
ಲಂಡನ್: ಬ್ರಿಟನ್ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗುತ್ತಿದ್ದು, ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ತಮ್ಮ ಸಂಪುಟದಲ್ಲಿದ್ದ ಭಾರತೀಯ ಮೂಲದವರೇ ಆದ ಸುಯೆಲ್ಲಾ ಬ್ರಾವರ್‌ಮನ್ (Suella Braverman) ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಹಾಗೆಯೇ ಬ್ರಿಟನ್ ಮಾಜಿ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಪ್ಯಾಲೇಸ್ತೀನ್ ಪರವಾದ ಮೆರವಣಿಗೆಯನ್ನು ಪೊಲೀಸರು ನಿರ್ವಹಿಸಿದ ರೀತಿಯನ್ನು ಸುಯೆಲ್ಲಾ ಬ್ರಾವರ್‌ಮನ್ ಟೀಕಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಬ್ರಿಟನ್‌ನಲ್ಲಿ ಕಳೆದ ವಾರ ಪ್ಯಾಲೇಸ್ತೀನ್ ಪರ ಪ್ರತಿಭಟನೆ ನಡೆದಿತ್ತು. ಈ ಮೆರವಣಿಗೆಯನ್ನು ಪೊಲೀಸರು ನಿರ್ವಹಿಸಿದ್ದು ಸರಿಯಾಗಿಲ್ಲ ಎಂದು ಟೀಕಿಸಿ ಸುಯೆಲ್ಲಾ ಲೇಖನವೊಂದನ್ನು ಪ್ರಕಟಿಸಿದ್ದರು. ಈ ಮೂಲಕ ಅವರು ಉದ್ವಿಗ್ನತೆ ಹೆಚ್ಚಿಸಿದ್ದಾರೆ. ಬಲಪಂಥೀಯರನ್ನು ಲಂಡನ್‌ನಲ್ಲಿ ಬೀದಿಗಿಳಿಸಲು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡುವಂತೆ ಪ್ರಧಾನಿ ರಿಷಿ ಸುನಕ್ ಮೇಲೆ ಒತ್ತಡ ಕೇಳಿ ಬಂದಿತ್ತು. ಇದಾದ ನಂತರ ಈಗ ಸುನಕ್ ಅವರ ಸಂಪುಟದಿಂದ ಸುಯೆಲ್ಲಾ ಅವರಿಗೆ ಕೊಕ್ ನೀಡಲಾಗಿದೆ.
ಪ್ರತಿಭಟನೆಯ ಬಗ್ಗೆ ಸುಯೆಲ್ಲಾ ಬ್ರೇವರ್‌ಮನ್ ಹೇಳಿದ್ದೇನು?
ಪ್ಯಾಲೇಸ್ತೀನ್ ಬೆಂಬಲಿಸುತ್ತಾ ಕದನ ವಿರಾಮಕ್ಕೆ ಕರೆ ನೀಡುವಂತೆ ಮೆರವಣಿಗೆ ಜಾಥಾ ನಡೆಸಿದವರು ಕಳೆದ ವಾರ ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಈ ಪ್ರತಿಭಟನಾಕಾರರ ಈ ಕಾನೂನು ಉಲ್ಲಂಘನೆಯ ಬಗ್ಗೆ ಲಂಡನ್ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಸುಯೆಲ್ಲಾ ಬ್ರಾವರ್‌ಮನ್ (Suella Braverman) ಹೇಳಿದ್ದರು. ನಮ್ಮ ಕೆಚ್ಚೆದೆಯ ಪೊಲೀಸ್ ಅಧಿಕಾರಿಗಳು ನಿನ್ನೆ ಲಂಡನ್‌ನಲ್ಲಿ ಪ್ರತಿಭಟನಾಕಾರರ ಹಿಂಸಾಚಾರದ ಮಧ್ಯೆಯೂ ವೃತ್ತಿಪರತೆ ಮೆರೆದಿದ್ದಾರೆ ಅವರು ಪ್ರತಿಯೊಬ್ಬ ಸಭ್ಯ ನಾಗರಿಕರ ಧನ್ಯವಾದಗಳಿಗೆ ಅರ್ಹರಾಗಿದ್ದಾರೆ. ಅನೇಕ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವ ವೇಳೆ ಗಾಯಗೊಂಡಿರುವುದು ಬೇಸರದ ವಿಚಾರ ಎಂದು ಅವರು ಹೇಳಿದ್ದರು.
ಇದೊಂದು ರೀತಿ ರೋಗ ಪೀಡಿತ, ಪ್ರಚೋದನಕಾರಿ, ಕೆಲವು ಸಂದರ್ಭಗಳಲ್ಲಂತೂ ಸ್ಪಷ್ಟವಾಗಿ ಕ್ರಿಮಿನಲ್ ಪ್ಲೇಕಾರ್ಡ್‌ಗಳ ಘೋಷಣೆಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ತುಂಬಾ ಕೆಳಮಟ್ಟಕ್ಕೆ ಇಳಿಯಲಾಯ್ತು.ಯೆಹೂದಿ ವಿರೋಧಿ (Antisemitism) ಹಾಗೂ ಜನಾಂಗೀಯ ದ್ವೇಷದ ಹಲವು ರೂಪಗಳು ಜೊತೆಯಾಗಿ ಭಯೋತ್ಪಾದನೆಯ ಮೌಲ್ಯವರ್ಧನೆಯೊಂದಿಗೆ ಅಳವಾದ ತೊಂದರೆಯಾಗಲಿದೆ ಎಂದು ಅವರು ಹೇಳಿದ್ದರು.
ಸುಯೆಲ್ಲಾ ಅವರಿಂದ ತೆರವಾದ ಜಾಗಕ್ಕೆ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಜೇಮ್ಸ್ ಕ್ಲೆವರ್‌ಲಿ ಬರಲಿದ್ದಾರೆ. ಹಾಗೆಯೇ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಬ್ರಿಟನ್ ಮಾಜಿ ಪ್ರಧಾನಿ ಡೆವಿಡ್ ಕ್ಯಾಮರೂನ್ ಅವರನ್ನು ನೇಮಿಸಲಾಗಿದೆ. ಈ ಮೂಲಕ ಮುಂಚೂಣಿ ರಾಜಕೀಯಕ್ಕೆ ಕ್ಯಾಮರೂನ್ ಮರಳಿದ್ದಾರೆ. 2011ರಿಂದ 2016ರರವರೆಗೆ ಡೇವಿಡ್ ಕ್ಯಾಮರೂನ್ ಬ್ರಿಟನ್ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ