ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್ ಪ್ರಧಾನಿಗೆ ಬೆಲಾರಸ್ ಅಧ್ಯಕ್ಷರಿಂದ ತರಾಟೆ. ಭಾರತದ ಗುಪ್ತಚರ ಮಾಹಿತಿ ಪಾಕ್‌ಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ. ಟ್ರಂಪ್ ಅಧಿಕಾರ ವಹಿಸುವ ಮುನ್ನ ವಿದ್ಯಾರ್ಥಿಗಳು ಅಮೆರಿಕಕ್ಕೆ ಮರಳಲು ವಿವಿಗಳ ಸಲಹೆ.
ಇಸ್ಲಾಮಾಬಾದ್: 3 ದಿನಗಳ ಪ್ರವಾಸಕ್ಕೆ ಆಗಮಿಸಿದ್ದ ಬೆಲಾರಸ್ ಅಧ್ಯಕ್ಷರ ಜೊತೆ ಕಾಶ್ಮೀ ರ ವಿಷಯ ಪ್ರಸ್ತಾಪಿಸಲು ಹೋದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಎಲ್ಲರ ಎದುರೇ ತಪರಾಕಿ ಸಿಕ್ಕಿದ ಘಟನೆ ನಡೆದಿದೆ. ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆನ್ನೋ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಶೆಹಬಾಜ್ ಕಾಶ್ಮೀರ ವಿಷಯ ಪ್ರಸ್ತಾಪಿಸಿ ಭಾರತವನ್ನು ಖಂಡಿಸುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಸ್ಥಳದಲ್ಲೇ ಸ್ಪಷ್ಟವಾಗಿ ತಿರುಗೇಟು ನೀಡಿದ ಅಲೆಕ್ಸಾಂಡರ್, 'ನಾನು ಇಲ್ಲಿಗೆ ಬಂದಿರುವುದು 2 ದೇಶಗಳ ನಡುವೆ ಸಂಬಂಧ ವೃದ್ಧಿಯ ಮಾತುಕತೆಗಾಗಿ ಮಾತ್ರ. ಹೀಗಾಗಿ ಕಾಶ್ಮೀರ ಸೇರಿದಂತೆ ಇತರೆ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ. ಇದರಿಂದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಭಾರೀ ಮುಖಭಂಗವಾಗಿದೆ. ಇದು ಜಗತ್ತಿನಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಇನ್ನು ಮುಂದೆ ಪಾಕ್ ಬಂದವರ ಜತೆ ಕಾಶ್ಮೀರ ವಿಷಯ ಪ್ರಸ್ತಾಪ ಕೈಬಿಡಬೇಕು ಎಂದು ಪಾಕ್ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.
₹200ಗೆ ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿ ಮಾರುತ್ತಿದ್ದವ ಬಂಧನ
ಅಹಮದಾಬಾದ್: ಭಾರತದ ಗುಪ್ತಚರ ಮಾಹಿತಿಗಳನ್ನು ಕೇವಲ 200 ರು. ಆಸೆಗಾಗಿ ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳ ಬಂಧಿಸಿದೆ. ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಜೆಟ್ಟಿಯಲ್ಲಿ ವೆಲ್ಡರ್ ಕಂ ಕಾರ್ಮಿಕ ಆಗಿದ್ದ ದೀಪೇಶ್ ಗೋಹೆಲ್ ಬಂಧಿತ. ಈತ ಕರಾವಳಿ ಕಾವಲು ಪಡೆಯ ಹಡಗುಗಳ ಬಗ್ಗೆ ಪಾಕ್ ಏಜೆಂಟ್‌ಗೆ ಮಾಹಿತಿ ರವಾನಿಸುತ್ತಿದ್ದ. ಏಳು ತಿಂಗಳ ಹಿಂದೆ ಈತನಿಗೆ ಫೇಸ್‌ಬುಕ್‌ನಲ್ಲಿ 'ಸಾಹೀಮಾ' ಎಂಬ ಪ್ರೊಫೈಲ್ ನೇಮ್ ಮೂಲಕ ಸಂಪರ್ಕಕ್ಕೆ ಪಾಕ್‌ನ ಏಜೆಂಟ್ ಒಬ್ಬರು ಸಂಪರ್ಕ್ಕೆ ಬಂದಿದ್ದಳು. ಪಾಕ್ ನೌಕಾ ಪಡೆಯ ಬೇಹುಗಾರ್ತಿಯಾಗಿದ್ದ ಆಕೆ, ಕರಾವಳಿ ಕಾವಲು ಪಡೆಯ ಹಡಗಿನ ಓಡಾಟದ ಕುರಿತು ಪ್ರತಿ ಮಾಹಿತಿಗೆ 200 ರು. ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪಾಕ್‌ನಿಂದ ಗೋಹಲ್‌ಗೆ ಸಂದೇಶಗಳು ಬರುತ್ತಿದ್ದವು. ಅವುಗಳ ಮೇಲೆ ನಿಗಾ ಇಟ್ಟಾಗ ಈ ದೇಶದ್ರೋಹಿ ಕೃತ್ಯ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಟ್ರಂಪ್ ಅಧಿಕಾರಕ್ಕೆ ಮುನ್ನವೇ ಅಮೆರಿಕಕ್ಕೆ ಬನ್ನಿ: ವಿವಿ ಸಲಹೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ 2025 ಜ.20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಷ್ಟರೊಳಗೆ ನಾನಾ ಕಾರಣಕ್ಕೆ ತವರಿಗೆ ಹೋಗಿರುವ ವಿದ್ಯಾರ್ಥಿಗಳು ಮರಳಿ ಅಮೆರಿಕಕ್ಕೆ ಬರುವುದು ಸೂಕ್ತ ಎಂದು ಹಲವು ವಿಶ್ವವಿದ್ಯಾನಿಲಯಗಳು ಎಚ್ಚರಿಕೆ ರೂಪದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿವೆ. ಜ.20ರಂದು ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದೇ ದಿನದಂದು ವಲಸೆ ಮತ್ತು ಆರ್ಥಿಕ ನೀತಿಗಳನ್ನು ಗುರಿಯಾಗಿಸಿಕೊಂಡು ಕಠಿಣ ನಿಯಮ ಗಳನ್ನು ಜಾರಿಗೆ ತರುವ ಬಗ್ಗೆ ಘೋಷಿಸಿದ್ದಾರೆ. ಹೀಗಾಗಿ ಮುಂದೆ ಆಗಬಹುದಾದ ಯಾವುದೇ ತೊಂದರೆ ತಪ್ಪಿಸಲು ಅಷ್ಟರೊಳಗೆ ಅಮೆರಿಕಕ್ಕೆ ಮರಳಿ ಎಂದು ಮ್ಯಸಾಚ್ಯುಸೆಟ್ಸ್ ಸೇರಿ ಹಲವು ವಿವಿಗಳು ವಿದ್ಯಾರ್ಥಿಗಳಿಗೆ ಸಲಹೆ ನೀಡಿವೆ. ಮತ್ತೊಂದೆಡೆ ಹಲವು ಉದ್ಯಮ ಸಂಸ್ಥೆಗಳು ಕೂಡಾ ನಾನಾ ಕಾರಣಕ್ಕೆ ತಮ್ಮ ತವರು ದೇಶಗಳಿಗೆ ತೆರಳಿರುವ ಉದ್ಯೋಗಿಗಳಿಗೆ ಇದೇ ರೀತಿಯ ಸಲಹೆ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ ನಿಯಂತ್ರಿಸಲಾಗದೇ ಹೈರಾಣಾದ ಪಾಕ್ ಸೇನೆ
ಇದನ್ನೂ ಓದಿ:ಸಕ್ಕರೆ ಕಾಯಿಲೆಯಲ್ಲಿ ಪಾಕಿಸ್ತಾನ ನಂ.1, ಟಾಪ್ 10ನಲ್ಲಿ 8 ಮುಸ್ಲಿಂ ರಾಷ್ಟ್ರಗಳು