ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. ಇದನ್ನು ನಂಬಿದ ನೂರಾರು ಜನರು ಉಪವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನೈರೋಬಿ (ಜುಲೈ 20, 2023): ಉಪವಾಸ ಮಾಡಿದರೆ ಏಸುಕ್ರಿಸ್ತನನ್ನು ಭೇಟಿ ಮಾಡಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತು ಕೇಳಿ ಉಪವಾಸ ಮಾಡಿ ಮೃತಪಟ್ಟ ಇನ್ನೂ 12 ಜನರ ಶವಗಳು ಕೀನ್ಯಾದ ಶಕಹೊಲ ಅರಣ್ಯದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಕಳೆದ 3 ತಿಂಗಳಲ್ಲಿ ಸಿಕ್ಕಿದ ಶವಗಳ ಸಂಖ್ಯೆ 403ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೌಲ್ ಮೆಕೆಂಝಿ ಎಂಬ ನಕಲಿ ಧರ್ಮ ಪ್ರಚಾರಕನೊಬ್ಬ, 2003ರಲ್ಲಿ ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಎಂಬ ಚರ್ಚ್ ಸ್ಥಾಪಿಸಿ ಅದರಲ್ಲಿ ಪಾದ್ರಿಯಾಗಿದ್ದ. 2017ರಲ್ಲಿ, ‘ಮಕ್ಕಳಿಗೆ ಶಾಲೆಗೆ ಹೋಗಬೇಡಿ. ಬೈಬಲ್ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ’ ಎಂದು ಪ್ರಚಾರ ಮಾಡಿದ್ದ. ಅದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. ಇದನ್ನು ನಂಬಿದ ನೂರಾರು ಜನರು ಉಪವಾಸ ಮಾಡುತ್ತಿದ್ದರು. ಅವರು ಉಪವಾಸ ಮುರಿಯದಂತೆ ನೋಡಿಕೊಳ್ಳಲು ತನ್ನ ಶಿಷ್ಯರನ್ನು ನೇಮಿಸಿದ್ದ.
ಇದನ್ನು ಓದಿ: 3 ವಾರದಿಂದ ಚೀನಾ ಅಧ್ಯಕ್ಷರ ಆಪ್ತ ಸಚಿವ ಕ್ವಿನ್ ಗಾಂಗ್ ನಾಪತ್ತೆ?
ಕಳೆದ ಏಪ್ರಿಲ್ ತಿಂಗಳಿನಲ್ಲಿ ಹೀಗೆ ಸಾವಿಗೀಡಾದವರ ಸಾಮೂಹಿಕ ಶವಗಳು ಹಾಗೂ ಸಾಯುವ ಸ್ಥಿತಿಯಲ್ಲಿದ್ದ ಜನರು ಪತ್ತೆಯಾದ ಬಳಿಕ ಪೌಲ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಆತ ಅರಣ್ಯದಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಸ್ಥಳದಲ್ಲಿ 300ಕ್ಕೂ ಹೆಚ್ಚು ಶವಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಸುತ್ತಮುತ್ತಲ ಪ್ರದೇಶಗಳಲ್ಲೂ ಶವಗಳ ಪತ್ತೆಗೆ ಆದೇಶಿಸಿತ್ತು. ಅದರಂತೆ ನಡೆದ ಹುಡುಕಾಟದಲ್ಲಿ ಇದೀಗ ಮತ್ತೆ 12 ಶವಗಳು ಸಿಕ್ಕಿವೆ. ಇದರೊಂದಿಗೆ ಪೌಲ್ ಮಾತು ನಂಬಿ ಮೃತಪಟ್ಟವರ ಸಂಖ್ಯೆ 403ಕ್ಕೆ ತಲುಪಿದೆ.
ಇದನ್ನೂ ಓದಿ: Snake Smuggling: ಬ್ರಾನಲ್ಲಿ 5 ಜೀವಂತ ಹಾವುಗಳನ್ನು ಸಾಗಿಸಿದ ಮಹಿಳೆ