
ಶಾಂಘೈ: ಹಚ್ಚೆ ಹಾಕುವಾಗ ಬಹಳ ನೋವಾಗುತ್ತದೆ ಕೆಲವರಿಗೆ ಜ್ವರವೂ ಬರುತ್ತದೆ. ಅದರೂ ಅನೇಕರು, ಶೋಕಿಗಾಗಿ ಪ್ರೀತಿಗಾಗಿ ನೋವಾದರೂ ಹಚ್ಚೆ ಹಾಕ್ಸಿಕೊಳ್ತಾರೆ. ಆದರೆ ಇಲ್ಲೊಬ್ಬ ನಾಯಿಯ ಮಾಲೀಕ ತನ್ನ ರೋಮ ಇಲ್ಲದ ನಾಯಿಗೆ ಮೈತುಂಬಾ ಹಚ್ಚೆ ಹಾಕಿದ್ದಾನೆ. ಅದೂ ಅನಸ್ಥೇಸಿಯಾ ಇಲ್ಲದೇ ಈತ ನಾಯಿಗೆ ಹಚ್ಚೆ ಹಾಕಿದ್ದಾಗಿ ಹೇಳಿಕೊಂಡಿದ್ದು, ಈ ವಿಚಾರ ಬಹಿರಂಗವಾಗುತ್ತಿದ್ದಂತೆ ನಾಯಿಯ ಮಾಲೀಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಚೀನಾದಲ್ಲಿ ನಡೆಯುತ್ತಿರುವ ಏಷ್ಯಾ ಸಾಕು ಪ್ರಾಣಿಗಳ ಉತ್ಸವದಿಂದ ಆತನನ್ನು ಹೊರಗೆ ಹಾಕಲಾಗಿದೆ.
ಮೆಕ್ಸಿಕನ್ ಮೂಲದ ಕೂದಲುರಹಿತ ನಾಯಿಗೆ ಮೈತುಂಬಾ ಟ್ಯಾಟೂ ಹಾಕಿದ ಮಾಲೀಕ
ಈ ರೋಮ ಇಲ್ಲದ ಆದರೆ ಮೈತುಂಬಾ ಡ್ರ್ಯಾಗನ್ ಟ್ಯಾಟೂ ಹಾಕಿಸಲ್ಪಟ್ಟಿದ್ದ ಶ್ವಾನವನ್ನು ಚೀನಾದ ಶಾಂಘೈನಲ್ಲಿ ನಡೆದ ಪೆಟ್ ಫೇರ್ ಏಷ್ಯಾದಲ್ಲಿ ಮೊದಲಿಗೆ ಪ್ರದರ್ಶನ ಮಾಡಲಾಗಿತ್ತು. ಈ ಶ್ವಾನದ ವೀಡಿಯೋವನ್ನು ಮೊದಲು ಆಗಸ್ಟ್ 22ರಂದು ಏಷ್ಯಾದ ಅತಿದೊಡ್ಡ ಸಾಕುಪ್ರಾಣಿ ಉತ್ಸವ ಕಾರ್ಯಕ್ರಮಗಳಲ್ಲಿ ಒಂದಾದ ಪೆಟ್ ಫೇರ್ ಏಷ್ಯಾದಲ್ಲಿ ಭಾಗವಹಿಸಿದರೊಬ್ಬರು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಮೈತುಂಬ ಡ್ರ್ಯಾಗನ್ ಟ್ಯಾಟೂ ಹೊಂದಿರುವ ಮೆಕ್ಸಿಕನ್ ಮೂಲದ ಕೂದಲುರಹಿತ ನಾಯಿಯನ್ನು ಕಾಣಬಹುದು.ಈ ನಾಇಯ ವಯಸ್ಸು ಬಹಿರಂಗವಾಗಿಲ್ಲ, ಆದರೆ ಇದಕ್ಕೆ ವರ್ಣರಂಜಿತ ಡ್ರ್ಯಾಗನ್ ಟ್ಯಾಟೂ ಹಾಕಲಾಗಿದೆ. ಜೊತೆಗೆ ಕತ್ತಿಗೆ ದಪ್ಪದ ಚಿನ್ನದ ಸರ ಮತ್ತು ಮುಂಗಾಲಿಗೆ ವಾಚ್ ಧರಿಸಿರುವುದನ್ನು ಕಾಣಬಹುದು. ಆದರೆ ನಾಯಿಯ ಮೇಲೆ ಹಾಕಲ್ಪಟ್ಟ ಟ್ಯಾಟೂವನ್ನು ಅನಸ್ಥೇಸಿಯಾ ನೀಡದೆಯೇ ಹಾಕಲಾಯ್ತು ಎಂಬ ವಿಚಾರ ಬಹಿರಂಗವವಾಗ್ತಿದ್ದಂತೆ ನಾಯಿಯ ಮಾಲೀಕರನ್ನು ಸಾಕುಪ್ರಾಣಿ ಪ್ರದರ್ಶನ ಕಾರ್ಯಕ್ರಮದಿಂದ ತೆಗೆದು ಹಾಕಲಾಗಿದೆ.
ಅನಸ್ಥೇಸಿಯಾ ನೀಡದೇ ಟ್ಯಾಟೂ ಹಾಕಿ ಕ್ರೌರ್ಯ: ವೀಡಿಯೋ ವೈರಲ್ ಆಗ್ತಿದಂತೆ ಭಾರಿ ಆಕ್ರೋಶ:
ಅಲ್ಲದೇ ನಾಯಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ನಾಯಿ ಮಾಲೀಕನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಡಪಾಯಿ ನಾಯಿ, ನಾಯಿ ಮಾಲೀಕನನ್ನು ಕುದುರೆ ಚಾಟಿಯಿಂದ ಬಾರಿಸಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾದಲ್ಲಿ ನಾಯಿಗಳು ಇಂತಹ ವ್ಯಕ್ತಿಗಳಿಂದ ಬಳಲಬಾರದು, ಬೆಕ್ಕುಗಳು ಮತ್ತು ನಾಯಿಗಳನ್ನು ನಿಂದಿಸುವ ಮತ್ತು ಹಿಂಸಿಸುವ ಹಲವಾರು ಕ್ರೂರ ಜನರು ಚೀನಾದಲ್ಲಿದ್ದಾರೆ. ಚೀನಾದಲ್ಲಿರುವ ಎಲ್ಲಾ ಪ್ರಾಣಿಗಳನ್ನು ರಕ್ಷಿಸಬೇಕು ಚೀನಾ ಯಾವುದೇ ಪ್ರಾಣಿಗಳನ್ನು ಸಾಕುವುದನ್ನು ನಿಷೇಧಿಸಬೇಕು. ಅಲ್ಲಿ ಎಷ್ಟು ಕ್ರೂರ ಪ್ರಾಣಿ ದೌರ್ಜನ್ಯಗಾರರು ವಾಸಿಸುತ್ತಾರೆ ಎಂಬುದು ಭಯಾನಕವಾಗಿದೆ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೊಂದು ಸಂಪೂರ್ಣ ಕ್ರೌರ್ಯದ ಘಟನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಚೀನಾದಲ್ಲಿ ನಡೆಯುವ ಪೆಟ್ ಫೇರ್ ಏಷ್ಯಾ ಬಗ್ಗೆ ಹೇಳುವುದಾದರೆ ಇದು ಪ್ರತಿ ವರ್ಷಆಗಸ್ಟ್‌ನಲ್ಲಿ ಶಾಂಘೈ ನ್ಯೂ ಇಂಟರ್ನ್ಯಾಷನಲ್ ಎಕ್ಸ್‌ಪೋ ಸೆಂಟರ್ (SNIEC)ನಲ್ಲಿ ನಡೆಯುತ್ತದೆ. 1997 ರಲ್ಲಿ ಈ ಪೆಟ್ ಫೇರ್ ಏಷ್ಯಾ ಪ್ರಾರಂಭವಾಗಿದ್ದು, ಈ ಪ್ರದರ್ಶನವು ಚೀನಾದ ಸಾಕುಪ್ರಾಣಿ ಮಾರುಕಟ್ಟೆಯ ಏರಿಕೆಗೆ ಸಾಕ್ಷಿಯಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ ಇಲ್ಲಿ ಗಮನಾರ್ಹ ಬೆಳವಣಿಗೆ ಕಾಣುತ್ತಿದೆ.
ಇದನ್ನೂ ಓದಿ: ವಿದೇಶಿ ಪ್ರವಾಸಿಗರಿಂದಲೂ ಲಂಚ ಪಡೆದು ದೇಶದ ಮರ್ಯಾದೆ ಕಳೆದ ಟ್ರಾಫಿಕ್ ಪೊಲೀಸರು
ಇದನ್ನೂ ಓದಿ: ಕೈಗೆ ಕೋಳ ಮೈಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಯ ಪಯಣ ಯಾರಿತಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ