ನ್ಯೂಜಿಲೆಂಡ್ ವೈರಸ್‌ಮುಕ್ತ: ಮೊದಲ ಪ್ರಮುಖ ದೇಶ| ಒಟ್ಟು 1154 ಜನರಿಗೆ ಸೋಂಕು, 22 ಸಾವು| 3 ತಿಂಗಳಲ್ಲಿ ಕೊರೋನಾ ಮಾರಿ ನಾಮಾವಶೇಷ| ಗೆದ್ದಿದ್ದು ಹೇಗೆ?| ದ್ವೀಪರಾಷ್ಟ್ರ ನ್ಯೂಜಿಲೆಂಡಲ್ಲಿ ಜನಸಂಖ್ಯೆ ವಿರಳ. ವೈರಸ್ ಹಬ್ಬದಿರಲು ಇದು ಮುಖ್ಯ ಕಾರಣ| ಕೊರೋನಾಬಾಧಿತ ದೇಶಗಳ ಯಶಸ್ವಿ ಸೂತ್ರ ಅಳವಡಿಕೆ. ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿ| ಸೋಂಕಿತರು, ಸೋಂಕಿನ ಮೂಲ ಅತ್ಯಂತ ತ್ವರಿತವಾಗಿ ಪತ್ತೆ. ಪ್ರಧಾನಿ ಮಾತು ಕೇಳಿದ ಜನತೆ
ವೆಲ್ಲಿಂಗ್ಟನ್(ಜೂ.09): ವಿಶ್ವದ ಹಲವು ದೇಶಗಳು ಕೊರೋನಾ ವೈರಸ್ ಉಪಟಳದಿಂದ ನಲುಗಿರುವಾಗಲೇ ದ್ವೀಪರಾಷ್ಟ್ರ ನ್ಯೂಜಿಲೆಂಡ್ ತಾನು ಕೊರೋನಾ ಮುಕ್ತವಾಗಿರುವುದಾಗಿ ಘೋಷಿಸಿಕೊಂಡಿದೆ. ಅಲ್ಲದೆ ದೇಶದಲ್ಲಿ ವಿಧಿಸಿದ್ದ ಬಹುತೇಕ ಎಲ್ಲ ನಿರ್ಬಂಧ ತೆಗೆದುಹಾಕಿದೆ.
ಫೆ.28ರಂದು ನ್ಯೂಜಿಲೆಂಡ್‌ನಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊನೆಯ ರೋಗಿಯೂ ಸೋಮವಾರ ಬಿಡುಗಡೆಯಾಗುವುದರೊಂದಿಗೆ ನ್ಯೂಜಿಲೆಂಡ್ ಕೊರೋನಾ ಮಣಿಸುವಲ್ಲಿ ಸಫಲವಾಗಿದೆ. ಕಳೆದ 17 ದಿನಗಳಿಂದ ದೇಶದಲ್ಲಿ ಯಾವುದೇ ಹೊಸ ಸೋಂಕು ಪತ್ತೆಯಾಗಿಲ್ಲ.
ಕೊರೋನಾ ಹೊಡೆದೋಡಿಸಿದ ನ್ಯೂಜಿಲೆಂಡ್‌ನಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ; ವಿಶ್ವಕ್ಕೆ ಮಾದರಿ!
ಈವರೆಗೆ ನ್ಯೂಜಿಲೆಂಡ್‌ನಲ್ಲಿ 1154 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, 22 ಮಂದಿ ಸಾವಿಗೀಡಾಗಿದ್ದಾರೆ. ಇದೀಗ ಒಂದೂ ಕೊರೋನಾ ಪತ್ತೆಯಾಗಿಲ್ಲದ ಸುದ್ದಿ ತಿಳಿದು ಪ್ರಧಾನಿ ಜೆಸಿಂಡಾ (39) ತಮ್ಮ ಮಗಳ ಜತೆ ಕುಣಿದು ಕುಪ್ಪಳಿಸಿದ್ದಾರೆ. ಗಡಿಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಹೊರತುಪಡಿಸಿ ಸಾಮಾಜಿಕ ಅಂತರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಇದ್ದ ಎಲ್ಲ ನಿರ್ಬಂಧಗಳನ್ನೂ ತೆಗೆದುಹಾಕಿದ್ದಾರೆ.
ಈ ಹಿಂದೆ ಸ್ಲೊವೇನಿಯಾ, ಫಿಜಿ, ಮೋಂಟೆನೆಗ್ರೋ, ಎರಿಟ್ರಿಯಾ, ಪಪುವಾ ನ್ಯೂ ಗಿನಿಯಾ, ಸೀಶೆಲ್ಸ್, ಹೋಲಿ ಸೀ, ಸೈಂಟ್ ಕಿಟ್ಸ್ ಆ್ಯಂಡ್ ನೆವಿಸ್, ಈಸ್ಟ್ ತೈಮೋರ್ ಕೊರೋನಾ ಮುಕ್ತವಾಗಿರುವುದಾಗಿ ಘೋಷಿಸಿಕೊಂಡಿದ್ದವು.
ಗೆದ್ದಿದ್ದು ಹೇಗೆ?:
ಹೇಳಿ ಕೇಳಿ ನ್ಯೂಜಿಲೆಂಡ್ ದ್ವೀಪ ರಾಷ್ಟ್ರ. ಇದು ಅಕ್ಕಪಕ್ಕದ ದೇಶದಿಂದ ನೇರವಾಗಿ ಸೋಂಕು ಹರಡದಂತೆ ತಡೆಯುವುದಕ್ಕೆ ಬಹುಮುಖ್ಯ ಕೊಡುಗೆ ನೀಡಿತು. ನ್ಯೂಜಿಲೆಂಡ್ ಜನಸಂಖ್ಯೆ ಕೇವಲ 50 ಲಕ್ಷ. ಜನರೂ ಚದುರಿದಂತೆ ವಾಸಿಸುತ್ತಾರೆ. ಇದು ಸೋಂಕು ಹರಡುವಿಕೆಗೆ ಕಡಿವಾಣ ಹಾಕಿತು. ಜೆಸಿಂಡಾ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಾಗಿದೆ. ಅವರು ಫೇಸ್‌ಬುಕ್ ಲೈವ್ ಮೂಲಕ ಜನತೆಗೆ ಹಲವು ನಿರ್ದೇಶನಗಳನ್ನು ನೀಡುತ್ತಾ ಬಂದರು. ಜನತೆಯೂ ಪಾಲಿಸಿದರು.
ಕೊರೋನಾ ಗೆದ್ದಿದ್ದಕ್ಕೆ ಬೀಯರ್ ಬಾಟಲ್ ಓಪನ್, 103ರ ಅಜ್ಜಿಗೆ ಹೇಳಿ ಚೀಯರ್ಸ್!
ಅಮೆರಿಕ, ಬ್ರಿಟನ್, ಇಟಲಿ, ಭಾರತ ಮುಂತಾದ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡ ಒಂದು ತಿಂಗಳ ನಂತರ ನ್ಯೂಜಿಲೆಂಡ್‌ಗೆ ಕೊರೋನಾ ಪ್ರವೇಶವಾಯಿತು. ಈ ದೇಶಗಳು ಹಾಗೂ ಚೀನಾದಲ್ಲಿ ತೆಗೆದುಕೊಂಡ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯೂಜಿಲೆಂಡ್ ಸರ್ಕಾರ ಅವನ್ನು ಅನುಷ್ಠಾನಕ್ಕೆ ತಂದಿತು. ಅಲ್ಲಿನ ಯಶಸ್ವಿ ಪ್ರಯೋಗಗಳನ್ನು ಮಾತ್ರ ಬಳಸಿಕೊಂಡಿತು.
ಜೆಸಿಂಡಾ ಅವರು ಮಾಚ್‌ರ್‍ನಲ್ಲಿ 7 ವಾರ ಲಾಕ್‌ಡೌನ್ ಘೋಷಣೆ ಮಾಡಿ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದರು. ಅತ್ಯಂತ ತ್ವರಿತವಾಗಿ ಸೋಂಕಿತರ ಪತ್ತೆ ಹಾಗೂ ಅವರ ಮೂಲವನ್ನು ಪತ್ತೆ ಮಾಡಲಾಯಿತು. ಇದೆಲ್ಲದರ ಫಲವಾಗಿ ಸೋಂಕು ಸಂಪೂರ್ಣ ನಿಯಂತ್ರಣವಾಗಿದೆ.