1939ರ 'ದಿ ವಿಜರ್ಡ್ ಆಫ್ ಓಝ್' ಸಿನಿಮಾದಲ್ಲಿ ಜ್ಯೂಡಿ ಗಾರ್ಲೆಂಡ್ ಧರಿಸಿದ್ದ ರೂಬಿ ಶೂ 237 ಕೋಟಿ ರೂ.ಗೆ ಹರಾಜಾಗಿದೆ. ಎರಡು ದಶಕಗಳಿಗೂ ಹಿಂದೆ ಮ್ಯೂಸಿಯಂನಿಂದ ಕಳುವಾಗಿದ್ದ ಈ ಶೂ ಅನ್ನು ಶನಿವಾರ ಹರಾಜು ಹಾಕಲಾಗಿತ್ತು.
1939ರ ಅಮೆರಿಕನ್ ಸಿನಿಮಾ 'ದಿ ವಿಜರ್ಡ್ ಆಫ್ ಓಝ್'ನಲ್ಲಿ (The Wizard of Oz)ನಟಿ ಜ್ಯೂಡಿ ಗಾರ್ಲೆಂಡ್ ಧರಿಸಿದ್ದ ಐತಿಹಾಸಿಕ ರೂಬಿ ಸ್ಲಿಪ್ಪರ್ ಬರೋಬ್ಬರಿ 28 ಮಿಲಿಯನ್ ಡಾಲರ್ಗೆ (237 ಕೋಟಿ ಭಾರತೀಯ ರೂಪಾಯಿ) ಹರಾಜಿಗಿದೆ. ಈ ಐತಿಹಾಸಿಕ ಶೂ ಎರಡು ದಶಕಗಳಿಗೂ ಹಿಂದೆ ಮ್ಯೂಸಿಯಂನಿಂದ ಕಳುವಾಗಿತ್ತು. ಆದರೆ ನಂತರ ಸಿಕ್ಕ ಅದನ್ನು ಶನಿವಾರ ಹರಾಜಿಗಿಡಲಾಗಿತ್ತು. ಹರಾಜಿನಲ್ಲಿ 28 ಮಿಲಿಯನ್ ಡಾಲರ್ಗೆ ಈ ರೂಬಿ ಶೂ ಹರಾಜಾಗಿದೆ.
ಹರಾಜು ಸಂಸ್ಥೆ ಹೆರಿಟೇಜ್ ಆಕ್ಸನ್ಸ್ (Heritage Auctions)ಅವರು ಈ ಶೂ ಅಥವಾ ಸ್ಲಿಪ್ಪರ್ ಹರಾಜಿನಲ್ಲಿ 3 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆದುಕೊಳ್ಳಬಹುದೆಂದು ಅಂದಾಜಿಸಿದ್ದರು. ಆದರೆ ಡಿಮಾಂಡ್ ಹೆಚ್ಚಿದ್ದು, ಬೇಗ ಬೇಗ ಒಬ್ಬರಾದ ಮೇಲೆ ಒಬ್ಬರು ಅದಕ್ಕೆ ಹೆಚ್ಚಿನ ಬೇಡಿಕೆ ಸಲ್ಲಿಸಿದ್ದರಿಂದ ಹರಾಜು ಕೂಗಲು ಆರಂಭಿಸಿದ ಕೆಲ ನಿಮಿಷಗಳಲ್ಲೇ ಅದರ ಮೇಲೆ ಹಲವು ಪಟ್ಟುಗಳಷ್ಟು ಹೆಚ್ಚಾಯ್ತು. ಫೋನ್ನಲ್ಲಿಯೂ ಕೆಲವು ಬಿಡ್ದಾರರು ಆಫರ್ ಮಾಡಿದ್ದರಿಂದಾಗಿ 15 ನಿಮಿಷ ಹಿಂದೆ ಮುಂದೆ ಸಾಗಿ ಕಣ್ಣು ಕುಕ್ಕುವ ಮೊತ್ತಕ್ಕೆ ಈ ಶೂ ಹರಾಜಾಯ್ತು.
ಡಲ್ಲಾಸ್ ಮೂಲದ ಹರಾಜು ಸಂಸ್ಥೆಯ ಶುಲ್ಕವನ್ನು ಒಳಗೊಂಡಂತೆ ಅಪರಿಚಿತ ಖರೀದಿದಾರರು ಅಂತಿಮವಾಗಿ 32.5 ಮಿಲಿಯನ್ ಡಾಲರ್ ಹಣವನ್ನು ಈ ಶೂಗಾಗಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ಈ ಶೂನ ಹರಾಜಿಗೆ ಆನ್ಲೈನ್ ಮೂಲಕ ಬಿಡ್ಡಿಂಗ್ ತೆರೆಯಲಾಗಿತ್ತು. ಶನಿವಾರ ಮಧ್ಯಾಹ್ನದ ನಂತರ ಬಿಡ್ಡಿಂಗ್ ಆರಂಭಿಸುವ ಮೊದಲು ಇದಕ್ಕೆ 1.55 ಮಿಲಿಯನ್ ಬೆಲೆ ನಿಗದಿ ಮಾಡಲಾಗಿತ್ತು. ಇನ್ನು ಈ ಐತಿಹಾಸಿಕ ಶೂವನ್ನು ಖರೀದಿಸಲು 800 ಜನ ವೆಬ್ಸ್ಟೈಟನ್ನು ಟ್ರ್ಯಾಕ್ ಮಾಡಿದ್ದರು, ಅಲ್ಲದೇ ಹರಾಜು ಸಂಸ್ಥೆಯ ವೆಬ್ಸೈಟ್ಗೆ 43 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರು ಎಂದು ಹರಾಜು ಸಂಸ್ಥೆಯ ಉಪ ಮುಖ್ಯಸ್ಥ ರಾಬರ್ಟ್ ವಿಲೊಂಸ್ಕಿ ಹೇಳಿದ್ದಾರೆ.
ಈ ಸ್ಲಿಪ್ಪರನ್ನು ಜ್ಯೂಡಿ ಗಾರ್ಲೆಂಡ್ ಅವರ ಹುಟ್ಟೂರಾದ ಗ್ರ್ಯಾಂಡ್ ರಾಪಿಡ್ನ ಮಿನ್ನೆಸೊಟದಲ್ಲಿರುವ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ 2005ರಲ್ಲಿ ಟೆರ್ರಿ ಜಾನ್ ಮಾರ್ಟಿನ್ ಎಂಬ ಕಳ್ಳ ಹ್ಯಾಮರ್ ಬಳಸಿ ಮ್ಯೂಸಿಯಂನ ಗ್ಲಾಸ್ ಒಡೆದು ಆ ಚಪ್ಪಲಿಯನ್ನು ಕದ್ದುಕೊಂಡು ಹೋಗಿದ್ದ. ನಂತರ 2018ರಲ್ಲಿ ಎಫ್ಬಿಐ ಈ ಶೂವನ್ನು ವಶಪಡಿಸಿಕೊಳ್ಳುವವರೆಗೂ ಈ ಶೂ ಎಲ್ಲಿತ್ತು ಎಂಬುದೇ ನಿಗೂಢ ರಹಸ್ಯವಾಗಿ ಉಳಿದಿತ್ತು. ಈ ಶೂವನ್ನು ಕದ್ದಿದ್ದ ಪ್ರಸ್ತುತ 77ವರ್ಷದವನಾಗಿರುವ ಮಾರ್ಟಿನ್ನ್ನು ಕೂಡ ಸಾರ್ವಜನಿಕವಾಗಿ ಕಳ್ಳ ಎಂಬುದನ್ನು ತೋರಿಸಿರಲಿಲ್ಲ, ಆದರೆ 2023ರ ಆಕ್ಟೋಬರ್ನಲ್ಲಿ ಆ ಪ್ರಕರಣದಲ್ಲಿ ಆತ ದೋಷಿ ಎಂದು ಕಂಡು ಬಂದ ನಂತರವಷ್ಟೇ ಆತನೇ ಕಳ್ಳ ಎಂಬುದು ಗೊತ್ತಾಗಿತ್ತು.
ಇದನ್ನೂ ಓದಿ: 74ರ ಹರೆಯದಲ್ಲಿಯೂ ಮೊಟ್ಟೆ ಇಟ್ಟ ಜಗತ್ತಿನ ಅತೀ ಹಿರಿಯ ಕಡಲಕೋಳಿ
ಇದನ್ನೂ ಓದಿ:ಸುಂದರ ತುಟಿಗಳಿಗಾಗಿ ಹಸಿ ಮೆಣಸಿನಕಾಯಿ ಉಜ್ಜಿದ ಯುವತಿ: ಆಮೇಲೇನಾಯ್ತು?