ಕೆಟ್ಟ ವೈರಸ್‌ ದೇಶಕ್ಕೆ ಪ್ರವೇಶಿಸಿದೆ: ಲಾಕ್‌ಡೌನ್ ಘೋಷಿಸಿದ ಉ. ಕೊರಿಯಾ ಸರ್ವಾಧಿಕಾರಿ ಕಿಮ್!

By Suvarna News  |  First Published Jul 26, 2020, 3:11 PM IST

ಸರ್ವಾಧಿಕಾರಿ ನಾಡಿಗೂ ಪ್ರವೇಶಿಸಿತಾ ಮಹಾಮಾರಿ ಎಂಟ್ರಿ| ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಅಲ್ಲಿ ಶಂಕಿತ ಸೋಂಕು ಪತ್ತೆ| ಗರಿಷ್ಠ ತುರ್ತು ವ್ಯವಸ್ಥಿತ ಲಾಕ್ ಡೌನ್ ಜಾರಿಗೆ ತಂದು ಮುನ್ನೆಚ್ಚರಿಕೆ ವಹಿಸಲು ಕಿಮ್ ಆದೇಶ


ಪ್ಯೋಂಗ್ಯಾಂಗ್(ಜು.26):  ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿರುವ ಮಹಾಮಾರಿ ಕೊರೋನಾ ವೈರಸ್ ಉತ್ತರ ಕೊರಿಯಾಗೂ ಪ್ರವೇಶಿಸಿದೆ. ಈ ಹಿನ್ನೆಲೆ ಸರ್ಕಾರ ಕೈಸೊಂಗ್ ಗಡಿ ನಗರದಲ್ಲಿ ಲಾಕ್ ಡೌನ್ ಜಾರಿ ಮಾಡಿದೆ.

ಮೊದಲ ಬಾರಿಗೆ ಅಲ್ಲಿ ಶಂಕಿತ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿನ್ನೆ ತುರ್ತು ಪಾಲಿಟ್ ಬ್ಯೂರೊ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಅತ್ಯಂತ ಗರಿಷ್ಠ ತುರ್ತು ವ್ಯವಸ್ಥಿತ ಲಾಕ್ ಡೌನ್ ಜಾರಿಗೆ ತಂದು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಕೆಟ್ಟ ವೈರಸ್‌ ದೇಶಕ್ಕೆ ಪ್ರವೇಶಿಸಿದೆ ಎಂದು ಹೇಳಬಹುದಾದ ನಿರ್ಣಾಯಕ ಪರಿಸ್ಥಿತಿ ಇದಾಗಿದೆ ಎಂದು  ಉತ್ತರ ಕೊರಿಯಾದ ಕೆಸಿಎನ್ ಎ ಸುದ್ದಿಸಂಸ್ಥೆ ತಿಳಿಸಿದೆ. 

Tap to resize

Latest Videos

ಚೀನಾ ಆಪ್ತನಿಗೆ ಭಾರತದ ಸಹಾಯ: 10 ಲಕ್ಷ ಡಾಲರ್ ಮೌಲ್ಯದ ವೈದ್ಯಕೀಯ ನೆರವು!

ಒಂದು ವೇಳೆ ಆ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತವಾದರೆ, ಇದು ಉತ್ತರ ಕೊರಿಯಾದ ಮೊದಲ ಕೋರೋನಾ ಪ್ರಕರಣವಾಗಲಿದೆ. ಯಾವುದೇ ರೀತಿಯ ಸೋಂಕು ಬಂದರೂ ಅದನ್ನು ಸೂಕ್ತವಾಗಿ ನಿಭಾಯಿಸುವಷ್ಟು ವೈದ್ಯಕೀಯ ಮೂಲಭೂತ ಸೌಕರ್ಯಗಳು ಇಲ್ಲದಾಗಿದೆ. ಈವರೆಗೂ ಇಲ್ಲಿ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಶಂಕಿತ ಸೋಂಕಿತನ ಬಗ್ಗೆ ಮಾಹಿತಿ ನೀಡಿರುವ ಕೆಸಿಎನ್‌ಎ ಮೂರು ವರ್ಷಗಳ ಹಿಂದೆ ದಕ್ಷಿಣ ಕೊರಿಯಾಗೆ ಓಡಿಹೋಗಿದ್ದ, ಕೆಟ್ಟ ವೈರಸ್‌ ಸೋಂಕಿಗೆ ಒಳಗಾಗಿದ್ದಾನೆಂದು ಶಂಕಿಸಲಾಗಿರುವ ವ್ಯಕ್ತಿ ಜುಲೈ 19ರಂದು ಗಡಿರೇಖೆಯನ್ನು ಅಕ್ರಮವಾಗಿ ದಾಟಿ ಉತ್ತರ ಕೊರಿಯಾಗೆ ಹಿಂದಿರುಗಿದ್ದಾನೆ ಎಂದು ವರದಿ ಮಾಡಿದೆ. ಜಗತ್ತಿನಲ್ಲಿ ಸೋಂಕು ಕಾಣಿಸಿಕೊಂಡ ನಂತರ ಉತ್ತರ ಕೊರಿಯಾದಿಂದ ಯಾರು ಸಹ ಹೊರ ಹೋಗಿಲ್ಲ ಎಂದು ಹೇಳಲಾಗುತ್ತಿದೆ.

ಉ.ಕೊರಿಯಾದಲ್ಲಿಲ್ಲ ಒಂದೇ ಒಂದು ಕೊರೋನಾ ಕೇಸ್, ಸೀಕ್ರೆಟ್ ಬಿಚ್ಚಿಟ್ಟ ಕಿಮ್ ಜಾಂಗ್ ಉನ್!

ಇನ್ನು ಉತ್ತರ ಕೊರಿಯಾದ ಆಪ್ತ, ನೆರೆಯ ಚೀನಾ ದೇಶದಲ್ಲಿ ಕೊರೋನಾ ವ್ಯಾಪಿಸುತ್ತಿದ್ದಂತೆ ಭದ್ರತೆ ಹಾಗೂ ಆರೋಗ್ಯ ಹಿತದೃಷ್ಟಿಯಿಂದ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರ ಉತ್ತರ ಕೊರಿಯಾ ತನ್ನ ಗಡಿಯನ್ನು ಮುಚ್ಚಿತ್ತು. ಹೊರಗಿನಿಂದ ಯಾರೂ ದೇಶ ಪ್ರವೇಶಿಸದಂತೆ ತಡೆದಿತ್ತು. ದಕ್ಷಿಣ ಕೊರಿಯಾದಲ್ಲಿ 40ರಿಂದ 60 ಕೊರೋನಾ ಸೋಂಕಿತರ ಸಂಖ್ಯೆಯಿದೆ.

ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವನ್ನು ನಡುಗಿಸಿದೆ ಕೊರೋನಾ

ಅದೇನೇ ಇದ್ದರೂ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವಾಗಿ, ದೊಡ್ಡಣ್ಣ ಅಮೆರಿಕಾ ಸೇರಿದಂತೆ ಇಡೀ ವಿಶ್ವವನ್ನೇ ಭಯಭೀತಗೊಳಿಸಿದ್ದ ಉತ್ತರ ಕೊರಿಯಾ ಕೂಡಾ ಈಗ ಕಣ್ಣಿಗೆ ಕಾಣದ ವೈರಸ್‌ನಿಂದ ಬೆಚ್ಚಿ ಬಿದ್ದಿದೆ.  ಪರಮಾಣು ಶಕ್ತಿ ಇದ್ದರೂ ವಿಶ್ವವನ್ನೇ ಕಂಗೆಡಿಸಿರುವ ಈ ವೈರಸ್ ಸದ್ಯ ಸರ್ವಾಧಿಕಾರಿ ಕಿಮ್‌ನ್ನೂ ಗಾಬರಿಗೀಡು ಮಾಡಿದೆ ಎಂಬುವುದರಲ್ಲಿ ಅನುಮಾನವಿಲ್ಲ.

click me!