
ಲಿವೀವ್ (ಮಾ. 15) :ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲುಗಡೆ ಮತ್ತು ಮಾನವೀಯ ನೆರವು ವಿಚಾರವಾಗಿ ಸೋಮವಾರ ಉಭಯ ದೇಶಗಳು ನಡೆಸಿದ ಸಂದಾನ ಸಭೆ ಮತ್ತೆ ಅಪೂರ್ಣಗೊಂಡಿದೆ. ಪೋಲಿಷ್ ಗಡಿಯ ಸಮೀಪವಿರುವ ಸೇನಾ ನೆಲೆಯ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯು ಅಪಾಯಕಾರಿ ಹಂತ ತಲುಪಿದ ನಂತರದಲ್ಲಿ ಉಕ್ರೇನಿನಿಂದ ನಾಗರಿಕರನ್ನು ಸ್ಥಳಾಂತರಿಸುವ ಬಗ್ಗೆ ಹಾಗೂ ಆಹಾರ, ನೀರು, ಔಷಧಿಗಳ ತುರ್ತು ಸರಬರಾಜಿನ ಬಗ್ಗೆ ಮಾತುಕತೆಗೆ ಉಭಯ ದೇಶಗಳು ತೀರ್ಮಾನಿಸಿದ್ದವು.
ಈ ಸಂಬಂಧ ಸೋಮವಾರ ಆನ್‌ಲೈನ್ ಮೂಲಕ 4ನೇ ಸುತ್ತಿನ ಸಂದಾನ ಸಭೆ ನಡೆಸಲಾಗಿತ್ತು. ಹಲವಾರು ತಾಸುಗಳ ಕಾಲ ನಡೆದ ಈ ಸಭೆಯೂ ಅಪೂರ್ಣಗೊಂಡಿದ್ದು, ನಾಳೆ ಮತ್ತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ರಷ್ಯಾ ಪಡೆಗಳು ಉಕ್ರೇನ್‌ನ ಹಲವು ನಗರಗಳ ಮೇಲೆ ಬಾಂಬ್ ದಾಳಿ ಮುಂದುವರೆಸಿವೆ. ಈ ಆಕ್ರಮಣದಲ್ಲಿ ಹಲವು ಜನರು ಗಾಯಗೊಂಡಿದ್ದಾರೆ.
ಉಕ್ರೇನ್ ವಶಕ್ಕೆ ರಷ್ಯಾ ಮತ್ತಷ್ಟು ದಾಳಿ: ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ತನ್ನ ಯತ್ನವನ್ನು ಸತತ 19ನೇ ದಿನವೂ ಮುಂದುವರೆಸಿರುವ ರಷ್ಯಾ ಸೇನೆ, ರಾಜಧಾನಿ ಕೀವ್ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ಭಾರೀ ಪ್ರಮಾಣದ ವೈಮಾನಿಕ ದಾಳಿ ಮುಂದುವರೆಸಿದೆ. ಹೀಗಾಗಿ ದೇಶಾದ್ಯಂತ ಭಾನುವಾರ ಇಡೀ ರಾತ್ರಿ ವೈಮಾನಿಕ ದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್‌ಗಳು ಮೊಳಗುತ್ತಲೇ ಇದ್ದು, ಜನರಲ್ಲಿ ಭಾರೀ ಭೀತಿ ಹುಟ್ಟಿಸಿದ್ದವು.
ಇದನ್ನೂ ಓದಿ: Elon Musk vs Putin ಚಾಲೆಂಜ್ ಗೆದ್ದವರಿಗೆ ಉಕ್ರೇನ್, ರಷ್ಯಾ ಅಧ್ಯಕ್ಷ ಪುಟಿನ್‌ಗೆ ನೇರ ಸವಾಲು ಹಾಕಿದ ಎಲಾನ್ ಮಸ್ಕ್!
ಒಂದೆಡೆ ಯುದ್ಧ ಕೊನೆಗೊಳಿಸಲು ಉಕ್ರೇನ್ ಜೊತೆ ಸೋಮವಾರ 4ನೇ ಸುತ್ತಿನ ಮಾತುಕತೆ ನಡೆಸಿದ ರಷ್ಯಾ, ಅದೇ ಮತ್ತೊಂದೆಡೆ ಭಾರೀ ದಾಳಿಯ ಮೂಲಕ ಉಕ್ರೇನಿ ಜನರ ಜೀವನ ಹೈರಾಣಾಗಿಸಿದೆ. ರಾಜಧಾನಿ ಕೀವ್, ಕೀವ್‌ನ ಹೊರವಲಯ ಪ್ರದೇಶಗಳಾದ ಬ್ರೊವರಿ, ಇರ್ಪಿನ್, ಬುಚಾ, ಹೊಸ್ಟೊಮೆಲ್, ಎರಡನೇ ಅತಿದೊಡ್ಡ ನಗರ ಖಾರ್ಕೀವ್, ದಕ್ಷಿಣದ ಪ್ರಮುಖ ನಗರ ಮೈಕೋಲೈವ್, ಬಂದರು ನಗರಿ ಖೇರ್ಸನ್, ಚೆರ್ನಿಹಿವ್ ಸೇರಿದಂತೆ ಹಲವು ನಗರಗಳ ಮೇಲೆ ಭಾನುವಾರ ರಾತ್ರಿಯಿಂದಲೂ ರಷ್ಯಾ ಪಡೆಗಳು ಶೆಲ್ ಮತ್ತು ಬಾಂಬ್‌ಗಳ ಮೂಲಕ ದಾಳಿ ನಡೆಸಿವೆ.
ದಾಳಿಯ ಪರಿಣಾಮ ಬಹುತೇಕ ನಗರಗಳು ದುರಸ್ತಿ ಮಾಡಲಾಗದ ಸ್ಥಿತಿಗೆ ತಲುಪಿದ್ದು, ಯುದ್ಧ ನಿಂತರೂ ಇನ್ನೂ ಹಲವು ತಿಂಗಳ ಕಾಲ ಬಂಕರ್‌ಗಳಲ್ಲೇ ಜೀವನ ಮಾಡಬೇಕಾದ ಅಪಾಯಕಾರಿ ಸ್ಥಿತಿಯನ್ನು ನಿರ್ಮಿಸಿದೆ. ಜೊತೆಗೆ ಸತತ ದಾಳಿಯಿಂದಾಗಿ ಜನವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರುವ ಮಾಡುವ ನೆರವು ಸಂಸ್ಥೆಗಳ ಯತ್ನಕ್ಕೂ ಅಡ್ಡಿಯಾಗಿದೆ.
ರಷ್ಯಾ ದಾಳಿಯಲ್ಲಿ ಬ್ರೋವರಿ ನಗರದ ಕೌನ್ಸಿಲರ್ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಅಪಾರ್ಟ್‌ಮೆಂಟ್ ಮೇಲೆ ನಡೆಸಲಾದ ದಾಳಿಯಲ್ಲಿ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಇನ್ನು ವಾಯುವ್ಯ ಉಕ್ರೇನ್‌ನ ರಿವಿನ್ ಪ್ರಾಂತ್ಯದಲ್ಲಿ ದಾಳಿಗೆ ತುತ್ತಾಗಿ ಟೆಲಿವಿಷನ್ ಟವರ್ ಧ್ವಂಸವಾಗಿದೆ.
ಮೈಕೊರೆವ ಚಳಿ, ಕರೆಂಟ್ ಇಲ್ಲ: ಉಕ್ರೇನ್ ಹಲವು ಭಾಗಗಳಲ್ಲಿ ಇದೀಗ ಹಿಮಪಾತವಾಗುತ್ತಿದ್ದು, ಉಷ್ಣಾಂಶ ಶೂನ್ಯ ಮತ್ತು ಅದಕ್ಕಿಂತ ಕೆಳಗಿಳಿದಿದೆ. ಅದರೆ ರಷ್ಯಾ ದಾಳಿಯಲ್ಲಿ ವಿದ್ಯುತ್ ಕಂಬಗಳು, ಅನಿಲ ಪೂರೈಕೆ ಜಾಲ ಧ್ವಂಸಗೊಂಡಿರುವ ಕಾರಣ, ಜನರು ಚಳಿಯಿಂದ ಪಾರಾಗಲು ಹೆಣಗಾಡುವಂತಾಗಿದೆ. ಕೆಲವೆಡೆ ವಿದ್ಯುತ್ ಜಾಲವನ್ನು ಸರಿಪಡಿಸಿದರೂ ಪದೇ ಪದೇ ನಡೆಯುತ್ತಿರುವ ಶೆಲ್ ದಾಳಿಗಳಿಂದಾಗಿ ಅವು ಪುನಃ ಹಾಳಾಗುತ್ತಿವೆ ಎಂದು ಅಧಿಕಾರಿಗಳು ಗೋಳು ತೋಡಿಕೊಂಡಿದ್ದಾರೆ.
19ನೇ ದಿನ, ಗಾಯಾಳು ಯೋಧರಲ್ಲಿ ಧೈರ್ಯ ತುಂಬಲು ಝೆಲೆನ್ಸ್ಕಿ ಆಸ್ಪತ್ರೆಗೆ!
596 ನಾಗರಿಕರ ಸಾವು: ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ, ಉಕ್ರೇನ್‌ನಲ್ಲಿ ಇದುವರೆಗೂ 596 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದರಲ್ಲಿ 85 ಮಕ್ಕಳು ಸೇರಿದ್ದಾರೆ. ಆದರೆ ಹಲವು ಕಡೆ ಇನ್ನೂ ಸಾವು ನೋವು ದಾಖಲಾಗದೇ ಇರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟುಹೆಚ್ಚಿರುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಅದು ಅಂದಾಜಿಸಿದೆ.
ಲಕ್ಷಾಂತರ ಜನರಿಗೆ ಅನ್ನ, ನೀರು ಇಲ್ಲ: ರಷ್ಯಾದ ಭೀಕರ ದಾಳಿಗೆ ತುತ್ತಾದ ನಗರಗಳ ಪೈಕಿ ಒಂದಾ ಮರಿಯುಪೋಲ್‌ನಲ್ಲಿ ಪರಿಸ್ಥಿತಿ ಭೀಕರವಾಗಿದೆ. ಇಲ್ಲಿ ಲಕ್ಷಾಂತರ ಜನರು ಹಲವು ದಿನಗಳಿಂದ ನೀರು, ಆಹಾರ ಇಲ್ಲದೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ರೆಡ್‌ಕ್ರಾಸ್ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಜೊತೆಗೆ ಸತತ ದಾಳಿಯಿಂದಾಗಿ ಶವಗಳು, ನಾಗರಿಕರು, ಯೋಧರು ಕುಸಿದು ಬಿದ್ದ ಕಟ್ಟಡದೊಳಗೆ ಹಲವು ದಿನಗಳಿಂದ ಸಿಕ್ಕಿಬಿದ್ದಿದ್ದಾರೆ. ಸತತ ದಾಳಿಯ ಪರಿಣಾಮ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾದ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.
ಮರಿಯುಪೋಲ್ ನಗರ ಪೂರ್ಣವಾಗಿ ವಶವಾದರೆ, ಅಲ್ಲಿಂದ, ಈಗಾಗಲೇ ತಾನು ವಶಪಡಿಸಿಕೊಂಡಿರುವ ಕ್ರೆಮಿಯಾಕ್ಕೆ ನೇರ ಕಾರಿಡಾರ್ ನಿರ್ಮಿಸುವುದು ರಷ್ಯಾಕ್ಕೆ ಸಾಧ್ಯವಾಗಲಿದೆ. ಹೀಗಾಗಿಯೇ ರಾಜಧಾನಿ ಕೀವ್‌ಗಿಂತ ಹೆಚ್ಚಾಗಿ ಈ ನಗರದ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ