
ಕರಾಚಿ (ಮಾ.12): ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದಲ್ಲಿ ಬಲೂಚ್ ವಿಮೋಚನಾ ಪಡೆ (ಬಿಎಲ್‌ಎ) ಉಗ್ರರು ದುಂಡಾವರ್ತನೆ ಮೆರೆದಿದ್ದು, ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಂಗಳವಾರ ಗುಂಡಿನ ದಾಳಿ ಮಾಡಿ ತಡೆದಿದ್ದಾರೆ ಹಾಗೂ ಸುಮಾರು 500 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಈ ನಡುವೆ, ‘ಸೇನೆ ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಕೂಡದು. ನಡೆಸಿದರೆ ಎಲ್ಲ ಪ್ರಯಾಣಿಕರ ಹತ್ಯೆ ಮಾಡುತ್ತೇವೆ’ ಎಂದು ಉಗ್ರರು ಬೆದರಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಮಾತನಾಡಿರುವ ಪಾಕ್ ಮಾಜಿ ಸಂಸದ ಖಾದಿರ್ ಬಲೂಚ್ ಅವರು, ‘ಉಗ್ರರು ತಮ್ಮ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ 150 ಯೋಧರನ್ನು ಹತ್ಯೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಆದರೆ ಇದು ಸ್ವತಂತ್ರವಾಗಿ ದೃಢಪಟ್ಟಿಲ್ಲ. ಆದಾಗ್ಯೂ ಉಗ್ರರ ವಿರುದ್ಧದ ಕಾರ್ಯಾಚರಣೆ ನಿಲ್ಲಿಸುವು ಪ್ರಶ್ನೆಯೇ ಇಲ್ಲ ಎಂದು ಬಲೂಚಿಸ್ತಾನ ಸರ್ಕಾರ ಹೇಳಿದೆ.
ಆಗಿದ್ದೇನು?: ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿರುವ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖೈಬರ್ ಕಣಿವೆಯ ಗುಡಾಲಾರ್ ಹಾಗೂ ಪಿರು ಕೊಣೇರಿ ನಡುವಿನ 8ನೇ ಸುರಂಗದ ಸನಿಹ ಸಾಗುತ್ತಿದ್ದ 9 ಕೋಚ್‌ಗಳಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರೈಲು ಚಾಲಕ ಹಾಗೂ ಕೆಲವರು ಗಾಯಗೊಂಡಿದ್ದಾರೆ. ಬಳಿಕ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ಈ ನಡುವೆ, ಉಗ್ರರು ತಾವು ಹಳಿಯನ್ನೇ ಸ್ಫೋಟಿಸಿ ರೈಲು ನಿಲ್ಲಿಸಿದ್ದೇವೆ. 6 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದೇವೆ ಎಂದಿದ್ದರೂ ಅದು ಅಧಿಕೃತವಾಗಿ ದೃಢಪಟ್ಟಿಲ್ಲ. ಸ್ಥಳಕ್ಕೆ ರಕ್ಷಣಾ ತಂಡಗಳು ಹಾಗೂ ಭದ್ರತಾ ಪಡೆಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಆದರೆ ಗುಡ್ಡಗಾಡು ಆದ ಕಾರಣ ಹೆಚ್ಚಿನ ಪಡೆಗಳು ಅಲ್ಲಿಗೆ ತೆರಳಲು ಕಷ್ಟವಾಗುತ್ತಿದೆ. ಇದರ ನಡುವೆ ಉಗ್ರರು ಮಹಿಳೆ ಹಾಗೂ ಮಕ್ಕಳನ್ನು ‘ಮಾನವ ಗುರಾಣಿ’ ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ.
ಮಹಾರಾಷ್ಟ್ರ, ತೆಲಂಗಾಣಕ್ಕೆ ಗ್ಯಾರಂಟಿ ಆರ್ಥಿಕ ಸಂಕಟ: ಉಚಿತ ಕೊಡುಗೆಗಳ ಭಾರ
ಇದು ಮೊದಲಲ್ಲ: ಬಲೂಚಿ ಉಗ್ರರು ರೈಲಿನ ಮೇಲೆ ದಾಳಿ ಮಾಡುತ್ತಿರುವುದು ಮೊದಲೇನಲ್ಲ. 2024ರ ನವೆಂಬರ್‌ನಲ್ಲಿ, ಕ್ವೆಟ್ಟಾದ ಮುಖ್ಯ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ನಡೆಸಿ 14 ಸೈನಿಕರು ಸೇರಿದಂತೆ 26 ಜನರನ್ನು ಸಾಯಿಸಿದ್ದರು. ಮತ್ತು ಫೆಬ್ರವರಿಯಲ್ಲಿ 7 ಪಂಜಾಬಿ ಪ್ರಯಾಣಿಕರನ್ನು ಸಹ ಕೊಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ