ಏಡ್ಸ್‌ ಸೋಂಕಿತ 100 ವಲಸಿಗರನ್ನು ಗಡೀಪಾರು ಮಾಡಿದ ಕುವೈತ್ ಸರ್ಕಾರ

By Kannadaprabha News  |  First Published Dec 1, 2024, 8:06 AM IST

ಕುವೈತ್ ಸರ್ಕಾರವು 100 ಏಡ್ಸ್ ಸೋಂಕಿತ ವಲಸಿಗರನ್ನು ಗಡೀಪಾರು ಮಾಡಿದೆ. ಸೂರತ್‌ನಲ್ಲಿ ಕಸಕ್ಕೆ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವಾಗ ವಿಷಾನಿಲ ಸೇವಿಸಿ ಮೂರು ಬಾಲಕಿಯರು ಮೃತಪಟ್ಟಿದ್ದಾರೆ. ವಾರಾಣಸಿ ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ 200 ಬೈಕ್‌ಗಳು ಭಸ್ಮವಾಗಿವೆ.


ಕುವೈತ್ ಸಿಟಿ: ಏಡ್ಸ್‌ ಸೋಂಕಿಗೆ ತುತ್ತಾದ 100 ವಲಸಿಗರನ್ನು ಕುವೈತ್ ಸರ್ಕಾರ ಗಡೀಪಾರು ಮಾಡಿದೆ. ಈ ಕುರಿತು ಮಾತನಾಡಿದ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಫಹದ್ ಅಲ್-ಫಮ್ಹಾಸ್, ಇತ್ತೀಚೆಗೆ ಏಡ್ಸ್ ಸೋಂಕಿನ ಬಗ್ಗೆ ತನಿಖೆ ನಡೆಸಿದ್ದು, 165 ಕುವೈತ್ ಪ್ರಜೆಗಳಲ್ಲಿ ಹಾಗೂ 100ಕ್ಕೂ ಹೆಚ್ಚು ವಲಸಿಗರಲ್ಲಿ ಸೋಂಕು ದೃಢಪಟ್ಟಿದೆ. ಆದ್ದರಿಂದ ಆ 100 ವಲಸಿಗ ರನ್ನು ಕವೈತ್‌ನಿಂದ ಗಡೀಪಾರು ಮಾಡಿದ್ದೇವೆ ಎಂದರು. ಈ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದು, 2025ಕ್ಕೆ ಸೋಂಕ ಹರಡುವಿಕೆ ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಕಸಕ್ಕೆ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವ ವೇಳೆ ವಿಷಗಾಳಿಗೆ ಮೂರು ಬಲಿ
ಸೂರತ್: ಕಸಕ್ಕೆ ಬೆಂಕಿ ಹಾಕಿ ಚಳಿ ಕಾಯಿಸುತ್ತಿದ್ದ ವೇಳೆ ಅದರಿಂದ ಹೊರಹೊಮ್ಮಿದ ವಿಷಗಾಳಿ ಸೇವಿಸಿ ಮೂವರು ಬಾಲಕಿಯರು ಮೃತಪಟ್ಟ ದಾರುಣ ಘಟನೆ ಗುಜರಾತಿನ ಸೂರತ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ದುರ್ಗಾ ಮಹಂತೋ (12), ಅಮಿತಾ ಮಹಂತೋ (14), ಮತ್ತು ಅನಿತಾ ಮಹಂತೋ (8) ಮೃತ ದುರ್ದೈವಿಗಳು. ಶುಕ್ರವಾರ ಸಂಜೆ ವಿಪರೀತ ಚಳಿಯಿದ್ದ ಕಾರಣ ಅಲ್ಲೆ ಇದ್ದ ಕಸಕ್ಕೆ ಬೆಂಕಿ ಹಾಕಿ ಚಳಿ ಕಾಯಿಸುತ್ತಿದ್ದ ವೇಳೆ ಹೊರಹೊಮ್ಮಿದ ವಿಷ ಅನಿಲ ಸೇವಿಸಿದ್ದು, ವಾಂತಿ ಮಾಡಿಕೊಂಡು ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

Latest Videos

undefined

ವಾರಾಣಸಿ ರೈಲ್ವೆ ಸ್ಟೇಷನ್ ಪಾರ್ಕಿಂಗ್‌ನಲ್ಲಿ ಬೆಂಕಿ: 200 ಬೈಕ್‌ಗಳು ಭಸ್ಮ
ವಾರಾಣಸಿ: ಇಲ್ಲಿನ ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿ 200 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ. ನಿಲ್ದಾಣದ ಪ್ಲಾಟ್‌ಫಾರಂ ಪಾರ್ಕಿಂಗ್ ಬಳಿ ಬೆಂಕಿ ಕಾಣಿಕೊಂಡು ಈ ಘಟನೆ ಸಂಭವಿಸಿದೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ರೈಲ್ವೆ ಅಧಿಕಾರಿಗಳು, ರೈಲ್ವೆ ಸಿಬ್ಬಂದಿಯ ವಾಹನಗಳನ್ನು ನಿಲ್ಲಿಸಲೆಂದೇ ಈ ಪಾರ್ಕಿಂಗ್ ನಿರ್ಮಿಸಲಾಗಿತ್ತು. ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ 200 ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದರು. ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.

ಕದನ ವಿರಾಮ ನಿಯಮ ಉಲ್ಲಂಘಿಸಿದ ಹಿಜ್ಬುಲ್ಲಾ ಇಸ್ರೇಲ್ ಮತ್ತೆ ದಾಳಿ
ಟೆಲ್ ಅವಿವ್: ಹಿಜ್ಜುಲ್ಲಾ ಜೊತೆಗಿನ ಕದನ ವಿರಾಮದ ಹೊರತಾಗಿಯೂ ಲೆಬನಾನ್‌ನ ಕೆಲ ಪ್ರದೇಶಗಳ ಮೇಲೆ ಇಸ್ರೇಲ್ ಶನಿವಾರ ವಾಯುದಾಳಿ ನಡೆಸಿದೆ. ಹಿಜ್ಜುಲ್ಲಾ ಉಗ್ರರು ಸಿರಿಯಾ ಗಡಿಯಲ್ಲಿ ಶಸ್ತ್ರಾಸ್ತ್ರ ಸಾಗಣೆ ಮಾಡುತಿದ್ದುದ್ದು ಕಂಡುಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಕದನ ವಿರಾಮದ ನಿಯಮ ಉಲ್ಲಂಘನೆ ಮಾಡಿದರೆ ದಾಳಿಯ ಹಕ್ಕನ್ನು ತಾನು ಉಳಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿತ್ತು.

ಸಂಭಲ್‌ಗೆ ಹೊರಗಿನವರ ಪ್ರವೇಶ ನಿಷೇಧ ಆದೇಶ ಡಿ.10ರವರೆಗೆ ವಿಸ್ತರಣೆ
ಲಖನೌ/ಸಂಭಲ್: ಅಶಾಂತಿ ಮನೆ ಮಾಡಿದ್ದ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಲ್ಲಿಗೆ ಹೊರಗಿನವರ ಪ್ರವೇಶ ನಿಷೇಧವನ್ನು ಡಿ.10ವರೆಗೆ ವಿಸ್ತರಿಸಿದೆ. ಇತ್ತೀಚೆಗೆ ಇಲ್ಲಿನ ಶಾಹಿ ಜಾಮಾ ಮಸೀದಿ ಈ ಹಿಂದೆ ದೇಗುಲವಾಗಿತ್ತೇ ಎಂಬುದರ ಬಗ್ಗೆ ಕೆಳ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸುವ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ಸದ್ಯಕ್ಕೆ ಪರಿಸ್ಥಿತಿ ಯಥಾ ಸ್ಥಿತಿಗೆ ಮರಳುತ್ತಿದ್ದು, ಈ ನಡುವೆ ಹಿಂಸಾಚಾರದ ಮಾಹಿತಿಯನ್ನು ಸಂಗ್ರಹಿಸಲು ಸಮಾಜವಾದಿ ಪಕ್ಷದ 15 ಸದಸ್ಯರ ನಿಯೋಗವೊಂದು ಶನಿವಾರ ಸಂಭಲ್‌ಗೆ ಭೇಟಿ ನೀಡಲು ಸಿದ್ಧತೆ ನಡೆಸುತ್ತಿತ್ತು. ಈ ಹೊತ್ತಿನಲ್ಲಿ ರಾಜ್ಯ ಸರ್ಕಾರ ನಿಷೇಧದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: 10 ವರ್ಷದಿಂದ ಬೆಂಗಳೂರಲ್ಲಿ ನೆಲೆಸಿದ್ದ ಬಾಂಗ್ಲಾ ಗುಜರಿ ವ್ಯಾಪಾರಿ ಬಂಧನ

ಇದನ್ನೂ ಓದಿ: ಒಂದೇ ವಾರದಲ್ಲಿ 21,971 ಮಂದಿ ಅಕ್ರಮ ವಿದೇಶಿ ವಲಸಿಗರನ್ನು ಬಂಧಿಸಿದ ಸೌದಿ ಪೊಲೀಸರು!

 

click me!