ಉಕ್ರೇನಿನ ರೈಲ್ವೆ ಸ್ಟೇಷನ್‌ ಮೇಲೆ ರಷ್ಯಾ ದಾಳಿಗೆ 40 ಜನರು ಬಲಿ!

Published : Apr 09, 2022, 07:19 AM ISTUpdated : Apr 09, 2022, 07:23 AM IST
ಉಕ್ರೇನಿನ ರೈಲ್ವೆ ಸ್ಟೇಷನ್‌ ಮೇಲೆ ರಷ್ಯಾ ದಾಳಿಗೆ 40 ಜನರು ಬಲಿ!

ಸಾರಾಂಶ

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತೀವ್ರವಾಗುತ್ತಿದ್ದು, ಯುದ್ಧಕ್ಕೆ ಬಲಿಯಾಗುತ್ತಿರುವ ಅಮಾಯಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸದ್ಯ ಉಕ್ರೇನಿನ ರೈಲ್ವೆ ಸ್ಟೇಷನ್‌ ಮೇಲೆ ರಷ್ಯಾ ದಾಳಿ ನಡೆಸಿದ್ದು, ಈ ದಾಳಿಗೆ 40 ಜನರು ಬಲಿಯಾಗಿದ್ದಾರೆ. 

ಕೀವ್‌(ಏ.09): ಉಕ್ರೇನಿ ನಾಗರಿಕರ ಮೇಲಿನ ದೌರ್ಜನ್ಯ ಮುಂದುವರೆಸಿರುವ ರಷ್ಯಾ ಸೇನಾ ಪಡೆಗಳು, ಶುಕ್ರವಾರ ಪೂರ್ವ ಉಕ್ರೇನ್‌ನ ಕ್ರಮಾಟೋ​ರ್‍ಸ್$್ಕ ನಗರದ ರೈಲ್ವೆ ನಿಲ್ದಾಣದ ಮೇಲೆ ಭೀಕರ ರಾಕೆಟ್‌ ದಾಳಿ ನಡೆಸಿವೆ. ಈ ಘಟನೆಯಲ್ಲಿ 40 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಮಾಯಕರನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಈ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರಷ್ಯಾ ಈಗ ಪೂರ್ವ ಉಕ್ರೇನಿನ ಡೋನೆಟ್ಸ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಜ್ಜಾಗಿದ್ದು, ರಾಕೆಟ್‌ಗಳ ಮೂಲಕ ಸತತ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಯುದ್ಧವಲಯದಿಂದ ಸ್ಥಳಾಂತರಗೊಳ್ಳಲು ಸಾವಿರಾರು ನಾಗರಿಕರು ಸಜ್ಜಾಗಿ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದರು. ಇದೇ ವೇಳೆ ರಷ್ಯಾ ಪಡೆಗಳು 2 ರಾಕೆಟ್‌ಗಳು ದಾಳಿ ನಡೆಸಿದೆ.

ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಅಮಾನತು, ಮತ ಹಾಕದ ಭಾರತ!

ಈ ಘಟನೆಯ ಭೀಕರತೆಯನ್ನು ತೋರಿಸುವ ಫೋಟೋಗಳನ್ನು ಸ್ಥಳೀಯರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸೂಟ್‌ಕೇಸ್‌ಗಳ ಪಕ್ಕದಲ್ಲೇ ರಕ್ತಸಿಕ್ತವಾದ ನಾಗರಿಕರ ಮೃತದೇಹವನ್ನು ಕಾಣಬಹುದಾಗಿದೆ. ಅಲ್ಲದೇ ರೇಲ್ವೆ ನಿಲ್ದಾಣವು ದಾಳಿಯಲ್ಲಿ ನಾಶಗೊಂಡಿದೆ.

‘ಪುಟಿನ್‌ ಇಡೀ ಉಕ್ರೇನಿನ ಬದಲಾಗಿ ಈಗ ಕೇವಲ ಡೋನ್‌ಬಾಸ್‌ ವಲಯವನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಹೀಗಾಗಿ ಪೂರ್ವ ಉಕ್ರೇನಿನಲ್ಲಿ ತನ್ನ ಸೇನೆಯನ್ನು ಮರುಸಂಘಟನೆಗೊಳಿಸುತ್ತಿದೆ ಎಂದು ಉಕ್ರೇನಿನ ಸೇನೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆದಷ್ಟುಶೀಘ್ರ ಯುದ್ಧವಲಯದಿಂದ ಸ್ಥಳಾಂತರಗೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

ಉಕ್ರೇನ್‌-ರಷ್ಯಾ ಬಿಕ್ಕಟ್ಟಿನಲ್ಲಿ ಭಾರತ ಶಾಂತಿ ಪರ

ಉಕ್ರೇನ್‌ ಹಾಗೂ ರಷ್ಯಾದ ನಡುವಿನ ಬಿಕ್ಕಟ್ಟಿನಲ್ಲಿ ಭಾರತವು ಶಾಂತಿಯ ಪರವಾಗಿದೆ ಹಾಗೂ ಭೀಕರ ಯುದ್ಧವನ್ನು ಕೂಡಲೇ ನಿಲ್ಲಿಸಲು ಕರೆ ನೀಡುತ್ತದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಉಕ್ರೇನಿನ ಬಿಕ್ಕಟ್ಟಿನ ವಿಚಾರವಾಗಿ ಮಾತನಾಡಿದ ಅವರು, ‘ಭಾರತವು ಆಧ್ಯಕ್ಷೀಯ ಮಟ್ಟದಲ್ಲಿ ಉಕ್ರೇನ್‌ ಹಾಗೂ ರಷ್ಯಾ ನಡುವೆ ಶಾಂತಿ ಮಾತುಕತೆ ಬಯಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಉಭಯ ದೇಶಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್‌ ಲಾವ್ರೊವ್‌ ದೆಹಲಿಗೆ ಭೇಟಿ ನೀಡಿದಾಗಲೂ ಈ ವಿಷಯವನ್ನು ಚರ್ಚಿಸಲಾಗಿದೆ. ಯುದ್ಧ ಕೊನೆಗೊಳಿಸಿ ಶಾಂತಿ ಮಾತುಕತೆ ಆರಂಭಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಾಯ ಒದಗಿಸಲು ಭಾರತ ಸಿದ್ಧವಾಗಿದೆ’ ಎಂದರು.

ಭಾರತ ಹಿಂದೆಂದಿಗಿಂತಲೂ ಈಗ ಹೆಚ್ಚು ಸದೃಢ: ಪ್ರಧಾನಿ ಮೋದಿ

ಇದೇ ವೇಳೆ ಉಕ್ರೇನಿನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡವನ್ನು ಭಾರತವು ವಿರೋಧಿಸುತ್ತದೆ. ಅಲ್ಲದೇ ಈ ಕುರಿತು ಸ್ವತಂತ್ಯ ತನಿಖೆಗೆ ಆಗ್ರಹಿಸುತ್ತದೆ ಎಂದು ಹೇಳಿದರು.

ಉಕ್ರೇನಿನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ತರುವ ಆಪರೇಶನ್‌ ಗಂಗಾ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಜೈಶಂಕರ್‌, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಲೇ ಆಪರೇಶನ್‌ ಗಂಗಾ ಸಫಲವಾಯಿತು ಎಂದು ಶ್ಲಾಘಿಸಿದರು. ‘ಮೋದಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಉಕ್ರೇನಿನ ಅಧ್ಯಕ್ಷ ಜೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಕದನ ವಿರಾಮದ ಸತತ ಉಲ್ಲಂಘನೆ ನಡುವೆಯೂ ಸಂಘರ್ಷ ವಲಯವಾದ ಸುಮಿ ಹಾಗೂ ಖಾರ್ಕೀವ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ರಷ್ಯಾದ ಯೋಧರೇ ಸುರಕ್ಷಿತವಾಗಿ ಸ್ಥಳಾಂತರವಾಗಲು ನೆರವು ನೀಡಿದರು. ಇದು ಪ್ರಧಾನಿಯ ಮಾತುಕತೆಯಿಂದ ಸಾಧ್ಯವಾಯಿತು’ ಎಂದರು.

‘ಭಾರತವು ಯುದ್ಧಪೀಡಿತ ಉಕ್ರೇನಿನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಿದ ಮೊದಲ ದೇಶವಾಗಿದೆ. ಹಲವಾರು ದೇಶಗಳು ಭಾರತದಿಂದ ಪ್ರೇರಣೆ ಪಡೆದು ಇಂತಹ ಕಾರ್ಯಾಚರಣೆಯನ್ನು ಆರಂಭಿಸಿದವು. ಭಾರತವು ಆಪರೇಶನ್‌ ಗಂಗಾದಡಿಯಲ್ಲಿ 90 ವಿಮಾನಗಳ ಮೂಲಕ ದೇಶದ ನಾಗರಿಕರನ್ನು ಮರಳಿ ಕರೆತಂದಿದ್ದ ಪ್ರೇರಣೆಯಿಂದಾಗಿ ಇನ್ನೊಂದು ದೇಶದ ವಿದೇಶಾಂಗ ಸಚಿವರು ಕೂಡಾ ಅವರ ಸರ್ಕಾರದ ನೆರವಿನೊಂದಿಗೆ 2 ವಿಮಾನಗಳಲ್ಲಿ ನಾಗರಿಕರನ್ನು ಮರಳಿ ತಂದರು ಎಂದು ಹೇಳಿದ್ದಾರೆ. ಭಾರತವು ಕೇವಲ ಆರ್ಥಿಕವಾಗಿ ಆತ್ಮನಿರ್ಭರವೆನಿಸಿಲ್ಲ. ಆಪರೇಶನ್‌ ಗಂಗಾದಂತಹ ಕ್ಲಿಷ್ಟಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿಯೂ ಜಗತ್ತು ತನ್ನತ್ತ ತಿರುಗಿ ನೀಡುವಂತೆ ಮಾಡಿದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ