
ನವದೆಹಲಿ: ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA)ಯ ವಿಶೇಷ ನ್ಯಾಯಾಲಯವು, ತೋಷಖಾನಾ–2 ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್–ಇ–ಇನ್ಸಾಫ್ (PTI) ಸಂಸ್ಥಾಪಕ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕುರಿತು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ. ನ್ಯಾಯಾಲಯವು ಇಬ್ಬರಿಗೂ ತಲಾ ಪಾಕಿಸ್ತಾನಿ ರೂ. 16.4 ಮಿಲಿಯನ್ (ಸುಮಾರು ₹52.39 ಲಕ್ಷ) ದಂಡವನ್ನೂ ವಿಧಿಸಿದೆ. ನಿಗದಿತ ಅವಧಿಯಲ್ಲಿ ದಂಡವನ್ನು ಪಾವತಿಸಲು ವಿಫಲವಾದರೆ, ಕಾನೂನಿನ ಪ್ರಕಾರ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಪ್ರಕರಣವು ಪಾಕಿಸ್ತಾನದ ಸರ್ಕಾರಿ ಉಡುಗೊರೆಗಳನ್ನು (ತೋಷಖಾನಾ ವಸ್ತುಗಳು) ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದೆ. 2021ರಲ್ಲಿ ಪಾಕಿಸ್ತಾನಕ್ಕೆ ಅಧಿಕೃತ ರಾಜ್ಯ ಭೇಟಿಯ ವೇಳೆ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಬುಷ್ರಾ ಬೀಬಿಗೆ ಉಡುಗೊರೆಯಾಗಿ ನೀಡಿದ್ದ ದುಬಾರಿ ಬಲ್ಗರಿ ಆಭರಣ ಸೆಟ್ ಅನ್ನು ಕಡಿಮೆ ಮೌಲ್ಯದಲ್ಲಿ ಅಕ್ರಮವಾಗಿ ಖರೀದಿಸಿದ್ದ ಆರೋಪ ಈ ಪ್ರಕರಣದ ಕೇಂದ್ರಬಿಂದುವಾಗಿದೆ.
ನ್ಯಾಯಾಲಯದ ಆದೇಶದ ಪ್ರತಿ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದಂತೆ, ಶಿಕ್ಷೆ ವಿಧಿಸುವಾಗ ಇಮ್ರಾನ್ ಖಾನ್ ಅವರ ವಯಸ್ಸು ಮತ್ತು ಬುಷ್ರಾ ಬೀಬಿ ಮಹಿಳೆಯಾಗಿರುವ ಅಂಶವನ್ನು ಪರಿಗಣಿಸಿ “ಸೌಮ್ಯ ಶಿಕ್ಷೆ” ಅಳವಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಇಮ್ರಾನ್ ಅಹ್ಮದ್ ಖಾನ್ ನಿಯಾಜಿಯ ವೃದ್ಧಾಪ್ಯ ಮತ್ತು ಬುಷ್ರಾ ಇಮ್ರಾನ್ ಖಾನ್ ಮಹಿಳೆಯಾಗಿರುವ ಅಂಶಗಳನ್ನು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಶಿಕ್ಷೆ ವಿಧಿಸುವ ಸೌಮ್ಯ ನಿಲುವು ಅಳವಡಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಈ ತೀರ್ಪನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲೇ ನಡೆಸಿದ ವಿಚಾರಣೆಯ ವೇಳೆ ವಿಶೇಷ ನ್ಯಾಯಾಧೀಶ ಶಾರುಖ್ ಅರ್ಜುಮಂದ್ ಪ್ರಕಟಿಸಿದರು. 73 ವರ್ಷದ ಇಮ್ರಾನ್ ಖಾನ್ ಈಗಾಗಲೇ ಇದೇ ಜೈಲಿನಲ್ಲಿ ಬಂಧನದಲ್ಲಿದ್ದಾರೆ.
ಹೀಗೆ ಒಟ್ಟು 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದೇ ವಿಧಿಗಳ ಅಡಿಯಲ್ಲಿ ಬುಷ್ರಾ ಬೀಬಿಗೂ ಸಮಾನ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 382-B ರ ಸೌಲಭ್ಯವನ್ನೂ ನೀಡಿದ್ದು, ಇದರಿಂದ ಈಗಾಗಲೇ ಅನುಭವಿಸಿದ ಬಂಧನ ಅವಧಿಯನ್ನು ಶಿಕ್ಷೆಯಲ್ಲಿ ಪರಿಗಣಿಸಲಾಗುತ್ತದೆ.
ತೀರ್ಪಿನ ಬಳಿಕ, ಇಮ್ರಾನ್ ಖಾನ್ ಹಾಗೂ ಬುಷ್ರಾ ಬೀಬಿಯನ್ನು ಪ್ರತಿನಿಧಿಸುವ ವಕೀಲರು ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಈ ಪ್ರಕರಣ ರಾಜಕೀಯ ಪ್ರೇರಿತ ಮತ್ತು ಕಟ್ಟುಕಥೆ ಎಂದು ಇಮ್ರಾನ್ ಖಾನ್ ಹಾಗೂ ಅವರ ತಂಡ ಆರೋಪಿಸಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 342 ಅಡಿಯಲ್ಲಿ ನೀಡಿದ ತಮ್ಮ ಹೇಳಿಕೆಯಲ್ಲಿ, ಇಮ್ರಾನ್ ಖಾನ್ ಪ್ರಾಸಿಕ್ಯೂಷನ್‌ನ ಆರೋಪಗಳನ್ನು ತೀವ್ರವಾಗಿ ತಿರಸ್ಕರಿಸಿದರು. ಈ ಪ್ರಕರಣ “ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಮತ್ತು ಕಟ್ಟುಕಥೆ ಎಂದು ಅವರು ಹೇಳಿದ್ದಾರೆ. ತಾವು ಸಾರ್ವಜನಿಕ ಸೇವಕನಾಗಿ ಪಾಕಿಸ್ತಾನ ದಂಡ ಸಂಹಿತೆಯ ಸಂಬಂಧಿತ ವಿಧಿಗಳಿಗೆ ಒಳಪಡುವುದಿಲ್ಲ ಎಂದು ವಾದಿಸಿದ ಅವರು, ಆಭರಣದ ಮೌಲ್ಯ ಅಥವಾ ವಿವರಗಳ ಬಗ್ಗೆ ತಮಗೆ ಮಾಹಿತಿ ಇಲ್ಲ, ಅದು ತನ್ನ ಪತ್ನಿಗೆ ನೀಡಲಾದ ಉಡುಗೊರೆ ಎಂದು ಹೇಳಿದರು.
ತೋಷಖಾನಾ ನೀತಿ–2018ರ ಅಡಿಯಲ್ಲಿ ಸೂಕ್ತ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ಇಮ್ರಾನ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಉಡುಗೊರೆಯನ್ನು ಘೋಷಿಸಲಾಗಿದೆ, ಮೌಲ್ಯಮಾಪನ ಮಾಡಲಾಗಿದೆ ಮತ್ತು ಸರ್ಕಾರಕ್ಕೆ ಹಣ ಪಾವತಿಸಿದ ಬಳಿಕ ಕಾನೂನುಬದ್ಧವಾಗಿ ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ನಾವು ತೋಷಖಾನಾ ನೀತಿಯನ್ನು ಅಕ್ಷರಶಃ ಪಾಲಿಸಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ಅಲ್ಲಿನ ಮಾಧ್ಯಗಳು ವರದಿ ಮಾಡಿವೆ.
ಇಮ್ರಾನ್ ಖಾನ್ ಅವರು ಆಗಸ್ಟ್ 2023ರಿಂದ ಬಂಧನದಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ರಾಜ್ಯದ ರಹಸ್ಯ ಸೋರಿಕೆ, ಸರ್ಕಾರಿ ಉಡುಗೊರೆ ಮಾರಾಟ ಸೇರಿದಂತೆ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅವರು ಆರೋಪಗಳನ್ನು ಎದುರಿಸುತ್ತಿದ್ದಾರೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ತೋಷಖಾನಾ–2 ಎಂದು ಕರೆಯಲ್ಪಡುವ ಈ ಪ್ರಕರಣವು 2021ರ ರಾಜ್ಯ ಭೇಟಿಯ ವೇಳೆ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಬುಷ್ರಾ ಬೀಬಿಗೆ ನೀಡಿದ್ದ ದುಬಾರಿ ಬಲ್ಗರಿ ಆಭರಣ ಸೆಟ್‌ಗೆ ಸಂಬಂಧಿಸಿದೆ. ಪಾಕಿಸ್ತಾನದ ನಿಯಮಗಳ ಪ್ರಕಾರ, ಇಂತಹ ಉಡುಗೊರೆಗಳು ತೋಷಖಾನಾ (ರಾಜ್ಯ ಖಜಾನೆ)ಗೆ ಸೇರಬೇಕು. ಆದರೆ, ನಿರ್ದಿಷ್ಟ ಮೊತ್ತ ಪಾವತಿಸಿ ಅವುಗಳನ್ನು ಮರಳಿ ಖರೀದಿಸುವ ಅವಕಾಶವೂ ಇದೆ. ಇಮ್ರಾನ್ ಖಾನ್ ಅವರು ಖಾಸಗಿ ಸಂಸ್ಥೆಯೊಂದರ ಮೂಲಕ ಆಭರಣದ ಮೌಲ್ಯವನ್ನು ಕಡಿಮೆ ಮಾಡಿಸಿ, ನಂತರ ಅತಿ ಕಡಿಮೆ ಬೆಲೆಗೆ ಅದನ್ನು ಮರಳಿ ಖರೀದಿಸಿದ್ದಾರೆ ಎಂಬುದು ಆರೋಪ. ಈ ತೀರ್ಪು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಮತ್ತು ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ