
ಕರಾಚಿ: ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಇಳಿದಿರುವುದು ಎಲ್ಲರಿಗೂ ಗೊತ್ತೆ ಇದೆ. ಹಣದುಬ್ಬರ ಹಾಗೂ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿನ ಬಡ ಜನರು ತುತ್ತು ಅನ್ನಕ್ಕೂ ಸಂಕಷ್ಟ ಪಡುತ್ತಿದ್ದಾರೆ. ಹೀಗಿರುವಾಗ ಆರ್ಥಿಕತೆಯನ್ನು ಹತೋಟಿಯಲ್ಲಿಡಬೇಕಾದಂತಹ ಪಾಕಿಸ್ತಾನದ ರಾಷ್ಟ್ರೀಯ ಬ್ಯಾಂಕೇ ದೊಡ್ಡ ಎಡವಟ್ಟು ಮಾಡಿದ್ದು, ಇದರ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರಾಚಿಯ ನ್ಯಾಷನಲ್ ಬ್ಯಾಂಕ್ (National Bank of Pakistan) ಬ್ರಾಂಚ್‌ಗೆ 1000 ರೂಪಾಯಿ ನೋಟಿನ ಬಂಡಲ್ ಒಂದು ಬಂದಿದ್ದು, ಅದರ ಒಂದು ಕಡೆ ನೋಟಿನ ಪ್ರಿಂಟೇ ಇಲ್ಲದಾಗಿದೆ. ಪಾಕಿಸ್ತಾನ ಸ್ಟೇಟ್ ಬ್ಯಾಂಕ್ ಪ್ರಿಂಟ್ ಮಾಡಿದ ನೋಟುಗಳು ಇದಾಗಿದೆ. ಕರಾಚಿಯ ನ್ಯಾಷನಲ್ ಬ್ಯಾಂಕ್ ಬ್ರಾಂಚ್‌ನಲ್ಲಿ ಈ ಘಟನೆ ನಡೆದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಾಕಿಸ್ತಾನದ ಆರ್ಥಿಕ ಸ್ಥಿರತೆಯ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಅಲ್ಲದೇ ದೇಶದ ಆರ್ಥಿಕತೆಯನ್ನು ನಿರ್ಧರಿಸುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ಈ ನಿರ್ಲಕ್ಷ್ಯ ಕಂಡು ಬಂದಿದ್ದು, ಕಳವಳಕಾರಿಯಾಗಿದೆ. ಪಾಕಿಸ್ತಾನದ ಎಆರ್‌ವೈ ನ್ಯೂಸ್ ವರದಿಯ ಪ್ರಕಾರ, ವಿಡಿಯೋದಲ್ಲಿ ಬ್ಯಾಂಕ್ ಮ್ಯಾನೇಜರ್ ಒಂದು ಕಡೆ ಪ್ರಿಂಟೇ ಆಗದ ನೋಟುಗಳನ್ನು ತೋರಿಸುತ್ತಿದ್ದಾರೆ. ತಪ್ಪಾಗಿ ಪ್ರಿಂಟ್ ಆದ ಈ ನೋಟಿನ ಬಂಡಲ್ ಇಂದು ಬೆಳಗ್ಗೆ ಬಂದಿದೆ ನೋಟಿನ ಒಂದು ಭಾಗ ಸಂಪೂರ್ಣ ಪ್ರಿಂಟ್ ಆಗಿದ್ದರೆ, ಮತ್ತೊಂದು ಸೈಡ್ ಸಂಪೂರ್ಣ ಖಾಲಿಯಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.
ಬ್ಯಾಂಕ್‌ನ ಗ್ರಾಹಕರೊಬ್ಬರು ಹೀಗೆ ತಪ್ಪು ತಪ್ಪಾಗಿ ಪ್ರಿಂಟ್ ಆದ ನೋಟುಗಳನ್ನು ಬ್ಯಾಂಕ್‌ನ ಸಿಬ್ಬಂದಿಗೆ ಇಂದು ಮುಂಜಾನೆ ಹಿಂದಿರುಗಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಹೊಸದಾಗಿ ಪ್ರಿಂಟ್ ಆಗಿರುವ 1000 ರೂಪಾಯಿ ಮುಖ ಬಲೆಯ ಎಲ್ಲಾ ನೋಟುಗಳು ಕೇವಲ ಒಂದು ಬದಿ ಮಾತ್ರ ಪ್ರಿಂಟ್ ಆಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈ ಬಗ್ಗೆ ವಿಭಾಗೀಯ ವಿಚಾರಣೆ ಮಾಡಲಾಗುವುದು ಎಂದು ಕೇಂದ್ರ ಬ್ಯಾಂಕ್‌ನ ವಕ್ತಾರರು ಹೇಳಿದ್ದಾರೆ.
ಈ ಘಟನೆಯು ಪಾಕಿಸ್ತಾನದ ಕರೆನ್ಸಿಗೆ ಸಂಬಂಧಿಸಿದಂತೆ ಆತಂಕಕಾರಿ ವಿಚಾರವಾಗಿದೆ. ಕಳೆದ ವರ್ಷವಷ್ಟೇ, ಸೆನೆಟ್‌ನ ಹಣಕಾಸು ಸ್ಥಾಯಿ ಸಮಿತಿಯು 5000 ರೂಪಾಯಿಗಳ ನಕಲಿ ನೋಟುಗಳ ಚಲಾವಣೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು, ಎಸ್‌ಬಿಪಿಯ ಅಧಿಕಾರಿಗಳು ಸಹ ನಕಲಿ ಯಾವುದು ಅಸಲಿ ಯಾವುದು ಎಂದು ಅವುಗಳನ್ನು ಗುರುತಿಸಲು ವಿಫಲರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ