Texas Shooting: ಮಗನನ್ನು ಜಡ್ಜ್‌ ಮಾಡಬೇಡಿ, ಅವನಿಗೆ ತನ್ನದೇ ಕಾರಣಗಳಿತ್ತು: 19 ಮಂದಿಯ ಬಲಿ ಪಡೆದಾತನ ತಾಯಿ ಮಾತು!

By Suvarna NewsFirst Published May 28, 2022, 5:04 PM IST
Highlights

* ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ ನಡೆಸಿ 19 ಮಂದಿ ಬಲಿ ಪಡೆದ ಯುವಕ

* ಮಗನನ್ನು ಕ್ಷಮಿಸಿ ಎಂದ ತಾಯಿ

* ಮಗನನ್ನು ಜಡ್ಜ್‌ ಮಾಡಬೇಡಿ, ಅವನಿಗೆ ತನ್ನದೇ ಕಾರಣಗಳಿದ್ದವು

ಟೆಕ್ಸಾಸ್‌(ಮೇ.28): 18 ವರ್ಷದ ಸಾಲ್ವಡಾರ್ ರಾಮೋಸ್ ಎಂಬಾತ ಯುಎಸ್‌ನ ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯ 19 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದ ವಿಚಾರ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಆದರೀಗ ಈ ಪ್ರಕರಣದ ಬೆನ್ನಲ್ಲೇ ಶೂಟಿಂಗ್ ನಡೆಸಿದ್ದಾತನ ತಾಯಿ ಆಡ್ರಿಯಾನಾ ಮಾರ್ಟಿನೆಜ್ ಶುಕ್ರವಾರ ಸಂದರ್ಶನವೊಂದರಲ್ಲಿ ತನ್ನ ಮಗನನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ

ಸಂದರ್ಶನವೊಂದರಲ್ಲಿ ಕಣ್ಣೀರು ಸುರಿಸುತ್ತಾ ಈ ಬಗ್ಗೆ ಕೇಳಿಕೊಂಡ ಆ ತಾಯಿ, “ನನ್ನನ್ನು ಕ್ಷಮಿಸಿ, ನನ್ನ ಮಗನನ್ನು ಕ್ಷಮಿಸಿ. ಅವನ ಈ ನಡೆಗೆ ಕೆಲ ಕಾರಣಗಳಿವೆ ಎಂದು ನನಗೆ ತಿಳಿದಿದೆ. ದಯವಿಟ್ಟು ಅವನನ್ನು ಜಡ್ಜ್‌ ಮಾಡಬೇಡಿ. ಆ ಮುಗ್ಧ ಮಕ್ಕಳು ನನ್ನನ್ನು ಕ್ಷಮಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಮಗನ ಈ ನಡೆಗೇನು ಕಾರಣ ಎಂದು ಪ್ರಶ್ನಿಸಿದಾಗ "ನನಗೆ ಗೊತ್ತಿಲ್ಲ, ನನ್ನ ಬಳಿ ಪದಗಳಿಲ್ಲ" ಎಂದು ಹೇಳಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ. 

ನನ್ನನ್ನೂ ಕೊಲ್ಲಬೇಕಿತ್ತು ಎಂದ ಸಾಲ್ವಡಾರ್ ರಾಮೋಸ್ ತಂದೆ

ಡೈಲಿ ಬೀಸ್ಟ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ, ಬಂದೂಕುಧಾರಿಯ ತಂದೆ, "ನನ್ನ ಮಗ ಏನೇ ಮಾಡಿದರೂ ಕ್ಷಮಿಸಿ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ. ನನ್ನ ಮಗ ಈ ರೀತಿ ಮಾಡುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಯಾರಿಗಾದರೂ ಈ ರೀತಿ ಮಾಡುವ ಬದಲು ಅವನು ನನ್ನನ್ನೇ ಕೊಲ್ಲಬೇಕಾಗಿತ್ತು ಎಂದಿದ್ದಾರೆ

ಈ ಘಟನೆ ಸಂಭವಿಸಿದಾಗ, ರಾಮೋಸ್ ಅವರ 42 ವರ್ಷದ ತಂದೆ ಕೆಲಸದಲ್ಲಿದ್ದರು ಎಂಬುವುದು ಉಲ್ಲೇಖನೀಯ. ಘಟನೆಯ ಬಗ್ಗೆ ಅವರ ತಾಯಿಗೆ ತಿಳಿದಾಗ, ಅವರು ಮೊದಲು ಸ್ಥಳೀಯ ಜೈಲಿಗೆ ಕರೆ ಮಾಡಿ ತನ್ನ ಮಗ ಅಲ್ಲಿದ್ದಾನಾ ಎಂದು ಕೇಳಿದ್ದಾರೆ. ಹೀಗಾಗಿ ಅವರ ಮಗ ಇಂತಹುದ್ದೊಂದು ಕೃತ್ಯ ಎಸಗಿದ್ದಾನೆಂದು ಜೈಲಿನಿಂದ ಮಾಹಿತಿ ಸಿಕ್ಕಿದೆ. 

ಮಂಗಳವಾರ ಶಾಲೆಯಲ್ಲಿ ಪ್ರತಿಕ್ರಿಯಿಸಿದ ಅಧಿಕಾರಿಗಳು ಸಾಲ್ವಡಾರ್ ರಾಮೋಸ್‌ನನ್ನು ಅಲ್ಲೇ ಗುಂಡಿಕ್ಕಿ ಕೊಂದಿದ್ದರು. ಹೀಗಿರುವಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಾಲ್ವಡಾರ್‌ ರಾಮೋಸ್‌ ತಂದೆ "ನಾನು ಮತ್ತೆ ನನ್ನ ಮಗನನ್ನು ನೋಡಲು ಸಾಧ್ಯವಿಲ್ಲ, ಈ ವಿಚಾರ ನನಗೆ ನೋವುಂಟು ಮಾಡುತ್ತದೆ." ಎಂದಿದ್ದಾರೆ. 

ಘಟನೆ ಹಿನ್ನೆಲೆ:

ಯುವಾಲ್ಡೆ ನಗರದಲ್ಲಿ ವೃದ್ಧೆಯೊಬ್ಬಳ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಬೆಳಗ್ಗೆ 9.30ರ ವೇಳೆಗೆ ಪೊಲೀಸರಿಗೆ ಕರೆ ಹೋಗಿದೆ. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿಂದ ಆಕೆಯ ಮೊಮ್ಮಗ ಸಾಲ್ವಡೋರ್‌ ರಾಮೋಸ್‌ ಪರಾರಿಯಾಗಿದ್ದಾನೆ. ಈ ನಡುವೆ 11.30ರ ವೇಳೆಗೆ ಮತ್ತೊಂದು ಕರೆ ಸ್ವೀಕರಿಸಿದ ಪೊಲೀಸರು ನಗರದ ರೋಬ್‌ ಎಲಿಮೆಂಟರಿ ಸ್ಕೂಲ್‌ ಬಳಿ ವಾಹನವೊಂದು ಕಂದಕಕ್ಕೆ ಬಂದು ಜೋರಾಗಿ ಅಪ್ಪಳಿಸಿದೆ ಎಂದು ಮಾಹಿತಿ ಪಡೆದಿದ್ದಾರೆ.

ಈ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ತೆರಳುವ ವೇಳೆ, ಕಂದಕದಲ್ಲಿ ಬಿದ್ದ ವಾಹನದಿಂದ ಎದ್ದುಬಂದ ಸಾಲ್ವಡೋರ್‌ ತನ್ನ ಬಳಿ ಇದ್ದ ನುಗ್ಗಿ ಎಆರ್‌-15 ಸೆಮಿ ಆಟೋಮೆಟಿಕ್‌ ಗನ್‌ನಿಂದ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಗುಂಡಿನ ದಾಳಿಗೆ ಸಿಕ್ಕಿ 19 ಮಕ್ಕಳು ಮತ್ತು ಇಬ್ಬರು ಹಿರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪ್ರತಿದಾಳಿ ಪಡೆಗಳು ಸ್ಥಳಕ್ಕೆ ಧಾವಿಸಿ ದಾಳಿಕೋರನ ಮೇಲೆ ಗುಂಡಿನ ದಾಳಿ ನಡೆಸಿ ಆತನನ್ನು ಹತೈಗೈದಿವೆ.

ಜೊತೆಗೆ ದಾಳಿಕೋರನ ಗುಂಡಿಗೆ ಇಬ್ಬರು ಭದ್ರತಾ ಸಿಬ್ಬಂದಿ ಕೂಡಾ ಗಾಯಗೊಂಡಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಪುಟ್ಟಮಕ್ಕಳು:

ರಾಬ್‌ ಎಲಿಮೆಂಟರಿ ಶಾಲೆಯಲ್ಲಿ 7ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಮೃತ ಪಟ್ಟಮಕ್ಕಳು 2,3,4ನೇ ತರಗತಿಯ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯ ಸುದ್ದಿ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಉಳಿದ ಮಕ್ಕಳಿಗೆ ರಕ್ಷಣೆ ನೀಡಿ ಅವರನ್ನು ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ರವಾನಿಸುವಲ್ಲಿ ನೆರವಾಗಿದ್ದಾರೆ. ಹೀಗಾಗಿ ಮತ್ತಷ್ಟುದೊಡ್ಡ ಅನಾಹುತ ತಪ್ಪಿದೆ.

ಪೋಷಕರ ಆಕ್ರಂದನ:

ಗುಂಡಿನ ದಾಳಿಯ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಪೋಷಕರು ತಮ್ಮ ಮಕ್ಕಳನ್ನು ಕಾಣಲಾಗದೇ ಗೋಳಿಡುತ್ತಿದ್ದ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ತಮ್ಮ ಮಕ್ಕಳು ಬದುಕಿದ್ದಾರೋ ಇಲ್ಲವೋ, ಅವರ ಪರಿಸ್ಥಿತಿ ಏನೆಂದೂ ತಿಳಿಯದೇ ಮಾಹಿತಿಗಾಗಿ ಒದ್ದಾಡುತ್ತಿದ್ದ ದೃಶ್ಯಗಳೂ ಕಂಡುಬಂದವು.

ವಿನಾಶಕಾರಿ ಘಟನೆ:

2012ರಲ್ಲಿ ಕನೆಕ್ಟಿಕಿಟ್‌ ರಾಜ್ಯದಲ್ಲಿ ನಡೆದ ದಾಳಿಯೊಂದರಲ್ಲಿ 20 ಮಕ್ಕಳು ಮತ್ತು 6 ಶಾಲಾ ಸಿಬ್ಬಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ ಅಮೆರಿಕ ಕಂಡ ಅತ್ಯಂತ ಘೋರವಾದ ಶಾಲಾ ಶೂಟೌಟ್‌ ಘಟನೆ ಇದಾಗಿದೆ.

ಶಾಲೆಯಲ್ಲಿ ಬೈಗುಳ, ವ್ಯಂಗ್ಯಕ್ಕೆ ತುತ್ತಾಗಿದ್ದ ದಾಳಿಕೋರ

 

21 ಜನರನ್ನು ಕೊಂದು, ಕೊನೆಗೆ ತಾನೂ ಗುಂಡಿಗೆ ಬಲಿಯಾದ ಸಾಲ್ವಡೋರ್‌ ರಾಮೋಸ್‌ನ ಜೀವನ ಸುಖಮಯವಾಗಿರಲಿಲ್ಲ ಎಂದು ಸ್ನೇಹಿತರು, ಆಪ್ತರು, ಆತನ ಬಗ್ಗೆ ಮಾಹಿತಿ ಹೊಂದಿದ್ದವರು ವಿವರಿಸಿದ್ದಾರೆ.

ಮಾತನಾಡುವ ವೇಳೆ ಸಮಸ್ಯೆಯನ್ನು ಎದುರಿಸುತ್ತಿದ್ದ ಸಾಲ್ವಡೋರ್‌ ಇದೇ ಕಾರಣಕ್ಕೆ ಬಾಲ್ಯದಲ್ಲಿ ಶಾಲೆಯಲ್ಲಿ ಸಾಕಷ್ಟುತೊಂದರೆ ಎದುರಿಸಿದ್ದ. ಸಹಪಾಠಿಗಳಿಂದ ವ್ಯಂಗ್ಯಕ್ಕೆ ತುತ್ತಾಗಿದ್ದ. ಜೊತೆಗೆ ಮನೆಯಲ್ಲೂ ಪರಿಸ್ಥಿತಿ ಉತ್ತಮವಾಗಿ ಇರಲಿಲ್ಲ. ಪರಿಣಾಮ ಎಂಬಂತೆ ಅಪರಿಚಿತರು ಮತ್ತು ಹಿರಿಯರ ಮೇಲೆ ಪದೇ ಪದೇ ಸುಮ್ಮನೆ ಕೋಪಗೊಳ್ಳುತ್ತಿದ್ದ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.

ಫಾಸ್ಟ್‌ ಫುಡ್‌ ಶಾಪ್‌ನಲ್ಲಿ ಮ್ಯಾನೇಜರ್‌

ಹಾಲಿ ಸಾಲ್ವಡೋರ್‌ ವೆಂಡಿ ಎಂಬ ಫಾಸ್ಟ್‌ ಫುಡ್‌ ಶಾಪ್‌ನಲ್ಲಿ ರಾತ್ರಿ ಪಾಳಿಯಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಯಾರೊಂದಿಗೂ ಅಷ್ಟುಬೆರೆಯುತ್ತಿರಲಿಲ್ಲ. ಏಕಾಂಗಿಯಾಗಿ ಇರುತ್ತಿದ್ದ ಎಂದು ಆತನ ಜೊತೆ ಕೆಲಸ ಮಾಡುತ್ತಿದ್ದವರು ಹೇಳಿದ್ದಾರೆ.

ನನ್ನನ್ನೂ ಕೊಲ್ಲಬೇಕಿತ್ತು ಎಂದ ಸಾಲ್ವಡಾರ್ ರಾಮೋಸ್ ತಂದೆ

ಅಮೆರಿಕದ ಟೆಕ್ಸಾಸ್‌ನ ಶಾಲೆಯಲ್ಲಿ ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾಗಿದ್ದ ಶಿಕ್ಷಕಿಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಶುಕ್ರವಾರ ವರದಿಯಾಗಿದೆ.

4 ನೇ ತರಗತಿಯ ಮಕ್ಕಳ ಮೇಲೆ ದುಷ್ಕರ್ಮಿಯು ಗುಂಡು ಹಾರಿಸಲು ಮುಂದಾದಾಗ ಅವರನ್ನು ರಕ್ಷಿಸಲು ಹೋಗಿ ಮೃತಪಟ್ಟಶಿಕ್ಷಕಿ ಇಮ್ರಾ ಗಾರ್ಸಿಯಾ ಸಾವಿನ ಸುದ್ದಿಯಿಂದ ಅವರ ಪತಿ ಜೋಯ್‌ ಕುಗ್ಗಿ ಹೋಗಿದ್ದರು. ಇದರಿಂದಲೇ ಹೃದಯಾಘಾತವಾಗಿ, ಅವರು ಮೃತಪಟ್ಟಿದ್ದಾರೆ ಎಂದು ಇಮ್ರಾ ಸಂಬಂಧಿ ಪೋಸ್ಟ್‌ ಮಾಡಿದ್ದಾರೆ.

ಮೇ 26 ರಂದು ರಾಮೋಸ್‌ ಎಂಬ ವ್ಯಕ್ತಿಯು ಇದ್ದಕ್ಕಿದ್ದಂತೇ ಶಾಲೆಗೆ ನುಗ್ಗಿ ಮಕ್ಕಳು ಸೇರಿದಂತೆ 21 ಜನರನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

click me!