
ವಿದೇಶದಲ್ಲಿ ಹಿಂದೂಗಳ ಆರಾಧ್ಯ ದೈವ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಉತ್ತರ ಅಮೆರಿಕಾದ ಕೆನಡಾದಲ್ಲಿ ಶ್ರೀರಾಮನ ಅತೀ ಎತ್ತರದ ಮೂರ್ತಿಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಗಿದೆ. ಉತ್ತರ ಅಮೆರಿಕಾದ ಒಂಟಾರಿಯೊದ ಮಿಸ್ಸಿಸೌಗಾದಲ್ಲಿರುವ ಹಿಂದೂ ಪರಂಪರೆ ಕೇಂದ್ರದಲ್ಲಿ ಈ ಬೃಹತ್ ಗಾತ್ರದ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಅಲ್ಲಿನ ಭಾರತೀಯ ಸಮುದಾಯವೂ ಸೇರಿದಂತೆ ಸಾವಿರಾರು ಭಕ್ತರು, ಗಣ್ಯರು ಮತ್ತು ರಾಜಕೀಯ ಮುಖಂಡರು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.
ಹೆಚ್ಚುವರಿ 7 ಅಡಿ ಪೀಠ ಮತ್ತು ಪ್ರಸ್ತಾವಿತ ಛತ್ರಿ ಹೊರತುಪಡಿಸಿ 51 ಅಡಿ ಎತ್ತರದ ಶ್ರೀರಾಮನ ವಿಗ್ರಹವು ಈಗ ಪಶ್ಚಿಮದಲ್ಲಿ ಸನಾತನ ಧರ್ಮದ ಅತ್ಯುನ್ನತ ಸಂಕೇತವಾಗಿದೆ. ದೆಹಲಿಯಲ್ಲಿ ಫೈಬರ್‌ಗ್ಲಾಸ್ ಮತ್ತು ಉಕ್ಕಿನ ಮೇಲ್ಪದರವನ್ನು ಬಳಸಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಗಂಟೆಗೆ 200 ಕಿ.ಮೀ. ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ಪ್ರತಿಮೆಗೆ ಇದೆ. ಶ್ರೀರಾಮನ ಈ ಬೃಹತ್ ಪ್ರತಿಮೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಗಟ್ಟಿಯಾಗಿ ನೆಲೆ ನಿಲ್ಲುವ ನಿರೀಕ್ಷೆ ಇದೆ. ಇಂಡೋ-ಕೆನಡಿಯನ್ ಉದ್ಯಮಿ (Indo-Canadian businessman)ಲಾಜ್ ಪ್ರಶೇರ್ ಅವರು ಈ ಬೃಹತ್ ಪ್ರತಿಮೆ ನಿರ್ಮಾಣಕ್ಕಾಗಿ ಉದಾರ ದೇಣಿಗೆ ನೀಡಿದ್ದಾರೆ. ಅವರ ನೆರವಿನಿಂದಲೇ ನಾಲ್ಕು ವರ್ಷಗಳ ದೀರ್ಘಾವಧಿಯ ಯೋಜನೆಯ ಪೂರ್ಣಗೊಂಡಿದೆ. ಭಾರತದ ದೆಹಲಿಯಲ್ಲಿ ತಯಾರಿಸಲಾದ ಈ ವಿಗ್ರಹವನ್ನು ಕೆನಡಾದಲ್ಲಿ ನುರಿತ ಕುಶಲಕರ್ಮಿಗಳು ಜೋಡಿಸಿದ್ದಾರೆ. ಸಾಂಪ್ರದಾಯಿಕ ಕರಕುಶಲತೆಯ ಜೊತೆಗೆ ಆಧುನಿಕ ಎಂಜಿನಿಯರಿಂಗ್‌ನ ಮಿಶ್ರಣವನ್ನು ಈ ಪ್ರತಿಮೆ ಹೊಂದಿದೆ.
ಈ ಸಮಾರಂಭದಲ್ಲಿ ಮಹಿಳಾ ಮತ್ತು ಲಿಂಗ ಸಮಾನತೆಯ ಸಚಿವೆ ರೆಚಿ ವಾಲ್ಡೆಜ್, ಖಜಾನೆ ಮಂಡಳಿಯ ಅಧ್ಯಕ್ಷ ಶಫ್ಕತ್ ಅಲಿ, ಅಂತರರಾಷ್ಟ್ರೀಯ ವ್ಯಾಪಾರ ಸಚಿವ ಮಣಿಂದರ್ ಸಿಧು ಮತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಕನ್ಸರ್ವೇಟಿವ್ ಪಕ್ಷದ ಮಧ್ಯಂತರ ನಾಯಕ ಆಂಡ್ರ್ಯೂ ಸ್ಕೀರ್ ಸೇರಿದಂತೆ ಕೆನಡಾದ ರಾಜಕೀಯದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಎಲ್ಲಾ ನಾಯಕರು ಶ್ರೀರಾಮನ ಪ್ರತಿಮೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮೆಚ್ಚಿಕೊಂಡರು.
ಉತ್ತರ ಅಮೆರಿಕಾದಲ್ಲಿ ಅತಿ ಎತ್ತರದ ರಾಮನ ವಿಗ್ರಹ ಸ್ಥಾಪನೆ ಹೆಮ್ಮೆಯ ವಿಚಾರ ಎಂದು ಚಿವ ಮಣಿಂದರ್ ಸಿಧು ಹೇಳಿದರು. ಕಾರ್ಯಕ್ರಮದಲ್ಲಿ
ಭಾರತ ಸರ್ಕಾರವನ್ನು ಪ್ರತಿನಿಧಿಸಿದ್ದ ಹಂಗಾಮಿ ಕಾನ್ಸುಲ್ ಜನರಲ್ ಕಪಿಧ್ವಜ ಪ್ರತಾಪ್ ಸಿಂಗ್ ಮಾತನಾಡಿ, ಭಾರತ ಮತ್ತು ಕೆನಡಾ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸಿದರು. ಹಿಂದೂ ಪರಂಪರೆ ಕೇಂದ್ರದ ಸಂಸ್ಥಾಪಕ ಮತ್ತು ಪ್ರಧಾನ ಅರ್ಚಕ ಆಚಾರ್ಯ ಸುರೀಂದರ್ ಶರ್ಮಾ ಶಾಸ್ತ್ರಿ ಅವರು ಮೂರ್ತಿಯನ್ನು ಕೇವಲ ಕಲಾತ್ಮಕ ಸೃಷ್ಟಿಗಿಂತ ಹೆಚ್ಚು, ಇದು ಸಮುದಾಯಕ್ಕೆ ಆಧ್ಯಾತ್ಮಿಕ ಕೊಡುಗೆಯಾಗಿದೆ ಎಂದುಹೇಳಿದರು. ಸದಾಚಾರವೇ ನಮ್ಮ ಹಾದಿಗೆ ಮಾರ್ಗದರ್ಶನ ಮಾಡಬೇಕು ಎಂಬುದನ್ನು ಇದು ನೆನಪಿಸುತ್ತದೆ ಎಂದರು.
2024 ರಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮ ಜನ್ಮಭೂಮಿ ದೇವಾಲಯ ಉದ್ಘಾಟನೆಯಿಂದ ಪ್ರೇರಿತವಾಗಿ ಕೆನಡಾದಲ್ಲಿ ಶ್ರೀರಾಮನ ಭಾರಿ ಗಾತ್ರದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಅಪೂರ್ವ ಕ್ಷಣಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾಗಿದ್ದಾರೆ. ಶ್ರೀರಾಮನ ಪ್ರತಿಮೆ ಅನಾವರಣದ ವೇಳೆ ಅಲ್ಲಿ ಬರೀ ಜೈಶ್ರೀರಾಮ್ ಎಂಬ ಘೋಷಣೆಯೇ ಮುಗಿಲು ಮುಟ್ಟಿತ್ತು. ಅಂದಹಾಗೆ ಈ ಶ್ರೀರಾಮನ ಪ್ರತಿಮೆಯೂ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಇದ್ದು ಇಲ್ಲಿ ವಿಮಾನಗಳ ಲ್ಯಾಂಡಿಂಗ್ ವೇಳೆ ಹಾಗೂ ಟೇಕಾಫ್ ವೇಳೆ ಇದು ವಿಹಾಂಗಮ ನೋಟವನ್ನು ಪ್ರಯಾಣಿಕರಿಗೆ ನೀಡಲಿದೆ.
ಇದು ಕೇವಲ ನಂಬಿಕೆಯ ಆಚರಣೆಯಾಗಿರಲಿಲ್ಲ. ಸಾಂಸ್ಕೃತಿಕ ಸಾಮರಸ್ಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಗೌರವಿಸುವ ಎಲ್ಲಾ ಕೆನಡಿಯನ್ನರಿಗೆ ಇದು ಹೆಮ್ಮೆಯ ಕ್ಷಣವಾಗಿತ್ತು ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ ಕುಶಾಗರ್ ಶರ್ಮಾ ಹೇಳಿದರು. ಕೆನಡಾದಲ್ಲಿರುವ ಭಗವಾನ್ ರಾಮನ ಪ್ರತಿಮೆಯು ಈಗ ಭಕ್ತಿ, ಪರಂಪರೆ ಮತ್ತು ಏಕತೆಯ ಸಂಕೇತವಾಗಿ ನಿಂತಿದೆ. ಇದು ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ಜಾಗತಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ. ಇದರ ಉದ್ಘಾಟನೆಯು ಉತ್ತರ ಅಮೆರಿಕಾದ ಹಿಂದೂ ಸಮುದಾಯಕ್ಕೆ ಒಂದು ಮೈಲಿಗಲ್ಲು ಮಾತ್ರವಲ್ಲದೆ ಅಂತರ ಸಾಂಸ್ಕೃತಿಕ ಗೌರವ ಮತ್ತು ಆಧ್ಯಾತ್ಮಿಕ ಸ್ಫೂರ್ತಿಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ