ಶ್ರೀಲಂಕಾ ಮಾಜಿ ಪ್ರಥಮ ಮಹಿಳೆ ರಾಜಪಕ್ಸೆ ಪತ್ನಿ ಬಂಧನ, ಸಂಕಷ್ಟದಲ್ಲಿ ಪ್ರಭಾವಿ ರಾಜಕೀಯ ಕುಟುಂಬದ ಅಷ್ಟೂ ಮಂದಿ!

Published : Oct 08, 2026, 12:49 PM IST
shiranthi rajapaksa

ಸಾರಾಂಶ

ಶ್ರೀಲಂಕಾದ ಮಾಜಿ ಪ್ರಥಮ ಮಹಿಳೆ ಶಿರಾಂತಿ ರಾಜಪಕ್ಸ ಅವರನ್ನು ಭ್ರಷ್ಟಾಚಾರ ಮತ್ತು ಹಣ ದುರ್ಬಳಕೆ ಆರೋಪದ ಮೇಲೆ ಬಂಧಿಸಲಾಗಿದೆ. ನೂತನ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರ ಕಠಿಣ ಕ್ರಮಗಳಿಂದಾಗಿ, ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ಇಡೀ ರಾಜಪಕ್ಸೆ ಕುಟುಂಬ ಈಗ ಕಾನೂನು ಕಂಟಕ ಎದುರಿಸುತ್ತಿದೆ.

ಕೊಲೊಂಬೊ: ತಮ್ಮ ಸರ್ಕಾರೇತರ ಸಂಸ್ಥೆ ಸಿರ್ಲಿಯಾ ಸಾವಿಯಾ ಬ್ಯಾಂಕ್‌ ಖಾತೆಯಲ್ಲಿ ವಂಚನೆ ಮಾಡಿದ ಆರೋಪ ಹೊತ್ತಿರುವ ಶ್ರೀಲಂಕಾದ ಮಾಜಿ ಪ್ರಥಮ ಮಹಿಳೆ ಶಿರಾಂತಿ ರಾಜಪಕ್ಸ ಅವರನ್ನು ಬುಧವಾರ ಬಂಧಿಸಲಾಗಿದೆ. ಕೊಲಂಬೋದ ಪೂರ್ವ ಉಪನಗರವಾದ ಪೋಲ್ಹೆಂಗೊಡಾದಲ್ಲಿ ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರ ನಿವಾಸದಲ್ಲಿ ಅವರ ಪತ್ನಿ ಶಿರಾಂತಿಯನ್ನು ಭ್ರಷ್ಟಾಚಾರ ಸಂಬಂಧಿತ ತನಿಖಾ ಆಯೋಗ (ಸಿಐಎಬಿಒಸಿ) ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಸಿಂಗಾಪುರದಿಂದ ಸೋಮವಾರ ಸ್ವಗೃಹಕ್ಕೆ ಮರಳಿದ್ದ ಶಿರಾಂತಿ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟರಲ್ಲಿ ಅವರ ಬಂಧನವಾಗಿದೆ. ಸ್ಟೇಟ್‌ ಬ್ಯಾಂಕ್‌ನಿಂದ ಶ್ರೀಲಂಕಾ 1 ಕೋಟಿ ರು. ಹಾಗೂ ಇತರ ಹಣ ದುರ್ಬಳಕೆಯನ್ನು ಶಿರಾಂತಿ ಎದುರಿಸುತ್ತಿದ್ದಾರೆ.

ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ರಾಜಪಕ್ಸೆ ಕುಟುಂಬ

ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ದಶಕಗಳ ಕಾಲ ರಾಜಕೀಯ ಪ್ರಾಬಲ್ಯ ಹೊಂದಿದ್ದ ರಾಜಪಕ್ಸೆ ಕುಟುಂಬದ ಆಡಳಿತಕ್ಕೆ ಸಂಪೂರ್ಣ ತಡೆ ಬಿದ್ದಿದ್ದು, ಪ್ರಸ್ತುತ ಸರ್ಕಾರದ ತನಿಖಾ ಸಂಸ್ಥೆಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿವೆ.

2022ರ ಭಾರಿ ಆರ್ಥಿಕ ಬಿಕ್ಕಟ್ಟು ಹಾಗೂ ಜನಾಕ್ರೋಶದ ನಂತರ 2024ರಲ್ಲಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ, ಭ್ರಷ್ಟಾಚಾರ ನಿರ್ಮೂಲನೆಯನ್ನು ತಮ್ಮ ಸರ್ಕಾರದ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಪಾಯಕಾರಿ, ಆದರೆ ಅದರ ವಿರುದ್ಧ ಹೋರಾಡದಿರುವುದು ದೇಶಕ್ಕೆ ಇನ್ನೂ ಗಂಭೀರ ಅಪಾಯಗಳನ್ನು ತಂದೊಡ್ಡುತ್ತದೆ ಎಂದು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಸ್ಪಷ್ಟಪಡಿಸಿದ್ದರು.

ಸುಮಾರು 15 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಪತ್ನಿ ಶಿರಂತಿ ರಾಜಪಕ್ಸೆ (73) ಅವರನ್ನು ಭ್ರಷ್ಟಾಚಾರ ನಿಗ್ರಹ ಪಡೆ ಇತ್ತೀಚೆಗೆ ಕಿರಪೋಣೆಯ ನಿವಾಸದಲ್ಲಿ ವಶಕ್ಕೆ ಪಡೆದಿದೆ. ಇದರೊಂದಿಗೆ ರಾಜಪಕ್ಸೆ ಕುಟುಂಬದ ಪ್ರಮುಖ ಸದಸ್ಯರೆಲ್ಲರೂ ಪ್ರಸ್ತುತ ಕಾನೂನು ತನಿಖೆ ಮತ್ತು ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.

ಕಾನೂನು ಕಂಟಕದಲ್ಲಿರುವ ರಾಜಪಕ್ಸೆ ಕುಟುಂಬದ ಪ್ರಮುಖರು

ಗೋಟಬಯ ರಾಜಪಕ್ಸೆ (ಮಾಜಿ ಅಧ್ಯಕ್ಷ):

2019ರಿಂದ 2022ರವರೆಗೆ ಅಧ್ಯಕ್ಷರಾಗಿದ್ದ 77 ವರ್ಷದ ಗೋಟಬಯ ಅವರಿಗೆ ವಿದೇಶ ಪ್ರಯಾಣವನ್ನು ನಿಷೇಧಿಸಲಾಗಿದೆ. 279 ಜನರನ್ನು ಬಲಿ ಪಡೆದ 2019ರ 'ಈಸ್ಟರ್ ಭಾನುವಾರದ ಬಾಂಬ್ ಸ್ಫೋಟ' ತನಿಖೆಯ ಭಾಗವಾಗಿ ಇವರ ಮಾಜಿ ಗುಪ್ತಚರ ಮುಖ್ಯಸ್ಥ ಸುರೇಶ್ ಸಲ್ಲೆ ಈಗಾಗಲೇ ಬಂಧನದಲ್ಲಿದ್ದಾರೆ. ಚುನಾವಣೆಗೆ ಮುನ್ನ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಈ ದಾಳಿ ಸಂಘಟಿಸಲಾಗಿತ್ತು ಎಂಬ ಆರೋಪವಿದೆ. ಜೊತೆಗೆ 2006ರ 4 'ಮಿಗ್ ವಿಮಾನ ಖರೀದಿ' ಹಗರಣದಲ್ಲೂ ಗೋಟಬಯ ತನಿಖೆ ಎದುರಿಸುತ್ತಿದ್ದಾರೆ.

ನಮಲ್ ರಾಜಪಕ್ಸೆ (ಹಿರಿಯ ಮಗ, ಮಾಜಿ ಸಚಿವ):

ಕುಟುಂಬದ ರಾಜಕೀಯ ಉತ್ತರಾಧಿಕಾರಿ ಎನಿಸಿಕೊಂಡಿರುವ 40 ವರ್ಷದ ನಮಲ್, 2012ರಲ್ಲಿ ಭಾರತೀಯ ಹೂಡಿಕೆದಾರರಿಂದ $2 ಮಿಲಿಯನ್ ಅಕ್ರಮವಾಗಿ ವರ್ಗಾಯಿಸಿದ ಆರೋಪ ಮತ್ತು 2013ರ $2.3 ಬಿಲಿಯನ್ 'ಏರ್‌ಬಸ್ ಒಪ್ಪಂದ' ಲಂಚದ ಆರೋಪ ಎದುರಿಸುತ್ತಿದ್ದಾರೆ. ಇವರನ್ನು ಸೆಪ್ಟೆಂಬರ್ 4ರಂದು ಬಂಧಿಸಲಾಗಿದ್ದು, ಇಂದಿಗೂ ಜೈಲಿನಲ್ಲಿದ್ದಾರೆ.

ಯೋಶಿತಾ ರಾಜಪಕ್ಸೆ (ಎರಡನೇ ಮಗ, ಮಾಜಿ ನೌಕಾಪಡೆ ಅಧಿಕಾರಿ):

38 ವರ್ಷದ ಯೋಶಿತಾ, 2006ರಲ್ಲಿ ವಿದೇಶಿ ತರಬೇತಿಗಾಗಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾಮೀನಿನಲ್ಲಿದ್ದಾರೆ. $500,000ಕ್ಕೂ ಹೆಚ್ಚು ಮೌಲ್ಯದ ಆಸ್ತಿ ಖರೀದಿಗೆ "ಅಜ್ಜ ಉಡುಗೊರೆಯಾಗಿ ನೀಡಿದ ರತ್ನಗಳ ಚೀಲ" ಬಳಸಿದ್ದಾಗಿ ಇವರು ನೀಡಿದ್ದ ಹೇಳಿಕೆ ಹಣ ಅಕ್ರಮ ವರ್ಗಾವಣೆ ತನಿಖೆಗೆ ಕಾರಣವಾಗಿದೆ.

ರೋಹಿತ ರಾಜಪಕ್ಸೆ (ಕಿರಿಯ ಮಗ):

37 ವರ್ಷದ ರೋಹಿತ, ತಮ್ಮ ಹೆಸರಿನಲ್ಲಿರುವ ವಿವರಿಸಲಾಗದ ಅಪಾರ ಆಸ್ತಿ ಮತ್ತು ಸಂಪತ್ತಿನ ಮೂಲಕ್ಕೆ ಸಂಬಂಧಿಸಿದಂತೆ ಸರಣಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ.

ಶಿರಂತಿ ರಾಜಪಕ್ಸೆ (ಮಾಜಿ ಪ್ರಥಮ ಮಹಿಳೆ):

'ಸಿರಿಲಿಯಾ' ದತ್ತಿ ಸಂಸ್ಥೆಯ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಹಾಗೂ ಚೀನಾ ಸರ್ಕಾರವು ಮಕ್ಕಳ ಆಸ್ಪತ್ರೆಗೆ ಉಡುಗೊರೆಯಾಗಿ ನೀಡಿದ್ದ ಪಿಇಟಿ (PET) ಸ್ಕ್ಯಾನರ್‌ಗೆ ಸಂಬಂಧಿಸಿದಂತೆ ಹಣ ಸಂಗ್ರಹಿಸಿದ ಆರೋಪದ ಮೇಲೆ ಬುಧವಾರ ಇವರ ಬಂಧನವಾಗಿದೆ. ಇವರ ಸಹೋದರ, ಶ್ರೀಲಂಕನ್ ಏರ್‌ಲೈನ್ಸ್ ಮಾಜಿ ಅಧ್ಯಕ್ಷ ನಿಶಾಂತ ವಿಕ್ರಮಸಿಂಘೆ ಕೂಡ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲಿದ್ದಾರೆ.

ಬಾಸಿಲ್ ರಾಜಪಕ್ಸೆ (ಮಾಜಿ ಆರ್ಥಿಕ ಸಚಿವ):

ಕುಟುಂಬದ ಪ್ರಮುಖ ತಂತ್ರಜ್ಞ ಎಂದೇ ಹೆಸರಾಗಿದ್ದ 75 ವರ್ಷದ ಬಾಸಿಲ್, ಅಕ್ರಮ ಹಣದಲ್ಲಿ ಭೂಮಿ ಖರೀದಿ ಮತ್ತು 2014ರ ಚುನಾವಣೆಯಲ್ಲಿ ಸರ್ಕಾರಿ ಸಂಪನ್ಮೂಲ ದುರುಪಯೋಗದ ಆರೋಪ ಎದುರಿಸುತ್ತಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಇವರ ವಿರುದ್ಧ ತನಿಖಾಧಿಕಾರಿಗಳು 'ಇಂಟರ್‌ಪೋಲ್ ಬ್ಲೂ ನೋಟಿಸ್' ಜಾರಿಗೊಳಿಸಿದ್ದಾರೆ.

ಶಶೀಂದ್ರ ಮತ್ತು ಶಮೀಂದ್ರ ರಾಜಪಕ್ಸೆ (ಸೋದರಳಿಯಂದಿರು):

ಮಾಜಿ ಉಪಸಚಿವ ಶಶೀಂದ್ರ (50) ಜೂನ್‌ನಲ್ಲಿ ರಾಜ್ಯದ $29,500 ಹಣವನ್ನು ವಂಚಿಸಿದ ಆರೋಪದ ಮೇಲೆ ದೋಷಾರೋಪಣೆಗೆ ಒಳಗಾಗಿದ್ದಾರೆ. ಇವರ ಸಹೋದರ ಶಮೀಂದ್ರ ಏರ್‌ಬಸ್ ಒಪ್ಪಂದದ ಲಂಚದ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ.

ರಾಜಪಕ್ಸೆ ಕುಟುಂಬದ ಸದಸ್ಯರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಸರ್ಕಾರವು ರಾಜಕೀಯ ವೈಷಮ್ಯದಿಂದ 'ಬೇಟೆ' ನಡೆಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ದಿಸಾನಾಯಕೆ ಅವರ ಈ ಕಠಿಣ ಹೆಜ್ಜೆ ಶ್ರೀಲಂಕಾದ ರಾಜಕೀಯದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಜ್ಜೆ ಹೆಜ್ಜೆಗೂ ಬುಸ್ ಬುಸ್ ಅನ್ನುತ್ತೆ ನಾಗ: ಇದು ಹಾವುಗಳ ಸಾಮ್ರಾಜ್ಯದ ನಿಗೂಢ ದ್ವೀಪ!
ಗಡದ್ದಾಗಿ ನಿದ್ದೆ ಮಾಡುವ ಸ್ಪರ್ಧೆ: ಗೆದ್ದರೆ ಸಿಗತ್ತೆ 12 ಲಕ್ಷ ರೂ! ಏನೇನು ಷರತ್ತು ಇವೆ ನೋಡಿ