
ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧ ಭಾರೀ ಆರ್ಥಿಕ ಹೊರೆ, ಸಾವು ನೋವು, ಜಾಗತಿಕ ವಲಯದಲ್ಲಿ ತೈಲ, ಅನಿಲ ಬಿಕ್ಕಟ್ಟಿಗೆ ಕಾರಣವಾಗಿರುವ ಬೆನ್ನಲ್ಲೇ, ಕೂಡಲೇ ಸಂಘರ್ಷ ಸ್ಥಗಿತಗೊಳಿಸುವಂತೆ ಅಮೆರಿಕದ ಮೇಲೆ ಜಾಗತಿಕ ಸಮುದಾಯದ ಒತ್ತಡ ಹೆಚ್ಚತೊಡಗಿದೆ. ‘ಇರಾನ್ ಯುದ್ಧ ಕನಿಷ್ಠ 3 ತಿಂಗಳಾದರೂ ನಡೆಯಬಹುದು ಎಂಬ ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರೋತ್ಸಾಹದ ನಡುವೆಯೇ ಕದನವಿರಾಮಕ್ಕೆ ದೇಶ-ವಿದೇಶಗಳಿಂದ ಒತ್ತಡ ಆರಂಭವಾಗಿದೆ.
ಒಂದು ಕಡೆ ಫ್ರಾನ್ಸ್, ಚೀನಾ ಹಾಗೂ ರಷ್ಯಾ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರಲು ಆರಂಭಿಸಿದ್ದರೆ, ಇನ್ನೊಂದು ಕಡೆ ಅಮೆರಿಕದಲ್ಲಿನ ಟ್ರಂಪ್ ಅವರ ಸಲಹೆಗಾರರೇ ‘ಆದಷ್ಟು ಬೇಗೆ ಮಧ್ಯಪ್ರಾಚ್ಯದ ಕದನಕ್ಕೆ ಅಂತ್ಯ ಹಾಡಿ’ ಎಂದು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.ಚೀನಾ, ರಷ್ಯಾ ಹಾಗೂ ಫ್ರಾನ್ಸ್ ಈಗಾಗಲೇ ಕದನವಿರಾಮಕ್ಕೆ ಇರಾನ್ ಸರ್ಕಾರವನ್ನು ಸಂಪರ್ಕಿಸಿವೆ. ಇನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮಂಗಳವಾರ ಟ್ರಂಪ್ ಜತೆ ದೂರವಾಣಿಯಲ್ಲಿ ಮಾತನಾಡಿ ಯುದ್ಧ ನಿಲ್ಲಿಸುವ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಸಮರವು ಜಾಗತಿಕ ತೈಲ ಪೂರೈಕೆಗೆ ಹೊಡೆತ ನೀಡುತ್ತಿರುವ ಕಾರಣ ಸಮರಕ್ಕೆ ಅಂತ್ಯ ಹಾಡಿ ಎಂದು ಅವರು ಒತ್ತಾಯಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಇನ್ನೊಂದೆಡೆ ಅಮೆರಿಕದ ಅಧಿಕಾರಿಗಳು ಟ್ರಂಪ್ ಎದುರು, ‘ಈವರೆಗೆ ನಡೆಸಿರುವ ದಾಳಿಯಲ್ಲಿ ನಮ್ಮೆಲ್ಲಾ ಪ್ರಮುಖ ಗುರಿಗಳನ್ನು ಉರುಳಿಸಿ ಆಗಿದೆ. ಕಾರ್ಯಾಚರಣೆ ಯಶಸ್ವಿ ಆಗಿದೆ ಎಂದು ಹೇಳಿ ಇಷ್ಟಕ್ಕೇ ಪೂರ್ಣವಿರಾಮ ಹಾಕಿ. ಇದರಿಂದ ದೀರ್ಘಾವಧಿ ನಷ್ಟಗಳನ್ನು ತಡೆಯಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಅಮೆರಿಕದ ಪ್ರತಿಷ್ಠಿತ ಸುದ್ದಿಸಂಸ್ಥೆ ವಾಲ್‌ಸ್ಟ್ರೀಲ್ ಜರ್ನಲ್ ವರದಿ ಮಾಡಿದೆ.
‘ಮೊದಮೊದಲು ಇರಾನ್ ಮೇಲಿನ ದಾಳಿಯನ್ನು ಬೆಂಬಲಿಸಿದ್ದ ಅಧಿಕಾರಿಗಳು ಕೂಡ ಈಗ ಅದರ ಬಗ್ಗೆ ಆಕ್ಷೇಪಿಸುತ್ತಿದ್ದಾರೆ. ಜತೆಗೆ, ಸಮೀಕ್ಷೆಯೊಂದರಲ್ಲಿ ಯುದ್ಧದ ಬಗ್ಗೆ ಅಮೆರಿಕನ್ನರೇ ಅಸಮಾಧಾನಗೊಂಡಿದ್ದಾರೆ. ಸಮರವು ಮುಂಬರುವ ಮಧ್ಯಂತರ ಚುನಾವಣೆ ಮೇಲೆ ಋುಣಾತ್ಮಕ ಪರಿಣಾಮ ಬೀರಬಹುದು ಎಂಬುದನ್ನೂ ಟ್ರಂಪ್‌ಗೆ ಮನಗಾಣಿಸುವ ಯತ್ನಗಳು ನಡೆಯುತ್ತಿವೆ. ಅತ್ತ ತೈಲ ಬೆಲೆಯೂ ವಿಪರೀತ ಏರಿಕೆಯಾಗುತ್ತಿದ್ದು, ಜಾಗತಿಕ ಇಂಧನ ಪೂರೈಕೆಗೆ ಅಡಚಣೆಯಾಗುವ ಬಗ್ಗೆಯೂ ಕಳವಳ ವ್ಯಕ್ತವಾಗುತ್ತಿದೆ’ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಯುದ್ಧ ಅಲ್ಪಕಾಲಿಕ ಆಗಬಹುದು: ಟ್ರಂಪ್‌ಕೆಲವು ದುಷ್ಟರನ್ನು ತೊಡೆದುಹಾಕಲು ನಾವು ಮಧ್ಯಪ್ರಾಚ್ಯಕ್ಕೆ ಒಂದು ಸಣ್ಣ ‘ವಿಹಾರವನ್ನು’ ಕೈಗೊಂಡಿದ್ದೇವೆ. ಮತ್ತು, ಇದು ಅಲ್ಪಾವಧಿಯ ವಿಹಾರವಾಗಲಿದೆ ಎಂದು ನಾನು ಭಾವಿಸುತ್ತೇನೆ. ಕದನವಿರಾಮ ಮಾತುಕತೆಗೆ ಇರಾನ್ ಹಾತೊರೆಯುತ್ತಿದೆ.ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ