
ಇಸ್ಲಾಮಾಬಾದ್ (ಜೂ.20) ಭಾರತ ವಿರುದ್ಧದ ಯಾವುದೇ ಸಂಘರ್ಷ, ಉಗ್ರರ ದಾಳಿ ಸೇರಿದಂತೆ ಸಂಘರ್ಷವನ್ನು ಪಾಕಿಸ್ತಾನ ತಾವೇ ಗೆದ್ದಿರುವಂತೆ ಬಿಂಬಿಸುತ್ತದೆ. ಬಳಿಕ ಅಸಲಿ ಸತ್ಯ ಹೊರಬಂದಾಗ ಪಾಕಿಸ್ತಾನ ಮುಖವಾಡ ಕಳಚುತ್ತದೆ. ಆದರೆ ಈ ಬಾರಿ ಪಾಕಿಸ್ತಾನ ಸತ್ಯ ಒಪ್ಪಿಕೊಂಡಿದೆ. ಭಾರತದ ಆಪರೇಶನ್ ಸಿಂದೂರ್ ಕದನ ವಿರಾಮಕ್ಕೆ ಪಾಕಿಸ್ತಾನವೇ ಮನವಿ ಮಾಡಿದೆ ಅನ್ನೋದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಭಾರತದ ಬಳಿ ಕದನ ವಿರಾಮಕ್ಕೆ ಗೋಗೆರೆದಿರುವುದಾಗಿ ಪಾಕಿಸ್ತಾನ ಉಪ ಪ್ರಧಾನಿ ಇಶಾಖ್ ದಾರ್ ಹೇಳಿದ್ದಾರೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಇಶಾಖ್ ದಾರ್ ಅಸಲಿ ಸತ್ಯ ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮುಖಭಂಗ ಅನುಭವಿಸಿದೆ.
ಭಾರತದ ದಾಳಿಗೆ ಕಂಗಾಲಾದ ಪಾಕಿಸ್ತಾನ
ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ 9 ಉಗ್ರರ ನೆಲೆ ಟಾರ್ಗೆಟ್ ಮಾಡಿ ದಾಳಿ ಮಾಡಿತ್ತು. ಈ ವೇಳೆ ಪಾಕಿಸ್ತಾನ ಭಾರತಕ್ಕೆ ತಿರಗೇಟು ನೀಡಲು ಭಾರತದ ನಾಗರೀಕರ ಗುರಿಯಾಗಿಸಿ, ಜನ ವಸತಿ ಕೇಂದ್ರಗಳ ಗುರಿಯಾಗಿಸಿ ಮಿಸೈಲ್, ಡ್ರೋನ್ ದಾಳಿ ನಡೆಸಿತ್ತು. ಭಾರತ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿತು. ಇಷ್ಟೇ ಅಲ್ಲ ಪಾಕಿಸ್ತಾನ ಫೈಟರ್ ಜೆಟ್ ಕೂಡ ಹೊಡೆದುರುಳಿಸಿತ್ತು. ಪಾಕಿಸ್ತಾನ ನಡೆಸಿದ ಪ್ರತಿ ದಾಳಿಗೆ ಭಾರತ ನೀಡಿದ ತಿರುಗೇಟಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿತ್ತು. ಪಾಕಿಸ್ತಾನದ ಸೇನಾ ನೆಲೆಗಳನ್ನೇ ಟಾರ್ಗೆಟ್ ಮಾಡಿ ಧ್ವಂಸಗೊಳಿಸಿತ್ತು. ಈ ವೇಳೆ ಕದನ ವಿರಾಮಕ್ಕೆ ಪಾಕಿಸ್ತಾನ ಏನೆಲ್ಲಾ ಕಸರತ್ತು ನಡೆಸಿದೆ ಅನ್ನೋದನ್ನು ಇಶಾಖ್ ದಾರ್ ವಿವರಿಸಿದ್ದಾರೆ.
ಭಾರತದ ಆಪರೇಶನ್ ಸಿಂದೂರ್ ದಾಳಿಗೆ ಪಾಕಿಸ್ತಾನದ ರಾವಲ್ಪಿಂಡಿ ಪ್ರಾಂತ್ಯದ ನೂರ್ ಖಾನ್ ವಾಯು ನೆಲೆ ಹಾಗೂ ಪಂಜಾಬ್ ಪ್ರಾಂತ್ಯದ ಶಾರ್ಕೊಟ್ ವಾಯು ನೆಲೆ ಧ್ವಂಸಗೊಂಡಿತ್ತು. ರನ್‌ವೇ, ಫೈಟರ್ ಜೆಟ್ ಸೇರಿದಂತೆ ಅಪಾರ ಹಾನಿಯಾಗಿತ್ತು. ಈ ಆಪರೇಶನ್ ಸಿಂದೂರ್ ದಾಳಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿತ್ತು. ಈ ಕುರಿತು ಇಶಾಖ್ ದಾರ್ ವಿವರಿಸಿದ್ದಾರೆ. ರಾತ್ರಿ 2.30ರ ವೇಳೆಗೆ ಭಾರತ ನೂರ್ ಖಾನ್ ಹಾಗೂ ಶಾರ್ಕೋಟ್ ವಾಯುನೆಲೆಯನ್ನು ಧ್ವಂಸಗೊಳಿಸಿತ್ತು. ಈ ದಾಳಿಯಲ್ಲಿ ವಾಯು ನೆಲೆ ಧ್ವಂಸವಾಗಿತ್ತು. ಫೈಟರ್ ಜೆಟ್ ಹಾರಿಸುವುದು, ಭಾರತದ ಮೇಲೆ ದಾಳಿ ನಡೆಸುವುದು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದಾಳಿ ನಡೆದ 45 ನಿಮಿಷದಲ್ಲಿ ಸೌದಿ ರಾಜಾ ಫೈಸಲ್ ಕರೆ ಮಾಡಿ ಮಾತನನಾಡಿದ್ದರು. ಫೈಸಲ್ ಅಮೆರಿಕದ ಕಾರ್ಯದರ್ಶಿ ಮಾರ್ಕೋ ರುಬಿಯೋ ಜೊತೆ ಮಾತುಕತೆ ನಡೆಸಿದ್ದರು. ಪಾಕಿಸ್ತಾನದ ಪರವಾಗಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಳಿ ಮಾತುಕತೆ ನಡೆಸಬೇಕಾ? ದಾಳಿ ನಿಲ್ಲಿಸುವಂತೆ ಕದನವಿರಾಮದ ಮಾತುಕತೆ ನಡೆಸಬೇಕಾ ಎಂದು ಫೋನ್ ಮೂಲಕ ಫೈಸಲ್ ಕೇಳಿದ್ದರು. ತಕ್ಷಣವೇ ಹೌದು, ಸಹೋದರ ಮಾತುಕತೆ ಬೇಕಾಗಿದೆ ಎಂದು ಹೇಳಿದೆ. ಕೆಲ ಹೊತ್ತಿನ ಬಳಿಕ ಫೈಸಲ್ ಕರೆ ಮಾಡಿ ಎಸ್ ಜೈಶಂಕರ್ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಕದನ ವಿರಾಮ ಘೋಷಣೆಯಾಯಿತು ಎಂದು ಇಶಾಕ್ ಧಾರ್ ಪಾಕಿಸ್ತಾನ ಸುದ್ದಿ ವಾಹನಿ ಸಂದರ್ಶನದಲ್ಲಿ ಹೇಳಿದ್ದಾರೆ.
ಆಪರೇಶನ್ ಸಿಂದೂರ್ ವೇಳೆ ಪಾಕಿಸ್ತಾನದ ಸೇನಾ ವಕ್ತಾರ, ಪಾಕಿಸ್ತಾನ ಸೇನೆ ಸೇರಿದಂತೆ ಹಲವು ಸಚಿವರು ಪಾಕಿಸ್ತಾನ ಒಂದು ಜೆಟ್ ಮಾತ್ರ ಕಳೆದುಕೊಂಡಿದ. ಭಾರತದ ರಾಫೆಲ್ ಹೊಡೆದುರುಳಿಸಲಾಗಿದೆ. ಭಾರತದ ಯುದ್ಧದಲ್ಲಿ ಸೋತಿದೆ ಎಂದು ಹೇಳಿತ್ತು. ಇಷ್ಟೇ ಅಲ್ಲ ಪ್ರಧಾನಿ ಶೆಹಭಾಜ್ ಶರೀಫ್ ಪಾಕ್ ಸೇನಾ ಯೋಧರಿಗೆ ಸನ್ಮಾನ ಮಾಡಿದ್ದರು. ಜೊತೆಗೆ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಭಡ್ತಿ ನೀಡಲಾಗಿತ್ತು. ಇದೀಗ ಪಾಕಿಸ್ತಾನದ ಅಸಲಿ ಕತೆಯನ್ನು ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ಧಾರ್ ಹೇಳಿದ್ದಾರೆ.
ಇಶಾಕ್ ಧಾರ್ ಹೇಳಿಕೆಯಿಂದ ಟ್ರಂಪ್ ಮೈಲೇಜ್‌ಗೂ ಹೊಡೆತ
ಭಾರತ ಪಾಕಿಸ್ತಾನ ಕದನ ವಿರಾಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಇತ್ತೀಚೆಗೆ ದೂರವಾಣಿ ಮೂಲಕ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಕದನ ವಿರಾಮದಲ್ಲಿ ಸೌದಿ ರಾಜ ಕರೆ ಮಾಡಿ ಮಾತನಾಡಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಪರವಾಗಿ ಸೌದಿ ರಾಜ ಮಾತನಾಡಿದ್ದರು. ಇಲ್ಲಿ ಡೋನಾಲ್ಡ್ ಟ್ರಂಪ್ ಮಾತುಕತೆಯಾಗಲಿ, ಮಧ್ಯಸ್ಥಿಕೆ ವಹಿಸಿದ್ದಾಗಲಿ ಯಾವೂದೂ ಇಲ್ಲ. ಪಾಕಿಸ್ತಾನ ಉಪ ಪ್ರಧಾನಿ ಹೇಳಿಕೆ ಟ್ರಂಪ್ ಮೈಲೇಜ್‌ಗೂ ಹೊಡೆತ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ