ನಾವೀಗ ದಿವಾಳಿಯಾಗಿರುವ ದೇಶದಲ್ಲಿದ್ದೇವೆ. ಹಾಗೂ ಐಎಂಎಫ್ ನೆರವು ಸಿಗೋದು ಡೌಟು ಎಂದು ಪಾಕ್ ರಕ್ಷಣಾ ಮಂತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ಲಾಮಾಬಾದ್ (ಫೆಬ್ರವರಿ 20, 2023): ತೀವ್ರ ಹಣದುಬ್ಬರ, ಆರ್ಥಿಕತೆ ಕುಸಿತ, ವಿದೇಶಿ ವಿನಿಯಮ ಸಂಗ್ರಹ ಬಹುತೇಕ ಖಾಲಿ ಎನ್ನುವ ಹಂತದಲ್ಲಿರುವ ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ ಎಂದು ಸ್ವತಃ ದೇಶದ ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿದ್ದಾರೆ. ಇದೇ ಕಾರಣದಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಆರ್ಥಿಕ ನೆರವು ಕೂಡಾ ಸಿಗದೇ ಹೋಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಯಾಲ್‌ಕೋಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸಿಫ್, ‘ನೀವೆಲ್ಲಾ ಪಾಕಿಸ್ತಾನ ದಿವಾಳಿಯಾಗಬಹುದು, ಬಾಹ್ಯ ಸಾಲ ಪಾವತಿಯಲ್ಲಿ ಸುಸ್ತಿದಾರನಾಗಬಹುದು ಅಥವಾ ಆರ್ಥಿಕತೆ ಪೂರ್ಣ ಕುಸಿದು ಹೋಗಬಹುದು ಎಂಬ ವಾದಗಳನ್ನು ಕೇಳಿರಬಹುದು. ಆದರೆ ವಾಸ್ತವವಾಗಿ ದೇಶ ಈಗಾಗಲೇ ದಿವಾಳಿಯಾಗಿ ಹೋಗಿದೆ. ನಾವೀಗ ದಿವಾಳಿಯಾಗಿರುವ ದೇಶದಲ್ಲಿ ವಾಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನು ಓದಿ: ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ
ನಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇದೆಯೇ ಹೊರತೂ, ಐಎಂಎಫ್ ಬಳಿ ಅಲ್ಲ. ಇಂದಿನ ದೇಶದ ಈ ಪರಿಸ್ಥಿತಿಗೆ ಸರ್ಕಾರ, ಅಧಿಕಾರಶಾಹಿ, ರಾಜಕೀಯ ನಾಯಕರು ಸೇರಿದಂತೆ ಎಲ್ಲರೂ ಕಾರಣ. ಕಾನೂನು ಮತ್ತು ಸಂವಿಧಾನವನ್ನು ಪಾಲಿಸದೇ ಹೋದಾಗ ಇಂಥ ಪರಿಸ್ಥಿತಿ ನಿರ್ಮಾಣ ಆಗಿಯೇ ಆಗುತ್ತದೆ ಎಂದು ಆಸಿಫ್ ಕಿಡಿಕಾರಿದ್ದಾರೆ.
2019ರಲ್ಲಿ ಐಎಂಎಫ್ ಘೋಷಿಸಿದ್ದ 7 ಶತಕೋಟಿ ಡಾಲರ್ ಸಾಲದ ನೆರವಿನ ಪೈಕಿ ಮುಂದಿನ ಹಂತದ 1 ಶತಕೋಟಿ ಡಾಲರ್ ನೆರವು ಬಿಡುಗಡೆ ಮಾಡಲು ಐಎಂಎಫ್ ಪಾಕಿಸ್ತಾನಕ್ಕೆ ಹಲವು ಷರತ್ತು ವಿಧಿಸಿದೆ. ಹೀಗಾಗಿ ಆದಾಯ ಹೆಚ್ಚಿಸುವ ಸಲುವಾಗಿ ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ನೈಸರ್ಗಿಕ ಅನಿಲದ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಇದರಿಂದಾಗಿ ಈಗಾಗಲೇ ದಾಖಲೆಯ ಹಣದುಬ್ಬರಕ್ಕೆ ಸಿಕ್ಕಿ ನಲುಗಿದ್ದ ಜನಸಾಮಾನ್ಯರ ಬದುಕು ಇನ್ನಷ್ಟು ಹೈರಾಣಾಗಿದೆ. ವಿದೇಶಿ ವಿನಿಮಯ ಸಂಗ್ರಹ ತೀರಾ ಕಡಿಮೆಯಾಗಿರುವ ಕಾರಣ, ವಿದೇಶಗಳಿಂದ ಅಗತ್ಯ ವಸ್ತುಗಳು ಬಂದು ದೇಶದ ಬಂದರಿನಲ್ಲಿ ಕೊಳೆಯುತ್ತಿದ್ದರೂ ಅದನ್ನು ಡಾಲರ್ ರೂಪದಲ್ಲಿ ಹಣಕೊಟ್ಟು ಖರೀದಿ ಮಾಡುವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ..! ಮುಳುಗುತ್ತಿರುವ ದೇಶವನ್ನು ರಕ್ಷಿಸಬೇಕಾ ಭಾರತ..?
ಇದಕ್ಕೆ ನಾವೇ ಕಾರಣ
ಪಾಕಿಸ್ತಾನದ ಈ ಪರಿಸ್ಥಿತಿಗೆ ಸರ್ಕಾರ, ಅಧಿಕಾರಶಾಹಿ, ರಾಜಕೀಯ ನಾಯಕರು ಸೇರಿದಂತೆ ಎಲ್ಲರೂ ಕಾರಣ. ಕಾನೂನು ಮತ್ತು ಸಂವಿಧಾನ ಪಾಲಿಸದೇ ಹೋದಾಗ ಇಂಥ ಪರಿಸ್ಥಿತಿ ನಿರ್ಮಾಣ ಆಗುತ್ತದೆ.
- ಖವಾಜ ಆಸಿಫ್, ರಕ್ಷಣಾ ಸಚಿವ, ಪಾಕಿಸ್ತಾನ
ಇದನ್ನೂ ಓದಿ: ಜಮ್ಮು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ; ಪಾಕ್‌ಗೆ ತಿರುಗೇಟು