UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್‌..!

By Kannadaprabha NewsFirst Published Oct 25, 2022, 6:16 AM IST
Highlights

ಕಳೆದ 200 ವರ್ಷಗಳಲ್ಲೇ ದೇಶದ ಚುಕ್ಕಾಣಿ ಹಿಡಿದ ಅತಿ ಕಿರಿಯ ವ್ಯಕ್ತಿ ಎಂಬ ಹಲವು ಕೀರ್ತಿಗಳಿಗೆ  ಭಾಜನರಾದ ಸುನಕ್‌ 

ಲಂಡನ್‌(ಅ.25):  ಬ್ರಿಟನ್‌ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್‌ (42) ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ 200 ವರ್ಷಗಳ ಕಾಲ ಭಾರತವನ್ನು ಆಳಿದ್ದ ಬ್ರಿಟನ್‌ನ ಅಧಿಪತ್ಯ ಇದೀಗ ಭಾರತೀಯರೊಬ್ಬರ ತೆಕ್ಕೆಗೆ ಬಂದಿದೆ. ಕರ್ನಾಟಕದ ಅಳಿಯ ಕೂಡ ಆಗಿರುವ ರಿಷಿ ಆಯ್ಕೆಯೊಂದಿಗೆ ಬ್ರಿಟನ್‌ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ. ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ, ಮೊದಲ ಶ್ವೇತವರ್ಣೇತರ, ಮೊದಲ ಹಿಂದೂ, ಕಳೆದ 200 ವರ್ಷಗಳಲ್ಲೇ ದೇಶದ ಚುಕ್ಕಾಣಿ ಹಿಡಿದ ಅತಿ ಕಿರಿಯ ವ್ಯಕ್ತಿ ಎಂಬ ಹಲವು ಕೀರ್ತಿಗಳಿಗೆ ಸುನಕ್‌ ಭಾಜನರಾಗಿದ್ದಾರೆ.

ಹಾಲಿ ಬ್ರಿಟನ್‌ ಪ್ರಧಾನಿಯಾಗಿರುವ ಲಿಜ್‌ ಟ್ರಸ್‌ ಅವರು ಯಾವುದೇ ಹಂತದಲ್ಲಿ ಪ್ರಧಾನಿ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದು, ಬಳಿಕ ಬ್ರಿಟನ್‌ನ ರಾಜ ರಿಷಿ ಅವರನ್ನು ಆಹ್ವಾನಿಸಲಿದ್ದಾರೆ. ಮಂಗಳವಾರವೇ ಈ ಪ್ರಕ್ರಿಯೆ ನಡೆದು ರಿಷಿ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. 7 ವರ್ಷದಲ್ಲಿ ಬ್ರಿಟನ್‌ ಪ್ರಧಾನಿಯಾಗುತ್ತಿರುವ 5ನೇ ವ್ಯಕ್ತಿ ರಿಷಿ ಅವರಾಗಲಿದ್ದಾರೆ.

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ: ಸಿಎಂ ಬೊಮ್ಮಾಯಿ ಹರ್ಷ

ಬೆಂಗಳೂರಿನ ಅಳಿಯ:

ಬೆಂಗಳೂರಿನ ಹೆಸರಾಂತ ಸಾಪ್ಟ್‌ವೇರ್‌ ಕಂಪನಿ ‘ಇಸ್ಫೋಸಿಸ್‌’ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರ ಅಳಿಯ ಆಗಿರುವ ರಿಷಿ ಸುನಕ್‌, ಕೆಲ ತಿಂಗಳ ಹಿಂದೆ ಬೋರಿಸ್‌ ಜಾನ್ಸನ್‌ ರಾಜೀನಾಮೆ ತರುವಾಯ ನಡೆದ ಪ್ರಧಾನಿ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಆದರೆ ಲಿಜ್‌ ಟ್ರಸ್‌ ಎದುರು ಸೋತಿದ್ದರು. ಈಗ ಲಿಜ್‌ ಟ್ರಸ್‌ ಅವರು ಆಯ್ಕೆಯಾದ 45 ದಿನದಲ್ಲೇ ರಾಜೀನಾಮೆ ನೀಡಿದ್ದರಿಂದ ಪುನಃ ಪ್ರಧಾನಿ ಹುದ್ದೆಗೆ ಚುನಾವಣೆ ನಡೆಯಿತು. ಆದರೆ ಸುನಕ್‌ ವಿರುದ್ಧ ಸ್ಪರ್ಧಿಸಲು ಕನ್ಸರ್ವೇಟಿವ್‌ ಪಕ್ಷದ ಯಾವ ಅಭ್ಯರ್ಥಿಯೂ ಮುಂದೆ ಬರಲಿಲ್ಲ. ಸ್ಪರ್ಧಿಸಲು ಉತ್ಸುಕತೆ ತೋರಿದ್ದ ಬೋರಿಸ್‌ ಜಾನ್ಸನ್‌ ಹಾಗೂ ಪೆನ್ನಿ ಮೋರ್ಡಂಟ್‌, ಕನಿಷ್ಠ 100 ಸದಸ್ಯರ ಬೆಂಬಲ ಪಡೆಯಲು ವಿಫಲವಾಗಿ ಕೊನೇ ಕ್ಷಣದಲ್ಲಿ ಹಿಂದೆ ಸರಿದರು. ಹೀಗಾಗಿ ಸುನಕ್‌ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ದೀಪಾವಳಿ ಸಂದರ್ಭದಲ್ಲಿ ಒಳ್ಳೆಯ ಸುದ್ದಿ ನೀಡಿದ್ದಾರೆ.

‘ಬ್ರಿಟನ್‌ ಕಾಲಮಾನ ಸೋಮವಾರ ಮಧ್ಯಾಹ್ನ 2ಕ್ಕೆ ನಾಮಪತ್ರ ಸಲ್ಲಿಕೆ ಗಡುವು ಮುಗಿಯಿತು. ಸುನಕ್‌ ಬಿಟ್ಟು ಬೇರಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಸುನಕ್‌ ವಿಜಯಿ’ ಎಂದು ಪಕ್ಷದ ಚುನಾವಣಾ ಸಮಿತಿ ಮುಖ್ಯಸ್ಥ ಗ್ರಹಾಂ ಬ್ರ್ಯಾಡಿ ಪ್ರಕಟಿಸಿದರು. ಆದರೆ ಹಾಗಂತ ಸುನಕ್‌ ಹಾದಿ ಹೂವಿನ ಹಾದಿಯಾಗಿ ಏನೂ ಇರದು. ಬ್ರಿಟನ್‌ ತೀವ್ರ ಆರ್ಥಿಕ ಸಂಕಷ್ಟಎದುರಿಸುತ್ತಿದ್ದು, ಅದನ್ನು ಸರಿಪಡಿಸಬೇಕಿದೆ. ಅಲ್ಲದೆ ಯುರೋಪ್‌ ಒಕ್ಕೂಟದಿಂದ ಬ್ರಿಟನ್‌ ಹೊರಬಿದ್ದ ಬಳಿಕ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲದೆ, ರಷ್ಯಾ-ಉಕ್ರೇನ್‌ ಯುದ್ಧದ ಕಾರಣ ಜಾಗತಿಕ ಒತ್ತಡವೂ ಬ್ರಿಟನ್‌ ಮೇಲಿದೆ. ಹೀಗೆ ಹತ್ತು ಹಲವಾರು ಸವಾಲುಗಳು ಸುನಕ್‌ ಮೇಲಿವೆ. ಈಗಾಗಲೇ, ‘ಬ್ರಿಟನ್‌ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಕಲ ಯತ್ನ ಮಾಡುವೆ’ ಎಂದು ಸುನಕ್‌ ವಾಗ್ದಾನ ಮಾಡಿದ್ದಾರೆ.

ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್‌ಗೆ ಶುಭಕೋರಿದ ನರೇಂದ್ರ ಮೋದಿ!

ಸುನಕ್‌ ಅವಿರೋಧ ಆಯ್ಕೆ ಹೇಗಾಯ್ತು?:

ಬ್ರಿಟನ್‌ ಪ್ರಧಾನಿ ಅಭ್ಯರ್ಥಿ ಹುದ್ದೆಗೆ 2 ಹಂತದಲ್ಲಿ ಚುನಾವಣೆ ನಡೆಯುತ್ತವೆ. ಮೊದಲ ಹಂತದಲ್ಲಿ ಕನ್ಸರ್ವೇಟಿವ್‌ ಪಕ್ಷದ ಸಂಸದರು ಮತ ಚಲಾಯಿಸಿ, ಇಬ್ಬರು ಅಭ್ಯರ್ಥಿಗಳನ್ನು ಅಂತಿಮ ಕಣಕ್ಕೆ ಆಯ್ಕೆ ಮಾಡುತ್ತಾರೆ. 2ನೇ ಹಂತದಲ್ಲಿ ಈ ಇಬ್ಬರ ನಡುವೆ ಅಂತಿಮ ಹಣಾಹಣಿ ನಡೆಯುತ್ತದೆ. ಇವರನ್ನು ಕನ್ಸರ್ವೇಟಿವ್‌ ಪಕ್ಷದ 1.7 ಲಕ್ಷ ಪ್ರಾಥಮಿಕ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ.

ಆದರೆ ಇದಕ್ಕೂ ಮುನ್ನ ಅಭ್ಯರ್ಥಿಯಾಗಲು, 357 ಕನ್ಸರ್ವೇಟಿವ್‌ ಪಕ್ಷದ ಸಂಸದರ ಪೈಕಿ, ಕನಿಷ್ಠ 100 ಸಂಸದರ ಬೆಂಬಲವನ್ನು ಆಕಾಂಕ್ಷಿ ಹೊಂದಿರಬೇಕು. ಈ ಹಂತದಲ್ಲಿ ರಿಷಿ ಸುನಕ್‌ಗೆ 100ಕ್ಕೂ ಹೆಚ್ಚು ಸಂಸದರು ಬೆಂಬಲ ವ್ಯಕ್ತಪಡಿಸಿದರು. ಜಾನ್ಸನ್‌ ಬೆಂಬಲಿಗರಾಗಿದ್ದ ಪ್ರೀತಿ ಪಟೇಲ್‌ ಸೇರಿ ಹಲವು ಸಂಸದರು, ಭಾರತೀಯ ಮೂಲದ ಸಂಸದೆ ಸುಯೆಲ್ಲಾ ಬ್ರೇವರ್‌ಮ್ಯಾನ್‌ ಕೂಡ ಸುನಕ್‌ ಪರ ವಾಲಿದರು. ಹೀಗಾಗಿ ಮತ್ತೆ ಸ್ಪರ್ಧಿಸಲು ಇಚ್ಛಿಸಿದ್ದ ಬೋರಿಸ್‌ ಜಾನ್ಸನ್‌ ಹಾಗೂ ಪೆನ್ನಿ ಮೋರ್ಡಂಟ್‌ ಅವರಿಗೆ 100 ಸಂಸದರ ಬೆಂಬಲ ಸಿಗಲಿಲ್ಲ. ಹೀಗಾಗಿ ಅವರಿಬ್ಬರೂ ಸ್ಪರ್ಧೆಯಿಂದ ಹಿಂದೆ ಸರಿದರು. ಇದು ಸುನಕ್‌ ಅವಿರೋಧ ಆಯ್ಕೆಗೆ ನಾಂದಿ ಹಾಡಿತು.
 

click me!