
ನವದೆಹಲಿ: ಎಂಬತ್ತು - ತೊಂಬತ್ತರ ದಶಕದಲ್ಲಿ ಜನಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ರೂಡಿ ಕೋರ್ಟ್ಜನ್ ಒಂದು ತರದಲ್ಲಿ ಸೆಲೆಬ್ರಿಟಿ ಎಂದೇ ಹೇಳಬಹುದು. ಕ್ರಿಕೆಟಿಗರಷ್ಟೇ ಖ್ಯಾತಿ ಪಡೆದಿದ್ದ ದಕ್ಷಿಣ ಆಫ್ರಿಕಾ ಮೂಲದ ಅಂಪೈರ್ ರೂಡಿ ಕೋರ್ಟ್ಜನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ರೂಡಿ ಕೋರ್ಟ್ಜನ್ ಮತ್ತು ಕೋರ್ಟ್ಜನ್‌ರ ಮೂವರು ಸ್ನೇಹಿತರು ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಎಲ್ಲರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಗಾಲ್ಫ್ ಟೂರ್ನಮೆಂಟ್ ಒಂದಕ್ಕೆ ಕೋರ್ಟ್ಜನ್ ಸ್ಪರ್ಧಿಯಾಗಿ ತೆರಳಿದ್ದರು. ವಾಪಸ್ ಬರುವಾಗ ಅಪಘಾತವಾಗಿದೆ ಎಂದು ಅವರ ಮಗ ಮಾಹಿತಿ ನೀಡಿದ್ದಾರೆ. ರೂಡಿ ಕೋರ್ಟ್ಜನ್ ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು 2010ರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ನಿವೃತ್ತಿ ಘೋಷಿಸಿದ್ದರು. ಅವರ ನಿವೃತ್ತಿ ಕ್ರಿಕೆಟಿಗರಿಗೆ ಮತ್ತು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಅತ್ಯಂತ ನಿಖರ ನಿರ್ಧಾರಗಳನ್ನು ನೀಡುತ್ತಿದ್ದ ಕೋರ್ಟ್ಜನ್ ಅವರನ್ನು ಕಂಡರೆ ಕ್ರಿಕೆಟಿಗರಲ್ಲಿ ಅಪಾರ ಗೌರವವಿತ್ತು. ಡಿಆರ್‌ಎಸ್ ಪದ್ಧತಿ ಇಲ್ಲದ ಕಾಲದಲ್ಲಿ, ನಿಖರವಾದ ತೀರ್ಪು ನೀಡುತ್ತಿದ್ದ ಅಂಪೈರ್‌ಗಳ ಪಟ್ಟಿಯಲ್ಲಿ ಕೋರ್ಟ್ಜನ್‌ರಿಗೆ ಉನ್ನತ ಸ್ಥಾನವಿತ್ತು.
"ಕೆಲ ಸ್ನೇಹಿತರ ಜೊತೆ ಅವರು ಗಾಲ್ಫ್ ಟೂರ್ನಮೆಂಟ್‌ಗೆ ತೆರಳಿದ್ದರು. ಸೋಮವಾರವೇ ಅವರು ವಾಪಸ್ ಬರಬೇಕಿತ್ತು. ಆದರೆ ಇನ್ನೊಂದು ಸುತ್ತಿನ ಆಟವಾಡಿಕೊಂಡು ಮಂಗಳವಾರ ಬರುತ್ತಿದ್ದರು. ಈ ವೇಳೆ ಅಪಘಾತವಾಗಿದೆ," ಎಂದು ಕೋರ್ಟ್ಜನ್ ಅವರ ಮಗ ಕೋರ್ಟ್ಜನ್ ಜೂನಿಯರ್ ಅಲ್ಗೋವಾ ಹೇಳಿದ್ದಾರೆ.
ಬಾಲ್ಯದಿಂದಲೂ ಕೋರ್ಟ್ಜನ್ ಅವರಿಗೆ ಕ್ರಿಕೆಟ್‌ನ ಮೇಲೆ ಅಭಿಮಾನವಿತ್ತು. ದಕ್ಷಿಣ ಆಫ್ರಿಕಾ ರೈಲ್ವೇ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಕೋರ್ಟ್ಜನ್, ಲೀಗ್‌ಗಳಲ್ಲಿ ಕ್ರಿಕೆಟ್ ಆಡುತ್ತಿದ್ದರು. 1981ರಲ್ಲಿ ಕರ್ಜನ್ ಅಂಪೈರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಪೈರಿಂಗ್ ಆರಂಭಿಸಿದರು. ಅದಾದ ಹತ್ತು ವರ್ಷಗಳ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
1992ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಟೆಸ್ಟ್ ಪಾದಾರ್ಪಣೆ ಮಾಡಿದರು. ಒಟ್ಟಾರೆ 209 ಏಕದಿನ ಪಂದ್ಯಗಳು, 14 ಟಿ-ಟ್ವೆಂಟಿ ಪಂದ್ಯಗಳಿಗೆ ಅವರು ಅಂಪೈರಿಂಗ್ ಮಾಡಿದ್ದಾರೆ. 1999ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ ಅವರು ಅಂಪೈರ್ ಆಗಿದ್ದರು. ಮತ್ತು ಇದು ಅವರ ವೃತ್ತಿ ಬದುಕಿನ ಮರೆಯಲಾಗದ ಕ್ಷಣವೂ ಆಗಿತ್ತು. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಂಪೈರ್ ಆಗುವುದು ಒಂದು ಹೆಗ್ಗಳಿಕೆ.
ಇದನ್ನೂ ಓದಿ: Shane Warne ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಕೋಣೆ, ಟವೆಲ್‌ನಲ್ಲಿ ರಕ್ತದ ಕಲೆ ಪತ್ತೆ..!
ಒಟ್ಟು 331 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಅಂಪೈರಿಂಗ್ ಮಾಡಿದ್ದಾರೆ. 2010ರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಆ ವೇಳೆ, ಟೆಸ್ಟ್ ಕ್ರಿಕೆಟ್ ಅನ್ನು ಮಿಸ್ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದರು.
"ಬೆಳಗ್ಗೆ ಎದ್ದಾಗ ಇಂದಿನ ದಿನ ಸುಖಮಯವಾಗಿರಲಿದೆ ಎಂದುಕೊಂಡೆ. ಆದರೆ ಆಟಗಾರರು ಈ ಮುದುಕ ಎಷ್ಟು ಹೊತ್ತು ತಡೆದುಕೊಳ್ಳುತ್ತಾನೆ ನೋಡೋಣ ಎನ್ನುವಂತೆ ನನ್ನ ಮೇಲೆ ಪ್ರೆಷರ್ ಹಾಕುತ್ತಿದ್ದರು. ಇದೇ ನಿಜವಾದ ಕ್ರಿಕೆಟ್. ಕ್ರಿಕೆಟ್ ಒಂದು ಅದ್ಭುತವಾದ ಕ್ರೀಡೆ. ಇಂತ ಒಂದು ಕ್ರೀಡೆಯ ಭಾಗವಾಗುವ ಅವಕಾಶ ಸಿಕ್ಕಿದ್ದಕ್ಕೆ ನಾನು ಆಭರಿ. ನಾನು ಖಂಡಿತ ಕ್ರಿಕೆಟ್ ಅನ್ನು ಮಿಸ್ ಮಾಡಿ ಕೊಳ್ಳುತ್ತೇನೆ," ಎಂದು ಕೋರ್ಟ್ಜನ್ ನಿವೃತ್ತಿಯ ದಿನ ಹೇಳಿದ್ದರು.
ಇದನ್ನೂ ಓದಿ: ಕ್ರೀಡಾ ಜಗತ್ತಿನಲ್ಲಿ ಮುಗಿಯದ ಸಾವಿನ ಶೋಕ... 3 ತಿಂಗಳು, 3 ದಿಗ್ಗಜರ ಸಾವು!
"ನಿಜಕ್ಕೂ ನಿವೃತ್ತಿಗಾಗಿ ನಾನು ಹಾತೊರೆಯುತ್ತಿದ್ದೇನೆ. ಹಲವಾರು ಕೆಲಸಗಳನ್ನು ಮಾಡುವುದು ಬಾಕಿಯಿದೆ. ಆದರೆ ಎಲ್ಲಕ್ಕೂ ಮುನ್ನ, ಕುಟುಂಬದ ಜೊತೆ ಕಾಲ ಕಳೆಯಬೇಕು. ಅದಕ್ಕಾಗಿಯೇ ಬ್ರೇಕ್ ಪಡೆಯುತ್ತಿದ್ದೇನೆ," ಎಂದು ಕೋರ್ಟ್ಜನ್ ಹೇಳಿದ್ದರು.
ಕೋರ್ಟ್ಜನ್ ಸಾವಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಸೆಹ್ವಾಗ್ ಪಂದ್ಯವೊಂದರಲ್ಲಿ ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ನೆನಪು ಮಾಡಿಕೊಂಡಿದ್ದಾರೆ. "ಸ್ವಲ್ಪ ನಿಧಾನವಾಗಿ ನೋಡಿ ಆಡು. ನಿನ್ನ ಆಟವನ್ನು ನಾನು ನೋಡಬೇಕು," ಎಂದು ಕೋರ್ಟ್ಜನ್ ಸೆಹ್ವಾಗ್‌ಗೆ ಬುದ್ದಿ ಮಾತು ಹೇಳಿದ್ದರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ