1999ಕ್ಕಿಂತಲೂ ಆಫ್ಘಾನಿಸ್ತಾನ ಸ್ಥಿತಿ ಭೀಕರ: ಭಾರತೀಯ ಪೈಟಲ್‌ ಅನುಭವ!

By Suvarna NewsFirst Published Aug 21, 2021, 8:10 AM IST
Highlights

* ಕಾಬೂಲ್‌ ವಿಮಾನ ನಿಲ್ದಾಣದ ಸ್ಥಿತಿ ಕಂದಹಾರ್‌ ಘಟನೆಗಿಂತಲೂ ಭೀಕರ

* 22 ವರ್ಷದ ಹಿಂದಿನ ಭೀಕರ ದೃಶ್ಯ ಮತ್ತೆ ಮರುಕಳಿಸಿದೆ

* ಅಪಹರಣಗೊಂಡಿದ್ದ ವಿಮಾನದ ಪೈಲಟ್‌ ದೇವಿ ಶರಣ್‌

ನವದೆಹಲಿ(ಆ.21): ಕಾಬೂಲ್‌ ವಿಮಾನ ನಿಲ್ದಾಣದಲ್ಲಿನ ಈಗಿನ ಸ್ಥಿತಿ 1999ರಲ್ಲಿ ಕಂದಹಾರ್‌ ವಿಮಾನ ಅಪಹರಣಗೊಂಡ ಸಂದರ್ಭಕ್ಕಿಂತಲೂ ಭೀಕರವಾಗಿದೆ ಎಂದು ಅಂದು ತಾಲಿಬಾನ್‌ ಉಗ್ರರಿಂದ ಅಪಹರಣಗೊಂಡಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನದ ಪೈಲಟ್‌ ಆಗಿದ್ದ ದೇವಿ ಶರಣ್‌ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿರುವ ಶರಣ್‌, ‘ಕಾಬೂಲ್‌ ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಸೇರಿರುವ ಜನರು ಅಷ್ಘಾನಿಸ್ತಾನದಿಂದ ಪಾರಾಗಲು ಯತ್ನಿಸುತ್ತಿರುವ ದೃಶ್ಯಗಳು 22 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸುವಂತಿದೆ. ಕಂದಹಾರ್‌ ವಿಮಾನ ಅಪಹರಣ ನಡೆದು 22 ವರ್ಷಗಳು ಕಳೆದಿವೆ. ಆದರೆ, ಅಂದು ಮತ್ತು ಇಂದಿನ ಚಿತ್ರಗಳು ಒಂದೇ ರೀತಿಯಾಗಿವೆ. ಒಂದು ವ್ಯತ್ಯಾಸವೆಂದರೆ ಅಂದು ನಾವು ಕೆಲವೇ ಮಂದಿ ಮಾತ್ರ ಇದ್ದೆವು. ಆದರೆ, ಇಂದು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಸೇರಿದ್ದಾರೆ. ನಾವು ಅಂದು ನಾವು ಉಗ್ರರಿಂದ ಹೇಗಾದರೂ ಪಾರಾದರೆ ಸಾಕು ಎಂದು ಬಯಸಿದ್ದೆವೋ ಅದೇ ರೀತಿ ಈಗ ಸಾವಿರಾರು ಜನರು ಕಾಬೂಲ್‌ನಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ನಾವು ಈಗ ನೋಡುತ್ತಿರುವ ಕಾಬೂಲ್‌ ವಿಮಾನ ನಿಲ್ದಾಣದ ಚಿತ್ರಗಳು ಅಂದಿನ ಘಟನೆಗೆ ಬಹುತೇಕ ಹೋಲಿಕೆ ಆಗುವಂತಿದೆ’ ಎಂದು ಹೇಳಿದ್ದಾರೆ.

1999ರಲ್ಲಿ ಏನಾಗಿತ್ತು?

ಕಾಠ್ಮಂಡುವಿನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಯನ್‌ ಏರ್‌ಲೈನ್ಸ್‌ನ ಐಸಿ814 ವಿಮಾನವನ್ನು 1999 ಡಿ.24ರಂದು ಉಗ್ರರು ಅಪಹರಿಸಿದ್ದರು. ವಿಮಾನದಲ್ಲಿದ್ದ 179 ಪ್ರಯಾಣಿಕರು ಮತ್ತು 11 ಸಿಬ್ಬಂದಿಯನ್ನು ಉಗ್ರರು ತಮ್ಮ ವಶಕ್ಕೆ ಪಡೆದು ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ಬಳಿಕ ಸಂಧಾನ ಮಾತುಕತೆಗಳು ನಡೆದು ಭಾರತ ಉಗ್ರ ಮಸೂದ್‌ ಅಜರ್‌ನನ್ನು ಜೈಲಿನಿಂದ ಬಿಡುಗಡೆ ಮಾಡುವುದರೊಂದಿಗೆ ವಿಮಾನ ಅಪಹರಣ ಪ್ರಕರಣ ಅಂತ್ಯಗೊಂಡಿತ್ತು.

click me!