ದಾಖಲೆ ಏರಿಕೆ ಬಳಿಕ ತೈಲ ಬೆಲೆ ಈಗ ಇಳಿಕೆ

Kannadaprabha News   | Kannada Prabha
Published : Mar 11, 2026, 03:33 AM IST
Crude oil prices

ಸಾರಾಂಶ

ಇರಾನ್‌-ಅಮೆರಿಕ ಯುದ್ಧದ ತೀವ್ರತೆ ಕಾರಣ ಸೋಮವಾರ 4 ವರ್ಷದ ಗರಿಷ್ಠ 120 ಡಾಲರ್‌ಗೆ (ಪ್ರತಿ ಬ್ಯಾರೆಲ್‌ಗೆ) ತಲುಪಿದ್ದ ಕಚ್ಚಾ ತೈಲ ದರ ಮಂಗಳವಾರ 88 ಡಾಲರ್‌ಗೆ ಇಳಿದಿದೆ. ಯುದ್ಧ ಅಲ್ಪಕಾಲಿಕ ಆಗಬಹುದು ಎಂದು ಟ್ರಂಪ್‌ ಹೇಳಿಕೆ ಕಾರಣ ತೈಲ ಬೆಲೆ ಕುಸಿದವು ಮತ್ತು ಅಮೆರಿಕ ಹಾಗೂ ವಿಶ್ವದ ಷೇರುಗಳು ಏರಿದವು

ವಾಷಿಂಗ್ಟನ್‌: ಇರಾನ್‌-ಅಮೆರಿಕ ಯುದ್ಧದ ತೀವ್ರತೆ ಕಾರಣ ಸೋಮವಾರ 4 ವರ್ಷದ ಗರಿಷ್ಠ 120 ಡಾಲರ್‌ಗೆ (ಪ್ರತಿ ಬ್ಯಾರೆಲ್‌ಗೆ) ತಲುಪಿದ್ದ ಕಚ್ಚಾ ತೈಲ ದರ ಮಂಗಳವಾರ 88 ಡಾಲರ್‌ಗೆ ಇಳಿದಿದೆ.ಯುದ್ಧ ಅಲ್ಪಕಾಲಿಕ ಆಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಹೇಳಿಕೆ ಕಾರಣ ತೈಲ ಬೆಲೆಗಳು ಕುಸಿದವು ಮತ್ತು ಅಮೆರಿಕ ಹಾಗೂ ವಿಶ್ವದ ಷೇರುಗಳು ಏರಿದವು. ಸೋಮವಾರದ ದರಕ್ಕೆ ಹೋಲಿಸಿದರೆ ತೈಲ ದರ ಶೇ.26ರಷ್ಟು ಕುಸಿದಿದ್ದು ಗಮನಾರ್ಹ.

ಅಂತೆಯೇ ಫ್ಯೂಚರ್ಸ್ ಪೇಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ.8 ಕ್ಕಿಂತ ಹೆಚ್ಚು ಕುಸಿದು ಬ್ಯಾರೆಲ್‌ಗೆ ರೂ. 8,069 ಕ್ಕೆ ತಲುಪಿದೆ. ಇದು ದೀರ್ಘಕಾಲದ ಪೂರೈಕೆ ಅಡಚಣೆಗಳ ಭಯವನ್ನು ಕಡಿಮೆ ಮಾಡಿದೆ. ಸೋಮವಾರ ಶೇ.26 ಕ್ಕಿಂತ ಹೆಚ್ಚು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 10,549 ರು.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

ಕಚ್ಚಾ ತೈಲ ಬೆಲೆ ಏರಿಕೆ: ಲಂಕಾದಲ್ಲಿ ಇಂಧನ ಬೆಲೆ ಲೀ.ಗೆ 22 ರು. ಹೆಚ್ಚಳ

ಕೊಲಂಬೊ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಜಾಗತಿಕ ಕಚ್ಚಾ ತೈಲಗಳ ಬೆಲೆ ಹೆಚ್ಚಳ, ತೈಲ ಅಭಾವ ಸೃಷ್ಟಿ ಹಿನ್ನೆಲೆ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಒಂದೇ ದಿನ ಪೆಟ್ರೋಲ್‌, ಡೀಸೆಲ್‌ ದರ ಲೀಟರ್‌ಗೆ 22 ರು. (ಶ್ರೀಲಂಕಾ ರುಪಾಯಿ) ಹೆಚ್ಚಳವಾಗಿದೆ.ಕಳೆದ 4 ವರ್ಷಗಳಲ್ಲೇ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ ದಾಟಿದ ಬೆನ್ನಲ್ಲೆ ಲಂಕಾದಲ್ಲಿ ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಇಂಧನ ದರವನ್ನು ಶೇ.8ರಷ್ಟು ಹೆಚ್ಚಿಸಿದೆ. ‘ಇರಾನ್‌ ಯುದ್ಧ ಆರಂಭವಾದ ಬಳಿಕ ಜನರು ಭಾರೀ ಪ್ರಮಾಣದಲ್ಲಿ ಇಂಧನ ಖರೀದಿಸುತ್ತಿರುವುದರಿಂದ ಈ ಕ್ರಮ’ ಎಂದು ಅದು ಹೇಳಿಕೊಂಡಿದೆ. ಜತೆಗೆ ‘ ದೇಶದಲ್ಲಿ ಏಪ್ರಿಲ್‌ ಅಂತ್ಯದವರೆಗೂ ಬೇಕಾಗುವಷ್ಟು ಇಂಧನ ದಾಸ್ತಾನು ಇದೆ’ ಎಂದಿದೆ.

ತೈಲ ಕೊರತೆ ಎಫೆಕ್ಟ್: ಏರ್‌ ಇಂಡಿಯಾದಿಂದ ₹329 ಇಂಧನ ಶುಲ್ಕ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಜಾಗತಿಕ ಕಚ್ಚಾ ತೈಲಗಳ ಬೆಲೆ ಹೆಚ್ಚಳ ಪ್ರಭಾವವು ವಿಮಾನ ಕಂಪನಿಗಳ ಮೇಲೂ ಉಂಟಾಗಿದೆ. ಪ್ರತಿ ಟಿಕೆಟ್‌ ಮೇಲೆ 329 ರು. ಇಂಧನ ಶುಲ್ಕ ಹೇರಲಾ ಗುವುದು ಎಂದು ಏರ್‌ ಇಂಡಿಯಾ ಘೋಷಿಸಿದೆ. ಇದೇ ವೇಳೆ, ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ ಮೇಲೆ ವಿಧಿ ಸಲಾಗುವ ಇಂಧನ ಶುಲ್ಕವನ್ನೂ ಹೆಚ್ಚಿಸಿದೆ. ಯುದ್ಧ ಆರಂಭದ ನಂತರ ನಿರ್ವಹಣಾ ದರ ಶೇ.40ರಷ್ಟುಹೆಚ್ಚಿದೆ ಎಂದು ಅದು ಹೇಳಿದೆ.

ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌ 639, ನಿಫ್ಟಿ 233 ಅಂಕ ಏರಿಕೆ

ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟು, ತೈಲ ಬೆಲೆ ಏರಿಕೆ ಪರಿಣಾಮ ಸತತ 2 ದಿನ ನಕಾರಾತ್ಮಕ ಹಾದಿಯಲ್ಲಿ ಸಾಗಿದ್ದ ಷೇರುಪೇಟೆ ಮಂಗಳವಾರ ಚೇತರಿಕೆ ಹಾದಿ ಹಿಡಿದಿದೆ. ಸೆನ್ಸೆಕ್ಸ್‌ 639.82 ಅಂಕ ಏರಿಕೆಯಾಗಿ 78,205ರಲ್ಲಿ ಅಂತ್ಯವಾಗಿದ್ದರೆ, ನಿಫ್ಟಿ 233.55 ಅಂಕ ಹೆಚ್ಚಳವಾಗಿ 24,261.60ರಲ್ಲಿ ಮುಕ್ತಾಯಗೊಂಡಿದೆ.ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದ ಉದ್ವಿಗ್ನತೆ ಕಡಿಮೆ ಆಗಿರುವುದು ಈ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಸೋಮವಾರ ಸೆನ್ಸೆಕ್ಸ್‌ 1,352.74 ಅಂಕ ಕುಸಿದು 77,566 ಅಂತ್ಯಗೊಂಡಿದ್ದರೆ ನಿಫ್ಟಿ 422.4 ಅಂಕ ಇಳಿದು 24,028ರಲ್ಲಿ ಮುಕ್ತಾಯಗೊಂಡಿತ್ತು.

ಡಾಲರ್‌ ಎದುರು ರುಪಾಯಿ ಕೊಂಚ ಚೇತರಿಕೆ: 91.85ಕ್ಕೇರಿಕೆ

ಮುಂಬೈ: ಸೋಮವಾರ ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಮಂಗಳವಾರ ಕೊಂಚ ಚೇತರಿಸಿಕೊಂಡಿದೆ. 36 ಪೈಸೆ ಏರಿಕೆ ಕಂಡು 91.85 ರು.ನಲ್ಲಿ ಮುಕ್ತಾಯವಾಗಿದೆ.ದೇಶಿಯ ಷೇರುಪೇಟೆಯಲ್ಲಿನ ಲಾಭ ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು, ಜಾಗತಿಕ ಕಚ್ಚಾ ತೈಲಗಳ ಬೆಲೆ ಏರಿಕೆ ಪರಿಣಾಮ ಸೋಮವಾರ ಒಂದೇ ದಿನ 53 ಪೈಸೆ ಕುಸಿದು 92.35 ರು.ನಲ್ಲಿ ಅಂತ್ಯವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ ಯುದ್ಧ ನಿಲ್ಲಿಸಲು ಹೆಚ್ಚಿದ ಜಾಗತಿಕ ಒತ್ತಡ
ರಿಪೇರಿಯ ಯತ್ನ ವಿಫಲ : ಪಾಕ್‌ನಿಂದಲೇ ಮುರೀದ್ ಏರ್‌ಬೇಸ್‌ ಪೂರ್ಣ ಧ್ವಂಸ