* ಚೀನಾ, ದ.ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ
* ಚೀನಾದಲ್ಲಿ 1337 ಕೇಸ್, 10 ನಗರ ಲಾಕ್ಡೌನ್
* ಕೊರಿಯಾದಲ್ಲಿ ಸತತ 3ನೇ ದಿನ 3 ಲಕ್ಷ ಪ್ರಕರಣ
* ಎಲ್ಲ ನಿರ್ಬಂಧ ಕೈಬಿಟ್ಟಭಾರತಕ್ಕೆ ಎಚ್ಚರಿಕೆ ಘಂಟೆ
ಬೀಜಿಂಗ್ (ಮಾ. 15) ವಿಶ್ವಾದ್ಯಂತ ಕೊರೋನಾ (Coronavirus) ಸೋಂಕು ಕಡಿಮೆ ಆಗುತ್ತಿದೆ ಎಂಬ ಸಮಾಧಾನ ನೆಲೆಯೂರುತ್ತಿರುವ ನಡುವೆಯೇ ಚೀನಾ, ದಕ್ಷಿಣ ಕೊರಿಯಾ ಹಾಗೂ ಇತರ ಕೆಲವು ದೇಶಗಳಲ್ಲಿ ಕೊರೋನಾ ಸೋಂಕು ಮತ್ತೆ ಸ್ಫೋಟಿಸಲು ಆರಂಭಿಸಿದೆ. ಚೀನಾದಲ್ಲಿ ಸೋಂಕು 2 ವರ್ಷದ ಗರಿಷ್ಠಕ್ಕೆ ಮುಟ್ಟಿದ್ದು, ಭಾನುವಾರ 1807 ಹಾಗೂ ಸೋಮವಾರ 1337 ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕೊರಿಯಾದಲ್ಲಿ ಭಾನುವಾರ ದಾಖಲೆಯ 3.83 ಲಕ್ಷ ಹಾಗೂ ಸೋಮವಾರ 3.09 ಲಕ್ಷ ಕೇಸು ವರದಿಯಾಗಿವೆ.
ಭಾರತಕ್ಕೆ ಹತ್ತಿರ ಇರುವ ಚೀನಾ ಹಾಗೂ ಇತರ ಏಷ್ಯಾ ದೇಶಗಳಲ್ಲಿ ಕೊರೋನಾ ಏರಿಕೆಯು ಭಾರತಕ್ಕೂ ಆತಂಕದ ಸಂಗತಿಯಾಗಿದೆ. ಕೋವಿಡ್ ವಿಷಯದಲ್ಲಿ ಹಲವು ತಿಂಗಳಿನಿಂದ ಚೀನಾ ಸರ್ಕಾರ ‘ಶೂನ್ಯ ಸಹಿಷ್ಣುತೆ ನಿಯಮ’ ಪಾಲಿಸಿಕೊಂಡು ಬರುತ್ತಿದೆ. ಅದರ ಹೊರತಾಗಿಯೂ ಅಲ್ಲಿ ಮರಳಿ ಕೇಸುಗಳು ಏರಿಕೆಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
undefined
ಚೀನಾದ 10 ನಗರ ಲಾಕ್: ಚೀನಾದ ಹಲವು ಭಾಗಗಳಲ್ಲಿ ಮತ್ತೆ ಒಮಿಕ್ರೋನ್ ರೂಪಾಂತರಿ ವೈರಸ್ ಸ್ಫೋಟಗೊಂಡಿದ್ದು, ಸೋಮವಾರ ಒಂದೇ ದಿನ ಸ್ಥಳೀಯವಾಗಿ ಹಬ್ಬಿದ 1337 ಹೊಸ ಕೇಸು ದೃಢಪಟ್ಟಿದೆ. ಹೊಸ ಕೇಸುಗಳ ಪೈಕಿ ಬಹುಪಾಲು ಈಶಾನ್ಯ ಭಾಗದ ಜಿಲಿನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ 895 ಪ್ರಕರಣ ದಾಖಲಾಗಿವೆ.
ಇದೇ ವೇಳೆ ಕೇಸು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 17.5 ಲಕ್ಷ ಜನಸಂಖ್ಯೆ ಹೊಂದಿರುವ ಶೆನ್‌ಜೆನ್ ನಗರವನ್ನು ಭಾನುವಾರ ಮತ್ತು ಸೋಮವಾರ ಪೂರ್ಣ ಲಾಕ್ಡೌನ್ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಒಟ್ಟು 10 ಮಹಾನಗರಗಳಲ್ಲಿ ಲಾಕ್ಡೌನ್ ಮಾಡಲಾಗಿದೆ. ಸೋಂಕು ಇಳಿಕೆ ಕಾರಣ ಮುಚ್ಚಿದ್ದ ಹಲವು ಕೊರೋನಾ ವಿಶೇಷ ತಾತ್ಕಾಲಿಕ ಆಸ್ಪತ್ರೆಗಳನ್ನು ಮತ್ತೆ ತೆರೆಯುವ ಕಾರ‍್ಯ ಆರಂಭವಾಗಿದೆ.
Covid lockdown ಮತ್ತೆ ಕೊರೋನಾ ಸ್ಫೋಟ, ಚೀನಾದಲ್ಲಿ ಕಠಿಣ ಲಾಕ್‌ಡೌನ್ ಜಾರಿ, ಭಾರತಕ್ಕೂ ಆತಂಕ!
ಎರಡನೇ ಅಲೆಯಲ್ಲಿ ಕೇಸು ಮರುಕಳಿಸಿದ ಬಳಿಕ ವುಹಾನ್‌ನಲ್ಲಿ ದೊಡ್ಡ ಪ್ರಮಾಣದ ಲಾಕ್ಡೌನ್ ಮಾಡಲಾಗಿತ್ತು. ಬಳಿಕ ಹೊಸ ಕೇಸು ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಒಮಿಕ್ರೋನ್ ವೈರಸ್‌ನಿಂದಾಗಿ ಹೊಸ ಅಲೆ ಕಾಣಿಸಿಕೊಂಡಿದೆ.
ಕೊರಿಯಾದಲ್ಲೂ ಸ್ಫೋಟ: ಈ ನಡುವೆ ದಕ್ಷಿಣ ಕೊರಿಯಾದಲ್ಲಿ ಸೋಮವಾರವೂ 3,09,790 ಹೊಸ ಕೇಸು ದೃಢಪಟ್ಟಿದೆ. ಇದರೊಂದಿಗೆ ಸತತ 3ನೇ ದಿನವೂ 3 ಲಕ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ವಿಶೇಷವೆಂದರೆ ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಸಾವಿನ ಪ್ರಮಾಣವೂ ಅಧಿಕವಾಗಿದೆ. ನಿತ್ಯ 100-250 ಜನರು ಸಾವನ್ನಪ್ಪುತ್ತಿದ್ದಾರೆ. ಹಾಂಕಾಂಗ್ ಹಾಗೂ ವಿಯೆಟ್ನಾಂನಲ್ಲೂ ಸಾಕಷ್ಟುಸಂಖ್ಯೆಯ ಕೇಸುಗಳು ವರದಿಯಾಗುತ್ತಿವೆ.
ಮಾ.16ರಿಂದ 12-14ರ ವಯೋಮಾನದ ಎಲ್ಲ ಮಕ್ಕಳಿಗೂ ಕೋವಿಡ್ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಯೋಮಾನದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ. ಜೊತೆಗೆ 60 ವರ್ಷ ಮೇಲ್ಪಟ್ಟಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ ನೀಡುವುದಾಗಿ ಘೋಷಿಸಿದೆ.