ಉಕ್ರೇನ್‌ ಮೇಲೆ ರಷ್ಯಾ ದಾಳಿ ತೀವ್ರ: ಕೀವ್‌ ನಗರದ ಬಳಿ 900 ಮೃತ ದೇಹ ಪತ್ತೆ

By Suvarna News  |  First Published Apr 17, 2022, 9:39 AM IST

*ಬುಜ್‌ ನಂತರ ಮತ್ತೊಂದು ನಗರದಲ್ಲಿ ರಷ್ಯಾ ಮಾರಣಹೋಮ ಬೆಳಕಿಗೆ
*ರಸ್ತೆಗಳಲ್ಲೇ ಬಿದ್ದಿರುವ ಮೃತದೇಹಗಳು: 95% ಗುಂಡೇಟಿನಿಂದ ಸಾವು
*ಕೀವ್‌, ಖಾರ್ಕೀವ್‌, ಮರಿಯುಪೋಲ್‌ ನಗರಗಳ ಮೇಲೆ ಭಾರೀ ದಾಳಿ
*ಪ್ರಮುಖ ಕ್ಷಿಪಣಿ ದುರಸ್ತಿ ಕೇಂದ್ರಗಳ ಮೇಲೆ ರಷ್ಯಾ ಸೇನೆ ವೈಮಾನಿಕ ದಾಳಿ
 


ಕೀವ್‌ (ಏ. 17): ಉಕ್ರೇನ್‌ನ ಮೇಲೆ ಸತತ 52 ದಿನಗಳಿಂದ ದಾಳಿ ನಡೆಸುತ್ತಿರುವ ರಷ್ಯಾದ ಮತ್ತಷ್ಟುಕ್ರೌರ್ಯಗಳು ಶನಿವಾರ ಬೆಳಕಿಗೆ ಬಂದಿವೆ. ರಾಜಧಾನಿ ಕೀವ್‌ನ ಹೊರವಲಯದ ಪ್ರದೇಶವೊಂದರಲ್ಲಿ 900ಕ್ಕೂ ಹೆಚ್ಚು ನಾಗರಿಕರ ಶವಗಳು ಪತ್ತೆಯಾಗಿದ್ದು, ರಷ್ಯಾ ಸೇನೆಯ ದೌರ್ಜನ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಸಾರಿ ಹೇಳಿದೆ.ಮಹಿಳೆಯರು, ಮಕ್ಕಳು, ವೃದ್ಧರು ಎಂದು ನೋಡದೆ 900ಕ್ಕೂ ಹೆಚ್ಚು ಜನರನ್ನು ಕೀವ್‌ ಹೊರವಲಯದ ಪ್ರದೇಶಗಳಲ್ಲಿ ಹತ್ಯೆ ಮಾಡಲಾಗಿದೆ. ರಸ್ತೆಗಳಲ್ಲಿ, ಕಟ್ಟಡದ ಒಳಗೆ ಎಲ್ಲೆಂದರಲ್ಲಿ ಅಲ್ಲಿ ಶವಗಳು ಅನಾಥವಾಗಿ ಬಿದ್ದಿವೆ. ಮೃತರ ಪೈಕಿ ಬಹುತೇಕರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಮತ್ತೊಂದು ನಗರಿ ಬುಚ್‌ನಲ್ಲೂ ಹೀಗೆ 300ಕ್ಕೂ ಹೆಚ್ಚು ಜನರ ಶವಗಳು ಪತ್ತೆಯಾಗಿದ್ದವು. ಆ ವೇಳೆಯೂ ಜನರ ಬಾಯಿಯೊಳಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ರಾಜಧಾನಿ ಸುತ್ತಲೂ ರಷ್ಯಾ ನಡೆಸಿರುವ ಮಾರಣಹೋಮ ಬೆಳಕಿಗೆ ಬಂದಿದೆ.

Tap to resize

Latest Videos

ಇದನ್ನೂ ಓದಿ: ಪರಿಣಾಮ ಎದುರಿಸುತ್ತೀರಿ: ನ್ಯಾಟೋಗೆ ರಷ್ಯಾ ಗಂಭೀರ ಎಚ್ಚರಿಕೆ

ಉಕ್ರೇನ್‌ ಮೇಲೆ ದಾಳಿ ಆರಂಭಿಸದಾಗಿನಿಂದಲೂ ಕೀವ್‌ ಅನ್ನೇ ರಷ್ಯಾ ಪ್ರಮುಖ ಗುರಿ ಮಾಡಿಕೊಂಡಿತ್ತು. ಆದರೆ ರಾಜಧಾನಿ ಕೈವಶ ಸಾಧ್ಯವಾಗದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಲ್ಲಿಂದ ಹಿಂದಕ್ಕೆ ಸರಿದಿತ್ತು. ಅಂಥ ಪ್ರದೇಶಗಳಿಗೆ ಇದೀಗ ಅಧಿಕಾರಿಗಳು ಭೇಟಿ ನೀಡಿದ ವೇಳೆ ರಷ್ಯಾ ಯೋಧರು ಎಸಗಿಹೋದ ಕ್ರೌರ್ಯ ಬೆಳಕಿಗೆ ಬಂದಿದೆ.

ಕೀವ್‌, ಖಾರ್ಕೀವ್‌, ಮರಿಯುಪೋಲ್‌ ನಗರಗಳ ಮೇಲೆ ಭಾರೀ ದಾಳಿ: ತನ್ನ ದೇಶದ ಮೇಳಿನ ದಾಳಿಗೆ ಪ್ರತಿಯಾಗಿ, ಉಕ್ರೇನ್‌ ಮೇಲಿನ ವೈಮಾನಿಕ ದಾಳಿಯನ್ನು ರಷ್ಯಾ ಶನಿವಾರ ತೀವ್ರಗೊಳಿಸಿದೆ. ರಾಜಧಾನಿ ಕೀವ್‌, ಖಾರ್ಕೀವ್‌, ಮರಿಯುಪೋಲ್‌ ಸೇರಿದಂತೆ ಆಯಕಟ್ಟಿನ ನಗರಗಳ ಮೇಲೆ ರಷ್ಯಾ ಪಡೆಗಳು ಭಾರೀ ಪ್ರಮಾಣದ ಶೆಲ್‌, ರಾಕೆಟ್‌, ಕ್ಷಿಪಣಿ ದಾಳಿ ನಡೆಸಿವೆ.

ಕೀವ್‌ ಮತ್ತು ಸುತ್ತಮುತ್ತಲಿರುವ ನಗರಗಳ ಅಪಾರ್ಚ್‌ಮೆಂಟ್‌, ಮಾರಾಟ ಮಳಿಗೆ, ಕೈಗಾರಿಕಾ ಪ್ರದೇಶ, ರೈಲು ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಜೊತೆಗೆ ಕೀವ್‌ ಸಮೀಪದಲ್ಲಿದ್ದ ಶಸ್ತ್ರ ಸಂಗ್ರಹಗಾರ ಮತ್ತು ಸೇನೆಯ ವಾಹನಗಳ ಮೇಲೆ ರಷ್ಯಾ ದಾಳಿ ನಡೆಸಿದೆ.

ಇದಲ್ಲದೇ ಉಕ್ರೇನ್‌ನ ಸೈನಿಕ ಶಕ್ತಿಯನ್ನು ಕುಗ್ಗಿಸಲು ಕ್ಷಿಪಣಿಗಳ ಉತ್ಪಾದನೆ ಮತ್ತು ದುರಸ್ಥಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಕೀವ್‌ನ ಜುಲಿಯಾನಿ ವಿಮಾನ ನಿಲ್ದಾಣದ ಬಳಿ ಇರುವ ವಿರಾಜ್‌ ಸ್ಥಾವರದಲ್ಲಿನ ಕ್ಷಿಪಣಿ ಕಾರ್ಯಾಗಾರವೊಂದನ್ನು ರಷ್ಯಾ ನಾಶ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಯುದ್ಧ ಹಡುಗು ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಂಡ ರಷ್ಯಾ, ಉಕ್ರೇನ್ ನ ಕ್ಷಿಪಣಿ ಉತ್ಪಾದನಾ ಕೇಂದ್ರ ಉಡೀಸ್!

ಇದಲ್ಲದೆ ಖಾರ್ಕೀವ್‌ನ ಜನವಸತಿ, ಮಾರುಕಟ್ಟೆ, ಕೈಗಾರಿಕಾ ಪ್ರದೇಶಗಳ ಮೇಲೆ ನಡೆದ ದಾಳಿಯಲ್ಲಿ 7 ತಿಂಗಳ ಮಗು ಸೇರಿದಂತೆ 7 ಜನರು ಸಾವಿಗೀಡಾಗಿದ್ದಾರೆ. 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇನ್ನೊಂದೆಡೆ ಈಗಾಗಲೇ ಬಹುತೇಕ ಜರ್ಝರಿತಗೊಂಡಿರುವ ಬಂದರು ನಗರಿ ಮರಿಯುಪೋಲ್‌ ಮೇಲೂ ದಾಳಿ ತೀವ್ರಗೊಳಿಸುವ ಮೂಲಕ ಅದನ್ನು ಕೈವಶ ಮಾಡುವ ಯತ್ನವನ್ನು ರಷ್ಯಾ ಆರಂಭಿಸಿದೆ. ಮರಿಯುಪೋಲ್‌ ಒಂದರಲ್ಲೇ ರಷ್ಯಾ ದಾಳಿಗೆ 20000ಕ್ಕೂ ಹೆಚ್ಚು ಜನರು ಸಾವನ್ನಪ್ಪಿರಬಹುದು ಎಂದು ಸ್ಥಳಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌ ಪ್ರಧಾನಿ, ರಿಷಿ ಸುನಾಕ್‌ ಪ್ರೀತಿ ಪಟೇಲ್‌ಗೆ ರಷ್ಯಾ ನಿರ್ಬಂಧ: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಭಾರತೀಯ ಮೂಲದ ಬ್ರಿಟನ್‌ ಸಚಿವ ರಿಷಿ ಸುನಾಕ್‌, ಪ್ರೀತಿ ಪಟೇಲ್‌ ಸೇರಿದಂತೆ ಹಲವು ಸಚಿವರಿಗೆ ರಾಜಕಾರಣಿಗಳಿಗೆ ರಷ್ಯಾ ನಿರ್ಬಂಧ ಹೇರಿದೆ. ಉಕ್ರೇನ್‌ನ ಮೇಲಿನ ದಾಳಿಯ ನಂತರ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದ್ದ ಬ್ರಿಟನ್‌ ಕ್ರಿಯೆಗೆ ಪ್ರತಿಯಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವ ತಿಳಿಸಿದ್ದಾರೆ. ರಷ್ಯಾ ನಿರ್ಬಂಧ ವಿಧಿಸಿರುವ 13 ಬ್ರಿಟಿಷ್‌ ರಾಜಕಾರಣಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಷ್ಯಾವನ್ನು ಅಂತಾರಾಷ್ಟ್ರೀಯವಾಗಿ ಪ್ರತ್ಯೇಕಿಸಲು ಬ್ರಿಟನ್‌ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಉದ್ದೇಶ ಪೂರ್ವಕವಾಗಿ ಉಕ್ರೇನ್‌ ಸುತ್ತಲಿನ ಪರಿಸ್ಥಿತಿಯನ್ನು ಬ್ರಿಟನ್‌ ಉಲ್ಬಣಗೊಳಿಸುತ್ತಿದೆ. ಕೀವ್‌ಗೆ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ನ್ಯಾಟೋ ಜತೆ ಸೇರಿ ಇದೇ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಷ್ಯಾ ಆರೋಪಿಸಿದೆ.

click me!