು ತ್ವರಿತ ಸಂದೇಶ ನೀಡುವ ಮೂಲಕ, ಹಣ ವರ್ಗಾವಣೆ ಪ್ರಕ್ರಿಯೆ ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ.
ಇದೀಗ ಈ ವ್ಯವಸ್ಥೆಯಿಂದ ರಷ್ಯಾದ ಆಯ್ದ ಬ್ಯಾಂಕ್‌ಗಳನ್ನು ಹೊರಗಿಡಲು ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಜರ್ಮನಿ, ಫ್ರಾನ್ಸ್, ಇಟಲಿ ನಿರ್ಧರಿಸಿವೆ. ರಷ್ಯಾದ ಬಹುತೇಕ ಬ್ಯಾಂಕ್‌ಗಳು ಇದೇ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುವ ಕಾರಣ, ಅವುಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಅದರಲ್ಲೂ ತೈಲ ಮತ್ತು ಅನಿಲ ರಫ್ತು ವಹಿವಾಟು ನಡೆಸುವವರ ಮೇಲೆ ಇದು ಮಾರಕ ಪರಿಣಾಮ ಬೀರಲಿದೆ ಎನ್ನಲಾಗಿದೆ. ಜೊತೆಗೆ ವಿದೇಶಗಳಿಂದ ಮಾಡಿಕೊಂಡ ಆಮದಿಗೆ ಹಣ ನೀಡಿಕೆ ಪ್ರಕ್ರಿಯೆಯಲ್ಲಿನ ವ್ಯತ್ಯಯ, ಆಮದಿಗೂ ಹೊಡೆತ ನೀಡಲಿದೆ ಎನ್ನಲಾಗಿದೆ.
Russia Ukraine Crisis: ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸರಿಯಾಗುತ್ತೆ ಎಂದ North Korea
ಕೇಂದ್ರೀಯ ಬ್ಯಾಂಕ್‌ಗೂ ನಿರ್ಬಂಧ: ಇನ್ನು ಸ್ವಿಫ್ಟ್ ಶಾಕ್‌ನ ಜೊತೆ ಜೊತೆಗೇ ರಷ್ಯಾದ ಕೇಂದ್ರೀಯ ಬ್ಯಾಂಕ್‌ನ ಅಂತಾರಾಷ್ಟ್ರೀಯ ಮೀಸಲು ಮೇಲೆ ನಿರ್ಬಂಧ ಹೇರಲು ಈ ದೇಶಗಳು ಸಮ್ಮತಿಸಿವೆ.
ಕಠಿಣ ಕ್ರಮ: ಉಕ್ರೇನ್ ಯುದ್ಧಕ್ಕೆ ನೆರವು ನೀಡುತ್ತಿರುವ ಮತ್ತು ರಷ್ಯಾದ ಯತ್ನವನ್ನು ಬೆಂಬಲಿಸುತ್ತಿರುವ ವ್ಯಕ್ತಿಗಳಿಗೆ ಪೌರತ್ವ ನೀಡದಿರುವ, ನೀಡಿದ್ದರೆ ಅದನ್ನು ರದ್ದುಪಡಿಸುವ ವಿಷಯದಲ್ಲೂ ಮೇಲ್ಕಂಡ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ. ಅಲ್ಲದೆ ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಆಸ್ತಿ ಪತ್ತೆ ಮಾಡಿ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲೂ ನಿರ್ಧರಿಸಲಾಗಿದೆ. ಜೊತೆಗೆ ಇಂಥ ಆಸ್ತಿ ಪತ್ತೆಗೆ ವಿಶೇಷ ಕಾರ್ಯಪಡೆ ರಚನೆಗೂ ನಿರ್ಧರಿಸಲಾಗಿದೆ.
ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ ಚಾಲನೆ: ರಷ್ಯಾ ಸತತ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗಿದೆ. ಎಲ್ಲಾ ದಿಕ್ಕುಗಳಿಂದ ರಷ್ಯಾ ತನ್ನ ದಾಳಿ ಮುಂದುವರಿಸಿದೆ. ಇದರಿಂದ ಹಲವು ನಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.ಸಂಕಷ್ಟದಲ್ಲಿರುವ ಉಕ್ರೇನ್‌ಗೆ ಉದ್ಯಮಿ ಎಲಾನ್ ಮಸ್ಕ್ ನೆರವಿಗೆ ಬಂದಿದ್ದಾರೆ. ಎಲಾನ್ ಮಸ್ಕ್ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಉಕ್ರೇನ್‌ನಲ್ಲಿ ಚಾಲನೆ ನೀಡಲಾಗಿದೆ.
Russia Ukraine Crisis: ಬೆಲಾರಸ್ ಗಡಿಯಲ್ಲಿ ಮಾತುಕತೆಗೆ ಉಕ್ರೇನ್ ಒಪ್ಪಿಗೆ!
ಉಕ್ರೇನ‌್‌ನಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಉಪಗ್ರ ಆಧಾರಿತ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಗೆ ಚಾಲನೆ ನೀಡಿದೆ. ಈ ಮಾಹಿತಿಯನ್ನು ಎಲಾನ್ ಮಸ್ಕ್ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. ಉಕ್ರೇನ್‌ನ ಡಿಜಿಟಲ್ ಟ್ರಾನ್ಸ್‌ಫರ್ಮೇಶನ್ ಸಚಿವ ಮೈಖಲೋ ಫೆಡ್ರೋವ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, ಉಕ್ರೇನ್‌ನಲ್ಲಿ ಸ್ಟಾರ್‌ಲಿಂಗ್ ಸೇವೆ ಚಾಲನೆಯಲ್ಲಿದೆ. ಮತ್ತಷ್ಟು ಕೇಂದ್ರಗಳಲ್ಲಿ ಶೀಘ್ರದಲ್ಲೇ ಸೇವೆ ಲಭ್ಯವಾಗಲಿದೆ ಎಂದಿದ್ದಾರೆ.
ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಉಕ್ರೇನ್ ಅಧಿಕಾರಿಗಳು ಎಲಾನ್ ಮಸ್ಕ್ ಸಂಪರ್ಕಿಸಿರುವ ಮಾಹಿತಿಯೂ ಬಹಿರಂಗಗೊಂಡಿದೆ. ಉಕ್ರೇನ್ ಇಂಟರ್ನೆಟ್ ಸೇವೆ ಮೇಲೆ ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಕಡೆ ಇಂಟರ್ನಟ್ ಸೇವೆ ಕಡಿತಗೊಂಡಿದೆ. ಹೀಗಾಗಿ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ಉಕ್ರೇನ್‌ಗೆ ಒದಗಿಸಲು ಮನವಿ ಮಾಡಿದ್ದರು ಎಂದು ಮಸ್ಕ್ ಹೇಳಿದ್ದಾರೆ.