ಅಮೆರಿಕದ ಶಾಲೆಗಳಲ್ಲಿ ಪೊಲೀಸ್‌ ಭದ್ರತೆ, ಇದು ಶಾಲೆಯಲ್ಲ ಜೈಲು ಎಂದ ಮಕ್ಕಳು!

By Santosh NaikFirst Published Sep 24, 2022, 3:23 PM IST
Highlights

ಅಮೆರಿಕದ ಶಾಲೆಗಳಲ್ಲಿ ಮಾಸ್‌ ಶೂಟಿಂಗ್‌ನ ಘಟನೆಗಳ ನಂತರ ಸ್ಥಳೀಯ ಸರ್ಕಾರಗಳು, ಶಾಲೆಗಳಲ್ಲಿ ಪೊಲೀಸರನ್ನು ನಿಯೋಜಿಸಲು ಆರಂಭ ಮಾಡಿವೆ. ಇದರ ನಡುವೆ ಮಕ್ಕಳು, ಇದು ಶಾಲೆಯ ರೀತಿ ಕಾಣುತ್ತಿಲ್ಲ ಜೈಲಿನ ರೀತಿ ಅನಿಸುತ್ತಿದೆ ಎಂದಿದ್ದಾರೆ.

ಬಾಲ್ಟಿಮೋರ್‌, ಅಮೆರಿಕ (ಸೆ. 24): ಸಾಮೂಹಿಕ ಗುಂಡಿನ ದಾಳಿಯ ಘಟನೆಗಳ ನಂತರ ಅಮೆರಿಕದ ಶಾಲೆಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಆದರೆ, ಕೆಲವು ಶಾಲೆಗಳಲ್ಲಿ ಇದರ ವ್ಯತಿರಿಕ್ತ ಪರಿಣಾಮ ಮಕ್ಕಳ ಮೇಲೂ ಕಂಡು ಬರುತ್ತಿದೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧನೆಯು ಹೆಚ್ಚಿನ ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಯನ್ನು ನೋಡಿದಾಗ ಮಕ್ಕಳು ಶಾಲೆಯನ್ನು ಜೈಲು ಎಂದು ಭಾವಿಸುತ್ತಾರೆ ಎಂದು ಬಹಿರಂಗಪಡಿಸಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ಮಕ್ಕಳು ಶಾಲೆಗೆ ಬರುವುದನ್ನು ಕೂಡ ನಿಲ್ಲಿಸಿದ್ದಾರೆ. ಅಂತಹ ಮಕ್ಕಳು ಶಾಲೆಯಲ್ಲಿ ಉತ್ತೀರ್ಣರಾದ ನಂತರ ಕಾಲೇಜಿಗೆ ದಾಖಲಾಗುವುದಿಲ್ಲ ಮತ್ತು ಮುಂದೆ ತಮ್ಮ ಶಿಕ್ಷಣವನ್ನು ಮುಂದುವರಿಸುವುದಿಲ್ಲ. ಶಾಲೆಯಲ್ಲಿ ಹೆಚ್ಚಿನ ಭದ್ರತೆಯು ಮಕ್ಕಳ ಓದುವ ಮತ್ತು ಕಲಿಯುವ ಬಯಕೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ತುಂಬಾ ಭದ್ರತೆ ಮತ್ತು ಮೇಲ್ವಿಚಾರಣೆಯ ನಡುವೆ ಶಾಲೆಯ ಅನುಭವವು ತೊಂದರೆಗೊಳಗಾಗುತ್ತದೆ ಎಂದು ಮಕ್ಕಳು ಗುರುತಿಸಿದ್ದಾರೆ. ಸಂಶೋಧನೆಯಲ್ಲಿ ತೊಡಗಿದ್ದ ಓಡಿಸ್ ಜಾನ್ಸನ್ ಹೇಳುವಂತೆ ಮಕ್ಕಳಲ್ಲಿ ಶಾಲೆಗೆ ಹೋಗಲು ಈಗ ಭಯ ಪಡುತ್ತಿದ್ದಾರೆ. ಬಂದೂಕುಗಳನ್ನು ಹಿಡಿದು ನಿಂತಿರುವ ಪೊಲೀಸರ ಕಂಡ ಭಯ ಪಟ್ಟಿದ್ದಾರೆ  ಎಂದು ಹೇಳಿದ್ದಾರೆ.

ಸಂಶೋಧನೆಯ ಪ್ರಕಾರ, ಪೊಲೀಸರು ಕಪ್ಪು ವರ್ಣೀಯ ಮಕ್ಕಳನ್ನು ಶಾಲೆಗಳಲ್ಲಿ ಇತರ ಮಕ್ಕಳಿಗಿಂತ ನಾಲ್ಕು ಪಟ್ಟು ಹೆಚ್ಚು ಮೇಲ್ವಿಚಾರಣೆ ಮಾಡುತ್ತಾರೆ. ಶಾಲೆಯಲ್ಲಿ ಲೋಹ ಶೋಧಕಗಳ ಮೂಲಕ ಮಕ್ಕಳನ್ನು ಪರೀಕ್ಷಿಸಿ ಔಷಧ ಪರೀಕ್ಷೆಯನ್ನೂ ಮಾಡಲಾಗುತ್ತದೆ. ಇದೆಲ್ಲವೂ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಅಮೆರಿಕದ ಶಾಲೆಗಳಲ್ಲಿ ಸಾಲು ಸಾಲು ಮಾಸ್‌ ಶೂಟಿಂಗ್‌: ಕೆಲ ತಿಂಗಳ ಹಿಂದೆ ಅಮೆರಿಕದ ಟೆಕ್ಸಾಸ್‌ ರಾಜ್ಯದ ಯುವಾಲ್ಡೆ (Yuvalde) ಪ್ರಾಂತ್ಯದಲ್ಲಿದ್ದ ರಾಬ್‌ ಎಲಿಮೆಂಟರಿ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿತ್ತು. 18 ವರ್ಷದ ವ್ಯಕ್ತಿಯೊಬ್ಬ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ್ದ. 19 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಈ ವೇಳೆ ಸಾವು ಕಂಡಿದ್ದರು. ಗುಂಡಿನ ದಾಳಿಯಲ್ಲಿ 13 ಮಕ್ಕಳು, ಶಾಲಾ ಸಿಬ್ಬಂದಿ ಮತ್ತು ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ದಾಳಿಕೋರನು ಶಾಲೆಗೆ ಗುಂಡು ಹಾರಿಸುವ ಮೊದಲು ತನ್ನ ಅಜ್ಜಿಯ ಮೇಲೂ ಗುಂಡು ಹಾರಿಸಿದ್ದ. ಅವರನ್ನು ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು.

28 ವರ್ಷಗಳ ನಂತರ ಡೆನ್ಮಾರ್ಕ್‌ ಮಾಲ್‌ನಲ್ಲಿ ಶೂಟೌಟ್‌, ಮೂವರ ಹತ್ಯೆ!

2012ರಲ್ಲಿ ಅಮೆರಿಕದ ನ್ಯೂ ಟೌನ್‌ನಲ್ಲಿರುವ (USA New Town) ಸ್ಯಾಂಡಿ ಹುಕ್ ಶಾಲೆಯಲ್ಲಿ (Sandy Hook School) ಇದೇ ರೀತಿಯ ಗುಂಡಿನ ದಾಳಿ ನಡೆದಿದ್ದು, 26 ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ 20 ಶಾಲಾ ಮಕ್ಕಳು ಮತ್ತು 6 ಶಿಕ್ಷಕರು ಸೇರಿದ್ದರು. ಆ್ಯಡಮ್ ಲಾಂಜಾ (Adam Lanza) ಎಂಬ 20 ವರ್ಷದ ಕೊಲೆಗಾರ ಈ ದಾಳಿ ನಡೆಸಿದ್ದ. ಟೆಕ್ಸಾಸ್ ಘಟನೆ ಕೂಡ ಆ ಗುಂಡಿನ ದಾಳಿಯಂತೆಯೇ ಇತ್ತು. ನ್ಯೂಟೌನ್‌ನಲ್ಲಿ, ಆಡಮ್ ಲಾಂಜಾ ತನ್ನ ತಾಯಿಯನ್ನು ಕೊಂದ ನಂತರ ಶಾಲೆಯಲ್ಲಿ ಗುಂಡು ಹಾರಿಸಿದ್ದ. ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಟೆಕ್ಸಾಸ್  (Texas) ಗುಂಡಿನ ದಾಳಿಯಲ್ಲಿ, ದಾಳಿಕೋರನು ಶಾಲೆಗೆ ಬರುವ ಮೊದಲು ತನ್ನ ಅಜ್ಜಿಯನ್ನು ಗುಂಡು ಹಾರಿಸಿದ್ದ.

ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ; ಭಾರತೀಯ ಮೂಲದ ಸಿಖ್ ಸೇರಿ 9 ಮಂದಿ ಸಾವು!

ಈ ವರ್ಷ ಇಲ್ಲಿಯವರೆಗೆ, ಅಮೆರಿಕದಲ್ಲಿ 27 ಶಾಲೆಗಳಲ್ಲಿ ಗುಂಡಿನ ದಾಳಿ ನಡೆದಿದೆ.. ಅದೇ ಸಮಯದಲ್ಲಿ, ದೇಶಾದ್ಯಂತ 200 ಕ್ಕೂ ಹೆಚ್ಚು ಗುಂಡಿನ ಘಟನೆಗಳು ವರದಿಯಾಗಿವೆ. ನ್ಯಾಷನಲ್ ಗನ್ ವಯಲೆನ್ಸ್ ಮೆಮೋರಿಯಲ್ ನ ಮಾಹಿತಿಯ ಪ್ರಕಾರ, 2021 ರಲ್ಲಿ ಯುಎಸ್ ನಲ್ಲಿ 693, 2020 ರಲ್ಲಿ 611 ಮತ್ತು 2019 ರಲ್ಲಿ 417 ಗುಂಡಿನ ದಾಳಿಗಳು ನಡೆದಿವೆ. ಪ್ರತಿ ವರ್ಷ ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚುತ್ತಿವೆ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.

click me!