
ನವದೆಹಲಿ: ಸೌದಿ ರಾಜಧಾನಿಯ ಏರ್‌ಪೋರ್ಟ್ ಮೇಲಿನ ಹೌತಿ ದಾಳಿ ಹಿನ್ನೆಲೆಯಲ್ಲಿ ಭಾರತದ ಏರ್ ಇಂಡಿಯಾ, ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗುರುವಾರದಿಂದ ಅ.10 ರವರೆಗೆ ರಿಯಾದ್‌ಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಸಿಗಲಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ರಿಯಾದ್: ಮಧ್ಯಪ್ರಾಚ್ಯ ಕದನ ಮತ್ತೊಂದು ಮಜಲು ಮುಟ್ಟಿದ್ದು, ಸೌದಿ ಅರೇಬಿಯಾ ರಾಜಧಾನಿ ರಿಯಾದ್ ಏರ್‌ಪೋರ್ಟ್ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸೌದಿ ಹಾಗೂ ಅದರ ಮಿತ್ರ ದೇಶ ಪಾಕಿಸ್ತಾನ ಕೂಡ ತಿರುಗಿಬಿದ್ದಿದ್ದು, ಪಾಕಿಸ್ತಾನವು ತನ್ನ ಫೈಟರ್‌ಜೆಟ್‌ಗಳನ್ನು ಬಳಸಿ ಯೆಮೆನ್‌ನಲ್ಲಿನ ಹೌತಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಮೂಲಕ ಮಧ್ಯಪ್ರಾಚ್ಯ ಸಮರದಲ್ಲಿ ಮೊದಲ ಬಾರಿ ಪಾಕ್ ಕೂಡ ಪ್ರವೇಶಿಸಿದಂತಾಗಿದೆ.
ಕಳೆದ ಕೆಲವು ದಿನದಿಂದ ಆಗಾಗ ಸೌದಿ ಮೇಲೆ ದಾಳಿ ಮಾಡುತ್ತಿದ್ದ ಹೌತಿಗಳು, ಗುರುವಾರ ರಿಯಾದ್‌ನ ಕಿಂಗ್ ಖಾಲಿದ್ ವಿಮಾನ ನಿಲ್ದಾಣದ ಮೇಲೆ ಆಕ್ರಮಣ ನಡೆಸಿದ್ದಾರೆ. ಪರಿಣಾಮ, ಏರ್‌ಪೋರ್ಟ್‌ನಲ್ಲಿ ನಿಲ್ಲಿಸಲಾಗಿದ್ದ ವಿಮಾನಗಳಿಂದ ದಟ್ಟ ಹೊಗೆ ಎದ್ದಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.
ಅತ್ತ ಟರ್ಕಿ-ಪಾಕ್- ಮೆಕ್ಕಾ ಒಪ್ಪಂದದ ಭಾಗವಾಗಿ ಮೊದಲ ಬಾರಿ ರಣರಂಗಕ್ಕಿಳಿದಿರುವ ಪಾಕಿಸ್ತಾನದ ಪಡೆಗಳು ಹೌತಿಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಈಗಾಗಲೇ ಪಾಕ್ ಯೋಧರನ್ನು ಸೌದಿಯ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದ್ದು, ಇದನ್ನು ಪಾಕ್ ಸೇನಾ ಮಾಧ್ಯಮ ವಿಭಾಗದ ಮುಖ್ಯಸ್ಥ ಲೆ.ಜ. ಷರೀಫ್ ಚೌಧರಿ ದೃಢಪಡಿಸಿದ್ದಾರೆ. ಆದರೆ ಎಷ್ಟು ಯೋಧರಿದ್ದಾರೆ ಹಾಗೂ ಯಾವ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ ಮೂಲಗಳ ಪ್ರಕಾರ, ಸದ್ಯ 8 ಸಾವಿರ ಪಾಕ್ ಯೋಧರು ಸೌದಿಯಲ್ಲಿರುವ ಅಂದಾಜಿದೆ.
ಸೌದಿ, ಪಾಕ್, ಟರ್ಕಿಯ ನಡುವೆ ಏರ್ಪಟ್ಟಿರುವ ಮೆಕ್ಕಾ ಒಪ್ಪಂದದ ಪ್ರಕಾರ, ಈ ಮೂರಲ್ಲಿ ಒಂದು ದೇಶದ ಮೇಲೆ ನಡೆದ ದಾಳಿಯನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಬೇಕು ಹಾಗೂ ವೈರಿಗಳ ವಿರುದ್ಧ ಯುದ್ಧಕ್ಕೆ ಧುಮುಕಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ