ಮಕ್ಕಳ ಹತ್ತಿರದಲ್ಲಿರಲೆಂದು ಊರವರೆಲ್ಲಾ ಸೇರಿ ವೃದ್ಧನ ಮನೆಯನ್ನೇ ಹೊತ್ತರು

By Anusha KbFirst Published Dec 1, 2022, 10:12 PM IST
Highlights

ಆಧುನಿಕತೆಯ ಗಂಧಗಾಳಿಯೇ ಇಲ್ಲದ ಹಳಿಯೊಂದರಲ್ಲಿ ವೃದ್ಧನೋರ್ವ ಏಕಾಂಗಿಯಾಗಿದ್ದಾನೆ ಎಂದು ಇಡೀ ಊರ ಮಂದಿ ಜೊತೆಯಾಗಿ ಸೇರಿ ಆತನ ಮನೆಯನ್ನೇ ಆತನ ಬಂಧುಗಳಿರುವಲ್ಲಿಗೆ ಹೊತ್ತು ಸಾಗಿಸಿದ್ದಾರೆ.

ಅಧುನಿಕತೆಯ ಭರಾಟೆಗೆ ಸಿಲುಕಿ ಮನುಷ್ಯರಿಗೆ ಮನುಷ್ಯರ ಮೇಲೆ ಪ್ರೀತಿ ಮಮತೆ ಕರುಣೆ ಎಲ್ಲವೂ ಕೃತಕವಾಗಿರುವ ಇಂತಹ ಸಂದರ್ಭದಲ್ಲಿ ಆಧುನಿಕತೆಯ ಗಂಧಗಾಳಿಯೇ ಇಲ್ಲದ ಹಳಿಯೊಂದರಲ್ಲಿ ವೃದ್ಧನೋರ್ವ ಏಕಾಂಗಿಯಾಗಿದ್ದಾನೆ ಎಂದು ಇಡೀ ಊರ ಮಂದಿ ಜೊತೆಯಾಗಿ ಸೇರಿ ಆತನ ಮನೆಯನ್ನೇ ಆತನ ಬಂಧುಗಳಿರುವಲ್ಲಿಗೆ ಹೊತ್ತು ಸಾಗಿಸಿದ್ದಾರೆ. ಇದರ ವಿಡಿಯೋವೊಂದು ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ವೈರಲ್ ಅಗುತ್ತಿದೆ. 

ಸದಾ ಕಾಲ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಗುಡ್‌ನ್ಯೂಸ್ ಮೂವ್‌ಮೆಂಟ್ (Good News Movement) ಎಂಬ ಇನ್ಸ್ಟಾಗ್ರಾಮ್ ಪೇಜ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮಿಲಿಯನ್‌ಗೂ ಹೆಚ್ಚುಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಮನೆಯ ಕೆಳಭಾಗಕ್ಕೆ ಬಡಿಗೆಗಳನ್ನು ಕಟ್ಟಿದ ಜನ ಒಂದೊಂದು ಬಡಿಗೆಗೆ ಒಬ್ಬೊಬ್ಬರಂತೆ ನಿಂತು ಒಟ್ಟು 24 ಜನ ಈ ಮನೆಯನ್ನು ಸಾಗಿಸುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಹಾಗಂತ ಇದೇನು ಸಿಮೆಂಟ್ (Cement) ಕಬ್ಬಿಣದಿಂದ ನಿರ್ಮಿಸಿದ ತಾರಸಿ ಮನೆಯಲ್ಲಾ ಕಬ್ಬಿಣದ ತಗಡು, ಅಡಿಕೆ ಮರದ ತಟ್ಟೆ ಮುಂತಾದವುಗಳಿಂದ ನಿರ್ಮಿಸಿದ ಮನೆ. ಇದನ್ನು ಬಡಿಗೆ ಕಟ್ಟಿ ಇಡೀ ಮನೆಯನ್ನೇ ಹೆಗಲ ಮೇಲೇರಿಸಿ ಇವು ಮುಂದೆ ಸಾಗುತ್ತಾರೆ. ಒಟ್ಟು 24 ಜನ ಈ ಮನೆ ಸ್ಥಳಾಂತರ ಕಾರ್ಯದಲ್ಲಿ ಭಾಗಿಯಾಗಿದ್ದು, ಇವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

ಕಲ್ಲು ಮುಳ್ಳುಗಳಿಂದ ಕೂಡಿದ ಮಣ್ಣು ರಸ್ತೆಯಲ್ಲಿ (Dirt road) ಈ ಜನರು 7 ಅಡಿಗಿಂತಲೂ ಅಧಿಕ ಎತ್ತರದ ಶೆಡ್‌ನಂತಿರುವ ಈ ಮನೆಯನ್ನು ಹೊತ್ತು ಸಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಫಿಲಿಫೈನ್ಸ್‌ನ (Philippines) ಝಂಬೊಂಗ ಡೆಲ್ ನೊರ್ಟೆ (Zamboanga del Norte) ಎಂಬಲ್ಲಿ. ಹೀಗೆ ಇಡೀ ಮನೆಯನ್ನು ನಿಗದಿತ ಸ್ಥಳ ತಲುಪಿಸಲು ಅವರಿಗೆ ಸುಮಾರು ಎರಡು ಗಂಟೆಗಳ ಅವಧಿ ಹಿಡಿದಿದೆ. ಸುಮಾರು ಎರಡು ಡಜನ್ ಮಂದಿ ಜೊತೆಯಾಗಿ ಈ ಮನೆಯನ್ನು ಹೊತ್ತು ಸಾಗಿದ್ದಾರೆ.

ಹೆರಿಗೆ ಸಂಕಟ: ಹೆರಿಗೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ರೈಲ್ವೆ ಪೊಲೀಸ್

ಯಾಕೆ ಹೀಗೆ ಮನೆಯನ್ನೇಕೆ ಹೊತ್ತು ಸಾಗಿದರು ಊರ ಜನ ಎಂದು ಕೇಳಿದರೆ ಅವರು ಹೇಳುವುದು ಹೀಗೆ, ಅವರೊಬ್ಬರು ವಯೋವೃದ್ಧ, ಅವರು ತಮ್ಮ ಮೊಮ್ಮಕ್ಕಳ ಜೊತೆ ಇರಲು ಬಯಸಿದ್ದರು. ಆದರೆ ಅವರಿದ್ದ ಪ್ರದೇಶದಿಂದ ಮೊಮ್ಮಕ್ಕಳಿದ್ದ ಪ್ರದೇಶ ಬಲು ದೂರವಿತ್ತು. ಹೀಗಾಗಿ ವೃದ್ಧರಾಗಿರುವ ಅವರು ತಮ್ಮ ಆಶಯದಂತೆ ತಮ್ಮ ಮೊಮ್ಮಕ್ಕಳಿರುವ ಪ್ರದೇಶದಲ್ಲಿ ಜೊತೆಯಲ್ಲಿರುವಂತೆ ಮನೆಯನ್ನೇ ಶಿಫ್ಟ್ ಮಾಡಿದ್ದಾಗಿ ಹೇಳಿದ್ದಾರೆ. ಹೀಗೆ ಮನೆ ಹೊತ್ತು ಸಾಗಿದವರಿಗೆ ಊರವರು ಬೊಬ್ಬೆ ಹೊಡೆದು  ಪ್ರೋತ್ಸಾಹಿಸಿದ್ದಾರೆ. ಅಲ್ಲದೇ ದಾರಿಮಧ್ಯೆ ಈ ಜನರು ಅಲ್ಲಲ್ಲಿ ಬ್ರೇಕ್ ತೆಗೆದುಕೊಂಡು ತಮ್ಮ ಈ ಕಾರ್ಯವನ್ನು ಮತ್ತಷ್ಟು ಅಪೂರ್ವವಾಗಿಸಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಜ್ಜನ ನೆರೆಹೊರೆಯ ಮನೆಯವರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ನಿಜವಾಗಿಯೂ ಚಲಿಸುವ ಮನೆ ಎಂದು ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Har Ghar Tiranga: ಏಕಾಂಗಿ ವೃದ್ಧನಿಗೆ ಮನೆ ನಿರ್ಮಿಸಿ ಕೊಟ್ಟ ANF ಸಿಬ್ಬಂದಿ

ಈ ವೃದ್ಧನ(Elderly Man)  ಪತ್ನಿ (Wife) ಈ ಹಿಂದೆಯೇ ತೀರಿಕೊಂಡಿದ್ದು, ಇವರ ಮಕ್ಕಳು ಇವರು ತಮ್ಮ ಮನೆ ಸಮೀಪದಲ್ಲೇ ವಾಸಿಸಬೇಕೆಂದು ಬಯಸಿದ್ದರು. ಆದರೆ ಬರೀ ಆತನ ಕುಟುಂಬವೊಂದರಿಂದ ಮಾತ್ರ ಇದು ಸಾಧ್ಯವಿರಲಿಲ್ಲ. ಹೀಗಾಗಿ ನಾವು ಕೆಲವರು ನೆರೆಹೊರೆ ಮನೆಯವರು ಅವರಿಗೆ ನೆರವಾದೆವು ಎಂದು ಈ ಮಹತ್ಕಾರ್ಯದಲ್ಲಿ ಭಾಗಿಯಾದ ನೆರೆಹೊರೆ ಮನೆಯವರು ಹೇಳಿದ್ದಾರೆ. ಈ ಮನೆ ತುಂಬಾ ಭಾರವಾಗಿತ್ತು. ಮನೆಯನ್ನು ಹೊತ್ತು ಗುರಿ ತಲುಪಿಸಿದ ಪ್ರತಿಯೊಬ್ಬರು ಸುಸ್ತಾಗಿದ್ದರು. ಆದರೆ ವೃದ್ಧನ ಪುತ್ರಿ ಹೀಗೆ ಮನೆ ಹೊತ್ತವರಿಗೆ ಊಟದ ವ್ಯವಸ್ಥೆ ಮಾಡಿದರು. ಹೀಗಾಗಿ ಇದೊಂದು ಹಬ್ಬದಂತೆ ಅನುಭವ ನೀಡಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ವಿಶೇಷವಾಗಿ ಪಟ್ಟಣದಲ್ಲಿ ಪಕ್ಕದ ಮನೆಯಲ್ಲಿ ಹೆಣವೇ ಬಿದ್ದರೂ ತಿಳಿಯದಂತಹ ಕಾಲಘಟ್ಟದಲ್ಲಿ ನಾವಿರುವಾಗ ಇಲ್ಲಿ ಒಬ್ಬ ವಯೋವೃದ್ಧನಿಗಾಗಿ ಇಡೀ ಊರವರೆಲ್ಲಾ ಸೇರಿ ಮನೆಯನ್ನೇ ಹೊತ್ತು ಸ್ಥಳಾಂತರ ಮಾಡಿರುವುದು ಶ್ಲಾಘನೀಯ ವಿಚಾರವೇ ಸರಿ.
 

click me!