ಇರಾನ್‌ ಮೇಲೆ ಪಾಕ್‌ ಸೇಡಿನ ದಾಳಿ, 9 ಬಲಿ: ಸಂಧಾನಕ್ಕೆ ಸಿದ್ಧ ಎಂದ ಚೀನಾ

Published : Jan 19, 2024, 08:25 AM IST
ಇರಾನ್‌ ಮೇಲೆ ಪಾಕ್‌ ಸೇಡಿನ ದಾಳಿ, 9 ಬಲಿ: ಸಂಧಾನಕ್ಕೆ ಸಿದ್ಧ ಎಂದ ಚೀನಾ

ಸಾರಾಂಶ

ತನ್ನ ಗಡಿಯೊಳಗಿರುವ ಭಯೋತ್ಪಾದಕ ನೆಲೆಗಳ ಮೇಲೆ ಇರಾನ್‌ ನಡೆಸಿದ ಸರ್ಜಿಕಲ್‌ ದಾಳಿಗೆ ಕ್ರುದ್ಧನಾಗಿರುವ ಪಾಕಿಸ್ತಾನದ ಸೇನೆ ಪ್ರತೀಕಾರಾತ್ಮಕವಾಗಿ ಗುರುವಾರ ಇರಾನ್‌ನ ಗಡಿಯೊಳಗೆ ಕಿಲ್ಲರ್‌ ಡ್ರೋನ್‌ ಹಾಗೂ ರಾಕೆಟ್‌ ಬಳಸಿ ನಿಖರ ದಾಳಿ ನಡೆಸಿದೆ. ದಾಳಿಯಲ್ಲಿ 9 ಮಂದಿ ಮೃತರಾಗಿದ್ದಾರೆ ಎಂದು ಹೇಳಲಾಗಿದೆ.

ಪಿಟಿಐ ಇಸ್ಲಾಮಾಬಾದ್‌: ತನ್ನ ಗಡಿಯೊಳಗಿರುವ ಭಯೋತ್ಪಾದಕ ನೆಲೆಗಳ ಮೇಲೆ ಇರಾನ್‌ ನಡೆಸಿದ ಸರ್ಜಿಕಲ್‌ ದಾಳಿಗೆ ಕ್ರುದ್ಧನಾಗಿರುವ ಪಾಕಿಸ್ತಾನದ ಸೇನೆ ಪ್ರತೀಕಾರಾತ್ಮಕವಾಗಿ ಗುರುವಾರ ಇರಾನ್‌ನ ಗಡಿಯೊಳಗೆ ಕಿಲ್ಲರ್‌ ಡ್ರೋನ್‌ ಹಾಗೂ ರಾಕೆಟ್‌ ಬಳಸಿ ನಿಖರ ದಾಳಿ ನಡೆಸಿದೆ. ದಾಳಿಯಲ್ಲಿ 9 ಮಂದಿ ಮೃತರಾಗಿದ್ದಾರೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಎರಡೂ ದೇಶಗಳಿಗೆ ಮಿತ್ರನಾಗಿರುವ ಚೀನಾ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪನೆಗೆ ಸಿದ್ಧವಿರುವುದಾಗಿ ಪ್ರಕಟಿಸಿದೆ. ಈ ನಡುವೆ ತನ್ನ ದೇಶದಲ್ಲಿನ ಪಾಕ್‌ ರಾಯಭಾರಿಯನ್ನು ಕರೆಸಿಕೊಂಡಿರುವ ಇರಾನ್‌ ಸರ್ಕಾರ, ದಾಳಿ ಕುರಿತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.

ಮಂಗಳವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗಿರುವ ಬಲೂಚಿಸ್ತಾನದಲ್ಲಿ ಜೈಷ್‌-ಎ-ಅದ್ಲ್‌ ಎಂಬ ಉಗ್ರ ಸಂಘಟನೆಯ ಎರಡು ಅಡಗುದಾಣಗಳ ಮೇಲೆ ಇರಾನ್‌ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ಅದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪಾಕಿಸ್ತಾನ ಸರ್ಕಾರ ಬುಧವಾರ ಇರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿಕೊಂಡಿತ್ತು. ಬಳಿಕ ಗುರುವಾರ ಮುಂಜಾನೆ ಇರಾನ್‌ ಮೇಲೆ ಸೇಡು ತೀರಿಸಿಕೊಳ್ಳಲು ಪಾಕ್‌ ಸೇನೆ ಕಿಲ್ಲರ್‌ ಡ್ರೋನ್‌, ರಾಕೆಟ್‌ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ಬಳಸಿ ಇರಾನ್‌ ಗಡಿಯೊಳಗಿರುವ ಸಿಯೆಸ್ತಾನ್‌-ಒ-ಬಲೂಚಿಸ್ತಾನ್‌ ಪ್ರದೇಶದ ಮೇಲೆ ನಿಖರ ದಾಳಿ ನಡೆಸಿದೆ. 

ಏರ್‌ಸ್ಟ್ರೈಕ್‌ ಬೆನ್ನಲ್ಲೇ ಇರಾನ್‌-ಪಾಕ್‌ ನಡುವೆ ಶುರುವಾಗುತ್ತಾ ಯುದ್ಧ? ಯಾವ ದೇಶದ ಸೇನೆ ಬಲಿಷ್ಠ, ಇಲ್ಲಿದೆ ಡೀಟೇಲ್ಸ್‌!

ಈ ಕಾರ್ಯಾಚರಣೆಗೆ ಪಾಕಿಸ್ತಾನವು ‘ಮಾರ್ಗ್‌ ಬಾರ್‌ ಸರಮಾಚರ್‌’ ಎಂದು ಹೆಸರಿಟ್ಟಿದೆ. ದಾಳಿಯಲ್ಲಿ ಇರಾನ್‌ನ ಒಂಭತ್ತು ಉಗ್ರರು ಮೃತಪಟ್ಟಿರುವುದಾಗಿ ಪಾಕ್‌ ಹೇಳಿಕೊಂಡಿದೆ. ಆದರೆ, ದಾಳಿಯಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಅವರ್ಯಾರೂ ಇರಾನ್‌ ಪ್ರಜೆಗಳಲ್ಲ ಎಂದು ಇರಾನ್‌ ಸರ್ಕಾರ ತಿಳಿಸಿದೆ. ಗುರುವಾರ ಬೆಳಗಿನ ಜಾವ ನಾಲ್ಕು ಗಂಟೆಯ ಸಮಯದಲ್ಲಿ ಇರಾನ್‌ನ ಗಡಿಯಲ್ಲಿರುವ ಅಲಿ ರೇಜಾ ಮರ್ಹಾಮಾಟಿ ಎಂಬ ಹಳ್ಳಿಯ ಮೇಲೆ ಪಾಕಿಸ್ತಾನದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ತನ್ನ ಉಗ್ರರ ಮೇಲೆಯೇ ಪಾಕ್‌ ದಾಳಿ

ಇರಾನ್‌ ಗಡಿಯೊಳಗೆ ಸರಮಾಚರ್‌ ಎಂದು ಕರೆದುಕೊಳ್ಳುವ ಪಾಕಿಸ್ತಾನ ಮೂಲದ ಉಗ್ರರು ಸುರಕ್ಷಿತ ಅಡಗುದಾಣಗಳನ್ನು ನಿರ್ಮಿಸಿಕೊಂಡು ಪಾಕ್‌ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಇರಾನ್‌ ಬಳಿ ಸಾಕಷ್ಟು ಸಲ ಪಾಕ್‌ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. ಆದರೆ ಇರಾನ್‌ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ನಮ್ಮ ದೇಶದ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ಉಗ್ರರ ಮೇಲೆ ದಾಳಿ ನಡೆಸಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ.

ಇರಾನ್ ವಿರುದ್ಧ ತಿರುಗಿಬಿದ್ದ ಪಾಕಿಸ್ತಾನ: ಪ್ರತ್ಯೇಕತಾವಾದಿ ಗುಂಪುಗಳ ಮೇಲೆ ಪ್ರತೀಕಾರ ದಾಳಿ

ಸಂಧಾನಕ್ಕೆ ಸಿದ್ಧ ಎಂದ ಚೀನಾ

ಈಗಾಗಲೇ ಇಸ್ರೇಲ್‌, ಪ್ಯಾಲೆಸ್ತೀನ್‌, ಯೆಮನ್‌ ಹಾಗೂ ಇರಾನ್‌ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಶಾಂತಿ ಉಂಟಾಗಿದೆ. ಈಗ ಪಾಕ್‌ ಹಾಗೂ ಇರಾನ್‌ ನಡುವೆ ಸಂಘರ್ಷ ತೀವ್ರಗೊಂಡರೆ ಇನ್ನಷ್ಟು ರಕ್ತಪಾತ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಚೀನಾ ಸರ್ಕಾರ, ತಾನು ಪಾಕ್‌ ಹಾಗೂ ಇರಾನ್‌ ನಡುವೆ ಸಂಧಾನ ನಡೆಸಲು ಸಿದ್ಧನಿದ್ದೇನೆ ಎಂದು ಗುರುವಾರ ತಿಳಿಸಿದೆ. ಪಾಕ್‌ ಹಾಗೂ ಇರಾನ್‌ ಎರಡೂ ದೇಶಕ್ಕೆ ಚೀನಾ ಮಿತ್ರ ರಾಷ್ಟ್ರವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್