Asianet Suvarna News Asianet Suvarna News

28 ವರ್ಷಗಳ ನಂತರ ಡೆನ್ಮಾರ್ಕ್‌ ಮಾಲ್‌ನಲ್ಲಿ ಶೂಟೌಟ್‌, ಮೂವರ ಹತ್ಯೆ!

ಅಂದಾಜು 28 ವರ್ಷಗಳ ಬಳಿಕ ಡೆನ್ಮಾರ್ಕ್‌ನಲ್ಲಿ ಮಾಸ್‌ ಶೂಟೌಟ್‌ ವರದಿಯಾಗಿದ್ದು, ಭಾನುವಾರ ನಡೆದ ಘಟನೆಯಲ್ಲಿ ಈವರೆಗೂ ಮೂರು ಮಂದಿ ಸಾವನ್ನಪ್ಪಿದ್ದು, ನಾಲ್ಕಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕೂಪನ್‌ಹೆಗನ್ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 22 ವರ್ಷದ ಡೆನ್ಮಾರ್ಕ್ ಪ್ರಜೆಯ ಬಂಧನ ಮಾಡಲಾಗಿದೆ.

Shooting at a shopping mall in Copenhagen in Denmark Several victims reported to be injured san
Author
Bengaluru, First Published Jul 4, 2022, 9:27 AM IST

ನವದೆಹಲಿ (ಜುಲೈ 4): ಡೆನ್ಮಾರ್ಕ್ ರಾಜಧಾನಿ ಕೂಪನ್‌ ಹೆಗನ್‌ನ (copenhagen) ಜನನಿಬಿಡ ಶಾಪಿಂಗ್‌ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಶೂಟೌಟ್‌ ನಡೆಸಿರುವ ಘಟನೆ ಭಾನುವಾರ ನಡೆದಿದ್ದು, ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕಕ್ಕೂ ಅಧಿಕ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ 22 ವರ್ಷದ ಡೆನ್ಮಾರ್ಕ್ ಪ್ರಜೆ (Denmark Shooter) ಆಗಿರುವ ಶೂಟರ್‌ ಅನ್ನು ಬಂಧಿಸಲಾಗಿದೆ ಎಂದು ಕೂಪನ್‌ ಹೆಗನ್‌ ಪೊಲೀಸ್‌ ಮುಖ್ಯಸ್ಥ ಸೊರೆನ್‌ ಥಾಮಸ್ಸೆನ್ (Copenhagen police chief Soren Thomassen ) ತಿಳಿಸಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ ಈತನೊಬ್ಬನೇ ಇದ್ದು, ಬೇರೆಯವರು ಈ ಶೂಟೌಟ್‌ನಲ್ಲಿ ಭಾಗಿಯಾಗಿರುವ ಸಾಧ್ಯತೆ ಕಡಿಮೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣದ ಕುರಿತಾಗಿ ಇನ್ನೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ ಗನ್‌ ಹಿಂಸಾಚಾರ (Gun violence) ಡೆನ್ಮಾರ್ಕ್‌ನಲ್ಲಿ ಬಹಳ ಅಪರೂಪವಾಗಿದ್ದು, 28 ವರ್ಷದ ಬಳಿಕ ನಡೆದ ಪ್ರಕರಣ ಇದಾಗಿದೆ. 40 ವರ್ಷದ ವಯಸ್ಕ ವ್ಯಕ್ತಿ ಹಾಗೂ ಇಬ್ಬರು ಯುವಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಕಾಲಮಾನ ಮುಂಜಾನೆ 6 ಗಂಟೆಗೆ ಈ ಘಟನೆ ನಡೆದಿದೆ.

"ನಾವು ಬಂಧಿಸಿದ ವ್ಯಕ್ತಿಯೇ ಅಪರಾಧಿ ಎಂದು ನಮಗೆ ಮನವರಿಕೆಯಾಗಿದೆ" ಎಂದು ಥಾಮಸ್ಸೆನ್ ಹೇಳಿದ್ದಾರೆ "ಅವನ ಬಳಿ ರೈಫಲ್ ಇದೆ. ಆ ರೈಫಲ್‌ಗಾಗಿ ಅವನ ಬಳಿ ಮದ್ದುಗುಂಡುಗಳು ಇದ್ದವು." ಎಂದು ತಿಳಿಸಿದ್ದಾರೆ.

ಡ್ಯಾನಿಶ್ ರಾಜಧಾನಿಯ ಹೊರವಲಯದಲ್ಲಿರುವ ಸ್ಕ್ಯಾಂಡಿನೇವಿಯಾದ ಅತಿದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ಒಂದಾದ ಫೀಲ್ಡ್ಸ್‌ನಲ್ಲಿ ನಡೆದ ಶೂಟಿಂಗ್‌ನ ಉದ್ದೇಶವನ್ನು ಇಷ್ಟ ಬೇಗನೆ ಊಹೆ ಮಾಡಲು ಸಾಧ್ಯವಿಲ್ಲ ಎಂದು ಥಾಮಸ್ಸೆನ್ ತಿಳಿಸಿದ್ದಾರೆ. ಶಾಪಿಂಗ್‌ ಮಾಲ್‌ನಲ್ಲಿ ಗುಂಡಿನ ಮೊರೆತ ಕೇಳಿದಾಗ ಕೆಲವರು ಅಂಗಡಿಗಳಲ್ಲಿಯೇ ಅಡಗಿಕೊಂಡರೆ, ಇನ್ನೂ ಕೆಲವರು ಭಯಭೀತರಾಗಿ ಓಡಿಹೋದರು. ಈ ವೇಳೆ ಕಾಲ್ತುಳಿತವೂ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತನಾಗಿರುವ 22 ವರ್ಷದ ವ್ಯಕ್ತಿ, ಸಂಪ್ರದಾಯವಾದಿ ಡ್ಯಾನಿಷ್‌ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೆ, ಹಿಂದೆ ಯಾವುದೇ ಇಂಥ ಘಟನೆಗಳಲ್ಲಿ ಭಾಗಿಯಾಗದ ವ್ಯಕ್ತಿ ಇವನಾಗಿರಲಿಲ್ಲ. ಇನ್ನು ಡೆನ್ಮಾರ್ಕ್‌ನ ಸೋಷಿಯಲ್‌ ಮೀಡಿಯಾಗಳಲ್ಲಿ ಜನಾಂಗೀಯ ಕಾರಣಕ್ಕಾಗಿ ಈ ಘಟನೆ ನಡೆದಿರುವ ಸಾಧ್ಯತೆ ಅಧಿಕವಾಗಿದೆ. ಆದರೆ, ತನಿಖೆಯ ಆರಂಭಿಕ ಹಂತದಲ್ಲಿ ಇಂಥ ಯಾವುದೇ ಕಾರಣಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಶಾಲಾ ಶೂಟೌಟ್‌ ಪ್ರಕರಣಗಳಿಂದ ಎಚ್ಚೆತ್ತ ದೊಡ್ಡಣ್ಣ, ಅಮೆರಿಕದಲ್ಲಿ ಗನ್‌ಗಳಿಗೆ ಲಗಾಮು!

ನೆರೆಯ ನಾರ್ವೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಒಂದು ವಾರದ ನಂತರ ಈ ಗುಂಡಿನ ದಾಳಿ ನಡೆದಿದೆ, ಇರಾನ್ ಮೂಲದ ನಾರ್ವೇಜಿಯನ್ ವ್ಯಕ್ತಿಯೊಬ್ಬರು ಎಲ್‌ಜಿಬಿಟಿಕ್ಯು ಕಾರ್ಯಕ್ರಮದ ಸಂದರ್ಭದಲ್ಲಿ ಗುಂಡು ಹಾರಿಸಿ ಇಬ್ಬರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. 2015ರ ಫೆಬ್ರವರಿಯಲ್ಲಿ ಡೆನ್ಮಾರ್ಕ್‌ನಲ್ಲಿ ಇಂಥ ಘಟನೆ ನಡೆಸಿತ್ತು. ಅಂದು ಪೊಲೀಸರರೊಂದಿಗೆ ನಡೆದ ಚಕಮಕಿ ಅದಾಗಿತ್ತು. ಆಗ ಇಬ್ಬರು ಸಾವನ್ನಪ್ಪಿದ್ದರೆ, ಐದು ಮಂದಿ ಪೊಲೀಸರು ಗಾಯಗೊಂಡಿದ್ದರು. 22 ವರ್ಷದ ದಾಳಿಕೋರ ಸಾವನ್ನಪ್ಪಿದ್ದ.

ಅಮೆರಿಕ ಶೂಟೌಟ್‌: 8 ಮೃತರ ಪೈಕಿ ನಾಲ್ವರು ಭಾರತೀಯ ಮೂಲದವರು!

ಬ್ರಿಟೀಷ್ ಗಾಯಕ ಹ್ಯಾರಿ ಸ್ಟೈಲ್ಸ್ (Harry Styles) ಅವರು ಕೂಪನ್‌ ಹೆಗನ್‌ನ ಭೀಕರ ಶಾಪಿಂಗ್ ಸೆಂಟರ್ ಶೂಟೌಟ್ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದನ್ನು "ಹೃದಯವಿದ್ರಾವಕ" ಎಂದು ಹೇಳಿದ್ದಾರೆ. ಭಾನುವಾರ ಸಂಜೆ ಹ್ಯಾರಿ ಸ್ಟೈಲ್ಸ್ ಕೂಪನ್‌ ಹೆಗನ್‌ನಲ್ಲಿ ಕಾರ್ಯಕ್ರಮ ನೀಡಬೇಕಾಗಿದ್ದ ಸ್ಥಳದಿಂದ 1 ಮೈಲಿಗಿಂತ ಕಡಿಮೆ ದೂರದಲ್ಲಿರುವ ಶಾಪಿಂಗ್ ಸೆಂಟರ್‌ನಲ್ಲಿ ಈ ದಾಳಿ ನಡೆದಿದೆ. ಈ  ದಾಳಿಯ ನಂತರ 28 ವರ್ಷ ವಯಸ್ಸಿನ ಮಾಜಿ ಒನ್ ಡೈರೆಕ್ಷನ್ ಸ್ಟಾರ್ ಅವರ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಘೋಷಣೆ ಆಗುವ ವೇಳೆ ರಾಯಲ್‌ ಅರೇನಾದಲ್ಲಿ ಆಗಾಗಲೇ 17 ಸಾವಿರ ಜನ ಸೇರಿದ್ದರು. ಈ ಕುರಿತು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸ್ಟೈಲ್ಸ್ ಅವರು ಡ್ಯಾನಿಶ್ ರಾಜಧಾನಿ ಮತ್ತು ಅಲ್ಲಿನ ನಿವಾಸಿಗಳಿಗೆ ಕ್ಷೇಮವಾಗಿರುವಂತೆ ಹೇಳಿದ್ದು. ಈ ಘಟನೆ "ಹೃದಯವಿದ್ರಾವಕ" ಎಂದು ಹೇಳಿದರು "ಸಂತ್ರಸ್ತರು, ಅವರ ಕುಟುಂಬಗಳು ಮತ್ತು ನೋವಿನಲ್ಲಿರುವ ಪ್ರತಿಯೊಬ್ಬರ ಜೊತೆಗೂ ನಾನಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios