
ಕಾಬೂಲ್(ಆ.21): ತಾಲಿಬಾನ್ ಉಗ್ರರಿಂದ ಪರಾಗುವ ಉದ್ದೇಶದಿಂದ ವಿದೇಶಗಳಲ್ಲಿ ಆಶ್ರಯ ಪಡೆಯಲು ಸಾವಿರಾರು ಆಫ್ಘನ್ನರು, ಇತ್ತೀಚೆಗೆ ಕಾಬೂಲ್ ಏರ್‌ಪೋರ್ಟ್‌ಗೆ ದಾಂಗುಡಿ ಇಟ್ಟಿದ್ದರು. ವಿಮಾನಗಳಲ್ಲಿ ಬಸ್ಸಿನಲ್ಲಿ ತುಂಬಿದಂತೆ ತುಂಬಿಕೊಂಡಿದ್ದರು. ಇಂಥದ್ದರಲ್ಲಿ ಅಫ್ಘಾನಿಸ್ತಾನದ ತಾಯಂದಿರು, ಏರ್‌ಪೋರ್ಟ್‌ನಲ್ಲಿ ಹಾಕಲಾಗಿದ್ದ ತಂತಿ ಬೇಲಿಯಿಂದ ಆಚೆ ತಮ್ಮ ಮಕ್ಕಳನ್ನು ಎಸೆದು, ‘ಕನಿಷ್ಠ ನಮ್ಮ ಮಕ್ಕಳನ್ನಾದರೂ ರಕ್ಷಿಸಿ’ ಎಂದು ಬೇಲಿಯ ಆಚೆ ಇದ್ದ ಬ್ರಿಟಿಷ್ ಸೈನಿಕರ ಬಳಿ ಗೋಗರೆದ ಘಟನೆ ನಡೆದಿದೆ. ಈ ವೇಳೆ ಹಲವು ಮಕ್ಕಳು ಬೇಲಿಯಲ್ಲಿ ಸಿಲುಕಿಕೊಂಡಿವೆ.
"
ಈ ಘಟನೆಯಿಂದ ಖುದ್ದು ಬ್ರಿಟಿಷ್ ಯೋಧರ ಎದೆ ಕೂಡ ಝಲ್ಲೆಂದಿದ್ದು, ಅವರು ಕಣ್ಣೀರು ಹಾಕಿದ್ದಾರೆ.
ತಾಲಿಬಾನ್ ಉಗ್ರರಿಗೆ 2,000 ಸಶಸ್ತ್ರ ವಾಹನ, 40 ಹೆಲಿಕಾಪ್ಟರ್ ಬಲ!
ಹಿರಿಯ ಬ್ರಿಟಿಷ್ ಸೇನಾಧಿಕಾರಿ ಸ್ಟುವರ್ಟ್ ರಾಮ್‌ಸೆ ಅವರು ಈ ಘಟನೆಯ ಕುರಿತು ವಿವರಣೆ ನೀಡಿದ್ದಾರೆ. ‘ಕಾಬೂಲ್ ಏರ್‌ಪೋರ್ಟ್‌ಗೆ ಸೋಮವಾರ ಸಾವಿರಾರು ಜನರು ದಾಂಗುಡಿ ಇಟ್ಟರು. ಎಲ್ಲೆಡೆ ಅಳು, ಕಿರುಚಾಟ ಕೇಳಿಸುತ್ತಿತ್ತು. ಇಂಥ ಸಂದರ್ಭದಲ್ಲಿ ಜನರ ಪ್ರವೇಶ ತಡೆಗಟ್ಟಲು ಹಾಕಲಾಗಿದ್ದ ತಂತಿ ಬೇಲಿಯತ್ತ ಆಗಮಿಸಿದ ಮಕ್ಕಳ ಹೊತ್ತ ತಾಯಂದಿರು, ಬೇಲಿಯಿಂದ ಆಚೆ ನಿಂತಿದ್ದ ಬ್ರಿಟಿಷ್ ಯೋಧರತ್ತ ತಮ್ಮ ಪುಟ್ಟಮಕ್ಕಳನ್ನು ಎಸೆದರು. ‘ನಮ್ಮನ್ನು ರಕ್ಷಿಸದಿದ್ದರೂ ಪರವಾಗಿಲ್ಲ. ಮಕ್ಕಳನ್ನು ರಕ್ಷಿಸಿ’ ಎಂದು ಗೋಗರೆದರು. ಈ ವೇಳೆ ಕೆಲವು ಮಕ್ಕಳು ತಂತಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡವು’ ಎಂದಿದ್ದಾರೆ.
‘ಈ ಭಯಾನಕ ದೃಶ್ಯ ನೋಡಿದ ನಮ್ಮ ಯೋಧರು ದಿಗ್ಭ್ರಾಂತರಾಗಿದ್ದಾರೆ. ಘಟನೆ ನೆನೆದು ಆ ದಿನ ರಾತ್ರಿ ಇಡೀ ನಮ್ಮ ಎಲ್ಲ ಯೋಧರು ಅತ್ತರು. ಮಾನಸಿಕ ಆಘಾತಕ್ಕೆ ಒಳಗಾಗಿರುವ ಅವರಿಗೆ ನಾನು ಮಾನಸಿಕ ಸಲಹೆ ನೀಡುತ್ತಿದ್ದೇನೆ’ ಎಂದು ರಾಮ್‌ಸೆ ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ