ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪ, ಪಕ್ಕದ ಥಾಯ್ಲೆಂಡ್‌ನಲ್ಲೂ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ಹಾನಿಗೆ ಕಾರಣವಾಗಿದೆ. ಎರಡೂ ದೇಶಗಳಲ್ಲಿ ಬಲಿಯಾದವರ ಸಂಖ್ಯೆ 1600 ದಾಟಿದೆ.
ಬ್ಯಾಂಕಾಕ್/ನೈಪಿ ತಾವ್ (ಮಾ.30): ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪ, ಪಕ್ಕದ ಥಾಯ್ಲೆಂಡ್‌ನಲ್ಲೂ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ಹಾನಿಗೆ ಕಾರಣವಾಗಿದೆ. ಎರಡೂ ದೇಶಗಳಲ್ಲಿ ಬಲಿಯಾದವರ ಸಂಖ್ಯೆ 1600 ದಾಟಿದೆ, ಇದರ ನಡುವೆ ಮ್ಯಾನ್ಮಾರ್‌ನಲ್ಲಿ ಶನಿವಾರ ಮಧ್ಯಾಹ್ನ ಮತ್ತೆ 5.1 ತೀವ್ರತೆಯ ಇನ್ನೊಂದು ಕಂಪನ ಸಂಭವಿಸಿ ಆತಂಕ ಸೃಷ್ಟಿಸಿದೆ. ಮ್ಯಾನ್ಮಾರ್ ಅತಿ ಹೆಚ್ಚು ಬಾಧಿತವಾಗಿದ್ದು, ಈ ದೇಶವೊಂದರಲ್ಲೇ ಸುಮಾರು 1644 ಜನ ಅಸುನೀಗಿ ಸುಮಾರು 3,500 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ 30 ಜನ ಕಾಣೆಯಾಗಿದ್ದಾರೆ.
ರಾಜಧಾನಿ ನೈಪಿ ತಾವ್ ನಗರದ ಏರ್‌ಪೋರ್ಟ್‌ನ ವಾಯು ನಿಯಂತ್ರಣ ಗೋಪುರ (ಎಟಿಸಿ ಟವರ್) ಧರಾಶಾಯಿಯಾಗಿದೆ. ಇನ್ನು ಥಾಯ್ಲೆಂಡ್‌ನಲ್ಲಿ 6 ಜನ ಪ್ರಾಣ ಕಳೆದುಕೊಂಡಿದ್ದು, 26 ಮಂದಿ ಗಾಯಗೊಂದಿದ್ದಾರೆ. 47 ಜನರಿಗಾಗಿ ಹುಡುಕಾಟ ನಡೆದಿದೆ ಎಂದು ಸರ್ಕಾರ ಹೇಳಿದೆ. ವಸತಿ ಕಟ್ಟಡಗಳು, ಆಸ್ಪತ್ರೆಗಳು, ಧಾರ್ಮಿಕ ಕೇಂದ್ರಗಳಿಗೆ ಆದ ಹಾನಿಯಿಂದ ಹಲವರು ಅಸುನೀಗಿದ್ದಾರೆ. ಇಲ್ಲಿನ ಜನಪ್ರಿಯ ಚಟುಚಾಟ್ ಮಾರುಕಟ್ಟೆಯ ಬಳಿ ಇರುವ ನಿರ್ಮಾಣ ಪ್ರದೇಶದಲ್ಲೇ ಅತಿಹೆಚ್ಚು ಹಾನಿಯಾಗಿದೆ.
ಮ್ಯಾನ್ಮಾರ್ ಭೂಕಂಪ: ತಲೆ ಸುತ್ತಿದಂತಾಯಿತು, ಕನ್ನಡಿಗನ ಅನುಭವ
ಮ್ಯಾನ್ಮಾರ್ ನರಕ ಸದೃಶ: ಮ್ಯಾನ್ಮಾರ್‌ಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಉಂಟಾದ 2 ಭೂಕಂಪದಿಂದ ಕಟ್ಟಡಗಳು ಧರಾಶಾಯಿ ಆಗಿವೆ. ಅವುಗಳ ಅವಶೇಷಗಳ ಅಡಿಯಿಂದ ಇನ್ನೂ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ರಸ್ತೆ, ವಿದ್ಯುತ್, ಇಂಟರ್‌ನೆಟ್ ಸೇರಿ ಮೂಲಭೂತ ಸೌಕರ್ಯಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವ ಕೆಲಸ ಶುರು ಮಾಡಲಾಗಿದೆ.
ಕಾಣೆಯಾದವರು ಬದುಕಿರುವ ಸಾಧ್ಯತೆ ಕ್ಷೀಣ: ಈಗಾಗಲೇ ದೈತ್ಯ ಸಾಧನಗಳನ್ನು ಬಳಸಿ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಶುರುವಾಗಿದೆಯಾದರೂ, ಕುಸಿದ ಕಟ್ಟಡಗಳ ಕೆಳಗೆ ಸಿಲುಕಿರುವವರು ಮತ್ತು ಕಾಣೆಯಾಗಿರುವವರು ಜೀವಂತ ಪತ್ತೆಯಾಗುವ ಸಾಧ್ಯತೆ ಸಮಯ ಕಳೆದಂತೆ ಕ್ಷೀಣಿಸತೊಡಗಿದೆ. ತನ್ನ ಪತಿ ಹಾಗೂ ಸ್ನೇಹಿತರು ಅವಶೇಷಗಳ ಅಡಿ ಸಿಲುಕಿರುವ ಸುದ್ದಿ ತಿಳಿದು ಬಲು ದುಖಃದಿಂದ ಮಾತನಾಡಿದ ನರುಯೆಮೋಲ್ ಥೋಂಗ್ಲೆಕ್ ಎಂಬಾಕೆ, ‘ಅವರೆಲ್ಲ ಬದುಕುಳಿಯಲಿ ಎಂದು ಪ್ರಾರ್ಥಿಸುತ್ತಿದೆ.
ಆದರೆ ಇಲ್ಲಿ ಬಂದು ನೋಡಿದಾಗ ಅವರು ಎಲ್ಲಿ, ಯಾವ ಮೂಲೆಯಲ್ಲಿ ಇದ್ದಾರೆಂದೂ ತಿಳಿಯುತ್ತಿಲ್ಲ. ಆದರೂ ಪ್ರಾರ್ಥನೆಯನ್ನು ಮುಂದುವರೆಸಿದ್ದೇನೆ. ಈ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ’ ಎಂದು ಹನಿಗಣ್ಣಾಗಿದ್ದಾರೆ. ತನ್ನ ಮಗಳ ಸ್ಥಿತಿ ಏನಾಗಿದೆಯೆಂಬ ಅರಿವಿರದ ತಾಯಿಯೊಬ್ಬರು ಮಾತನಾಡಿ, ‘ಭೂಕಂಪಕ್ಕೂ ಒಂದು ತಾಸಿನ ಮುಂಚೆ ಆಕೆಯೊಂದಿಗೆ ಮಾತನಾಡಿದ್ದೆ. ಬಳಿಕ ಏನಾಯಿತೆಂದು ತಿಳಿದಿಲ್ಲ. ನನ್ನ ಮಗಳು ಸುರಕ್ಷಿತವಾಗಿ ಆಸ್ಪತ್ರೆಯಲ್ಲಿ ಇದ್ದಾಳೆ ಎಂಬ ಆಸೆಯಿಂದಲೇ ಪ್ರಾರ್ಥಿಸುತ್ತಿದ್ದೇನೆ’ ಎಂದು ಭಾವುಕರಾದರು.
ರಕ್ತಕ್ಕೆ ಹೆಚ್ಚಿದ ಬೇಡಿಕೆ- ಸಹಾಯಕ್ಕೆ ಯಾಚನೆ: ಭೂಕಂಪದಿಂದ ಹೆಚ್ಚು ಹಾನಿಯನುಭವಿಸಿದ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಲ್ಲಿ ಗಾಯಾಳುಗಳ ಚಿಕಿತ್ಸೆ ನೀಡಲಾಗುತ್ತಿದ್ದು, ರಕ್ತಕ್ಕೆ ಬೇಡಿಕೆ ಅಧಿಕವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಮ್ಯನ್ಮಾರ್ ಆಡಳಿತಕ್ಕೆ ಸಾಧ್ಯವಾಗದ ಕಾರಣ ವಿದೇಶಗಳ ಬಳಿ ನೆರವಿಗಾಗಿ ಮನವಿ ಮಾಡಿದೆ.
ಭೂಕಂಪದ ಬಳಿಕವೂ ಮಿಲಿಟರಿ ಅಟ್ಟಹಾಸ: ಒಂದು ಕಡೆ ಮ್ಯಾನ್ಮಾರ್ ವಾಸಿಗಳು ಭೀಕರ ಭೂಕಂಪದ ಹೊಡೆತದಿಂದ ತಪ್ಪಿಸಿಕೊಂಡು ಸುರಕ್ಷಿತರಾಗಲು ಹೆಣಗಾಡುತ್ತಿದ್ದರೆ, ಇನ್ನೊಂದು ಕಡೆ 2021ರಿಂದ ದೇಶ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿರುವ ಸೇನಾ ಪಡೆಗಳು ದಾಳಿಗಳನ್ನು ಉಂದುವರೆಸಿವೆ. ‘ಭೂಕಂಪದ ಬಳಿಕ ಉತ್ತರದ ಕರೆನ್ನಿ ಹಾಗೂ ದಕ್ಷಿಣದ ಶಾನ್ ಎಂಬಕಡೆ ಸೇನೆ ವಾಯುದಾಳಿ ನಡೆಸಿದೆ’ ಎಂದು ಮ್ಯಾನ್ಮಾರ್ ಜನರಿಗೆ ಮಾನವೀಯ ನೆರವು ನೀಡುವ ಸಂಸ್ಥೆಯ ಸ್ಥಾಪಕರಾ ಅಮೇರಿಕದ ವಿಶೇಷ ಪಡೆಗಳ ಮಾಜಿ ಯೋಧ ಡೇವ್ ಯುಬ್ಯಾಂಕ್ ಹೇಳಿದ್ದಾರೆ. ಅಂತೆಯೇ, ‘ಸೇನೆಯೇ ಬಹುತೇಕ ಹಳ್ಳಿಗಳನ್ನು ನಾಶ ಮಾಡಿದ್ದ ಕಾರಣ ಭೂಕಂಪದಿಂದ ಅಷ್ಟೇನು ಹಾನಿಯಾಗಲಿಲ್ಲ’ ಎಂದು ಅವರು ವಿಷಾದದಿಂದ ನುಡಿದಿದ್ದಾರೆ.
ಹಂಪಿಯ ಬಳಿ ಮತ್ತಷ್ಟು ಸಂಗೀತ ಕಲ್ಲುಗಳು ಪತ್ತೆ: ವಿಶೇಷತೆ ಏನು?
ವಿದೇಶಗಳ ನೆರವು: ಮ್ಯಾನ್ಮಾರ್‌ನ ಭೂಕಂಪ ಸಂತ್ರಸ್ತರ ನೆರವಿಗೆ ಈಗಾಗಲೇ ಭಾರತ ಧಾವಿಸಿದ್ದು, ಅದರೊಂದಿಗೆ ರಷ್ಯಾ, ಅಮೆರಿಕ, ಚೀನಾ, ದಕ್ಷಿಣ ಕೊರಿಯಾ ದೇಶಗಳೂ ಸಹಾಯಹಸ್ತ ಚಾಚಿವೆ. ಭೂಕಂಪ ಪತ್ತೆ ಸಾಧನ, ಡ್ರೋನ್‌ಗಳಂತಹ ಅಗತ್ಯ ವಸ್ತುಗಳೊಂದಿಗೆ ಚೀನಾದ 37 ಜನರ ತಂಡ ಯಾಂಗೂನ್ ನಗರ ತಲುಪಿದ್ದು, ಇನ್ನೂ ಹೆಚ್ಚು ತಂಡಗಳು ಆರೋಗ್ಯ ಕಿಟ್, ಜನರೇಟರ್ ಸೇರಿ ವಿವಿಧ ವಸ್ತುಗಳೊಂದಿಗೆ ತೆರಳಿವೆ. ರಷ್ಯಾದಿಂದ 120 ರಕ್ಷಕರನ್ನು ಹೊತ್ತ 2 ವಿಮಾನಗಳು ಮ್ಯಾನ್ಮಾರ್‌ನತ್ತ ಹಾರಿವೆ. ದಕ್ಷಿಣ ಕೊರಿಯಾ 17 ಕೋಟಿ ರು. ಹಾಗೂ ಅಮೆರಿಕ 42 ಕೋಟಿ ರು. ನೆರವು ನೀಡಿವೆ.