ಕೊರೋನಾ ನಿಯಮ ಉಲ್ಲಂಘಿಸಿದ ಪ್ರಧಾನಿ; ದುಬಾರಿ ದಂಡ ಹಾಕಿದ ನಾರ್ವೆ ಪೊಲೀಸ್!

By Suvarna NewsFirst Published Apr 9, 2021, 3:37 PM IST
Highlights

ಕೊರೋನಾ ನಿಯಮ ಉಲ್ಲಂಘನೆ ಹಾಗೂ ದಂಡ ಜಾರಿಗೊಳಿಸುವಲ್ಲಿ ಸಾರ್ವಜನಿಕ ವಲಯದಿಂದ ಟೀಕೆಗಳು ಜೋರಾಗಿದೆ. ಕಾರಣ ಜನಸಾಮಾನ್ಯರಿಗೆ ಒಂದು ನೀತಿ, ರಾಜಕಾರಣಿಗಳು, ಅಧಿಕಾರದಲ್ಲಿರುವವರಿಗೆ ಒಂದು ನೀತಿ ಅನ್ನೋ ಆರೋಪಗಳು ಇವೆ. ಆದರೆ ಈ ಘಟನೆ ಇದಕ್ಕೆ ವಿರುದ್ಧವಾಗಿದೆ. ಇದೀಗ ಕೊರೋನಾ ನಿಯಮ ಉಲ್ಲಂಘಿಸಿದ ಪ್ರಧಾನಿಗೆ ದಂಡ ಹಾಕಲಾಗಿದೆ.

ನಾರ್ವೆ(ಏ.09);  ಕೊರೋನಾ ಹೆಚ್ಚಾಗುತ್ತಿರುವ ಕಾರಣ ಹಲವು ದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಕೊರೋನಾ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ರಾಜಕಾರಣಿಗಳ ನಿಯಮ ಉಲ್ಲಂಘನೆಗೆ ಮೌನ ವಹಿಸುವ ಪೊಲೀಸರು, ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಾರೆ ಎಂಬ ಆರೋಪಗಳಿವೆ. ಆದರೆ ಕೊರೋನಾ ನಿಯಮ ಉಲ್ಲಂಘಿಸಿದ ನಾರ್ವೆ ಪ್ರಧಾನಿಗೆ ಇದೀಗ ಪೊಲೀಸರು ದುಬಾರಿ ದಂಡ ಹಾಕಿ ವಿಶ್ವದ ಗಮನ ಸೆಳೆದಿದ್ದಾರೆ.

ಕೋವಿಡ್‌ ನಿಯಮ ಉಲ್ಲಂಘನೆ: 9.46 ಕೋಟಿ ದಂಡ ವಸೂಲಿ

ನಾರ್ವೆ ಪೊಲೀಸರ ಕಾರ್ಯಕ್ಕೆ ಭಾರತ ಸೇರಿದಂತೆ ಇಡೀ ವಿಶ್ವದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾರ್ವೆ ಪ್ರಧಾನಿ ಎರ್ನಾ ಸೊಲ್ಬರ್ಗ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಕುಟುಂಬಸ್ಥರಿಗಾಗಿ ಪಾರ್ಟಿ ಆಯೋಜಿಸಿದ್ದರು. ಕೊರೋನಾ ಕಾರಣ ಕುಟುಂಬದ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಆದರೆ ಈ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಈ ಕಾರಣಕ್ಕೆ ನಾರ್ವೆ ಪೊಲೀಸರು 1,75,869  ರೂಪಾಯಿ ದಂಡ ವಿಧಿಸಿದ್ದಾರೆ.( 20,000 ನಾರ್ವೆ ಕ್ರೌನ್ಸ್)

ಕೋವಿಡ್ ನಿಯಮ ಉಲ್ಲಂಘನೆ; ಕಳೆದ 5 ದಿನದಲ್ಲಿ 3.18 ಕೋಟಿ ರೂ ದಂಡ ಹಾಕಿದ ಪೊಲೀಸ್!

ನಾರ್ವೆ ಪ್ರಧಾನಿ ತಮ್ಮ 60 ವರ್ಷದ ಹುಟ್ಟು ಹಬ್ಬಕ್ಕೆ ನಾರ್ವೆಯ ಖ್ಯಾತ ರೆಸಾರ್ಟ್ ಮೌಂಟೈನ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಪ್ರಧಾನಿಯ 13 ಕುಟುಂಬಸ್ಥರು ಪಾಲ್ಗೊಂಡಿದ್ದರು. ಆದರೆ ನಾರ್ವೆ ಕೊರೋನಾ ಮಾರ್ಗಸೂಚಿ ಪ್ರಕಾರ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ಆಯೋಜಿಸಿದರೆ 10ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. 

ನಾರ್ವೆ ಪ್ರಧಾನಿ ಕೊರೋನಾ ನಿಮಯ ಉಲ್ಲಂಘಿಸಿದ್ದಾರೆ. 13 ಜನ ಸೇರಿದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಪೊಲೀಸರು ದುಬಾರಿ ದಂಡ ಹಾಕಿದ್ದಾರೆ. ಈ ಕುರಿತು ಮಾತನಾಡಿದ ನಾರ್ವೆ ಪೊಲೀಸರು, ಪ್ರಧಾನಿ ದೇಶದ ಎಲ್ಲರಿಗೂ ಮಾದರಿಯಾಗಿರಬೇಕು. ಹೀಗಾಗಿ ನಿಯಮ ಉಲ್ಲಂಘನೆ ಬಹುದೊಡ್ಡ ತಪ್ಪು ಸಂದೇಶ ನೀಡಲಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ನಾರ್ವೆ ಪೊಲೀಸರು ಹೇಳಿದ್ದಾರೆ.

click me!