* ಶೂನ್ಯ ಕೇಸು ಇದ್ದ ಇಲ್ಲಿ ದಾಖಲೆಯ 206 ಕೇಸು
* ನ್ಯೂಜಿಲೆಂಡ್‌ನಲ್ಲಿ ಏಕಾಏಕಿ ಕೋವಿಡ್ ಸ್ಫೋಟ
ಆಕ್ಲೆಂಡ್ (ನ.07): ಈವರೆಗೆ ಅತ್ಯಂತ ಕಡಿಮೆ ಕೊರೋನಾ ಕೇಸು (Covid Cases) ದಾಖಲಾಗಿದ್ದ ನ್ಯೂಜಿಲೆಂಡ್‌ನಲ್ಲಿ (New Zealand) ಏಕಾಏಕಿ ಕೊರೋನಾ ಸ್ಫೋಟಗೊಂಡಿದೆ. ಶನಿವಾರ ಒಂದೇ ದಿನ 206 ಕೇಸ್‌ಗಳು ದಾಖಲಾಗಿವೆ. ಇದು ಕೋವಿಡ್ ಸಾಂಕ್ರಾಮಿಕ ಆರಂಭದ ಬಳಿಕ ದಾಖಲಾದ ಅತ್ಯಂತ ಗರಿಷ್ಠ ಸಂಖ್ಯೆ.
ಈ 206 ಪ್ರಕರಣಗಳ ಪೈಕಿ ನ್ಯೂಜಿಲೆಂಡ್‌ನ ಪ್ರಮುಖ ನಗರ ಮತ್ತು ರಾಜಧಾನಿ ಆಕ್ಲೆಂಡ್ ಒಂದರಲ್ಲೇ 200 ಕೇಸ್‌ಗಳು ದಾಖಲಾಗಿವೆ. ಇದು ದೇಶದಲ್ಲಿ ಆತಂಕ ಮೂಡಿಡಿದೆ.
ಈ ಹಿಂದೆ 1 ಕೇಸ್ ದಾಖಲಾಗುತ್ತಿದ್ದಂತೆ, ನ್ಯೂಜಿಲೆಂಡ್ ಸರ್ಕಾರ ಸಂಪೂರ್ಣ ಲಾಕ್‌ಡೌನ್ (Lockdown) ಘೋಷಿಸಿತ್ತು ಹಾಗೂ ಗಡಿಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿದೇಶಿಗರ ಮೇಲೆ ಅದು ಹೇರಿತ್ತು. ಈ ಮೂಲಕ ಕೋವಿಡ್ ಮೇಲೆ ನಿಯಂತ್ರಣ ಸಾಧಿಸಿತ್ತು.
ಆದಾಗ್ಯೂ ತನ್ನ 50 ಲಕ್ಷ ಜನಕ್ಕೆ ಲಸಿಕೆ ನೀಡಲು ನ್ಯೂಜಿಲೆಂಡ್ ಸರ್ಕಾರ ಹರಸಾಹಸ ಪಡುತ್ತಿದೆ. ಡೆಲ್ಟಾಕೊರೋನಾ ತಳಿ (Delta Covid Varient) ಭೀತಿಯಿಂದ ಜನತೆ ಸುಮಾರು 3 ತಿಂಗಳಿನಿಂದ ನಿರ್ಬಂಧದ ನಡುವೆಯೇ ಬದುಕುತ್ತಿದ್ದಾರೆ. ಸೋಮವಾರ ನಿರ್ಬಂಧ ಸಡಿಲಿಸುವ ಸಾಧ್ಯತೆ ಇತ್ತು. ಆದರೆ ಅದರ ನಡುವೆಯೇ ಇದೀಗ ಡೆಲ್ಟಾರೂಪಾಂತರಿ ವೈರಸ್ ಸ್ಫೋಟಗೊಂಡಿದೆ.
ಅದಾಗ್ಯೂ ಪ್ರಧಾನಿ ಜಸಿಂದಾ ಆರ್ಡೆರ್ನ್ ಅವರು ಆಕ್ಲೆಂಡ್ ನಿವಾಸಿಗಳು, ಬೇಸಿಗೆ ರಜೆ ಮತ್ತು ಕ್ರಿಸ್‌ಮಸ್‌ಗಾಗಿ ಪ್ರಯಾಣಿಸಬಹುದು ಎಂದಿದ್ದಾರೆ. ‘ನಾವು ಆಕ್ಲೆಂಡ್ ನಿವಾಸಿಗಳನ್ನು ಐಸೋಲೇಶನ್‌ನಲ್ಲಿ ಇರಿಸಲು ಬಯಸುವುದಿಲ್ಲ. ಆದರೆ ಈಗಿನ ಸೋಂಕು ಜನರಿಗೆ ವ್ಯಾಕ್ಸಿನ್ ಮಹತ್ವವನ್ನು ತಿಳಿಸಿದೆ’ ಎಂದಿದ್ದಾರೆ.
ಫೆಬ್ರವರಿಗೆ ಯೂರೋಪಲ್ಲಿ ಇನ್ನೂ 5 ಲಕ್ಷ ಕೋವಿಡ್ ಸಾವು?
ಯುರೋಪ್‌ನಲ್ಲಿ (Europe) ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್ ಅಲೆಯ (Covid Wave) ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (World Health Organisation), ಸೋಂಕು ಮತ್ತು ಸಾವಿನ ಗತಿಯ ಹೀಗೆಯೇ ಮುಂದುವರೆದರೆ ಮುಂದಿನ ಫೆಬ್ರವರಿ (February) ವೇಳೆಗೆ ಇನ್ನೂ 5 ಲಕ್ಷ ಜನರು ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ಮುಖ್ಯಸ್ಥ ಡಾ. ಹನ್ಸ್ ಕ್ಲೂಗೆ ‘ಯುರೋಪ್ ಹಾಗೂ ಮಧ್ಯಏಷ್ಯಾ ಪ್ರಾಂತ್ಯದ 53 ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಪುನರುತ್ಥಾನಗೊಳ್ಳಲಿರುವ ಮತ್ತು ಈಗಾಗಲೇ ಹೊಸ ಅಲೆಗೆ ಕಾರಣವಾಗಿರುವ ಸೋಂಕು ನಿಜವಾದ ಅಪಾಯವನ್ನು ನಮ್ಮ ಮುಂದಿಟ್ಟಿದೆ. ಕಳೆದ ಕೆಲ ವಾರಗಳಿಂದ ದಾಖಲಾಗುತ್ತಿರುವ ಹೊಸ ಸೋಂಕು, ಸಾವಿನ ಪ್ರಮಾಣ, ಅದು ಹರಡುತ್ತಿರುವ ವೇಗ ಹಾಗೂ ವ್ಯಾಪ್ತಿ ಇಡೀ ಪ್ರದೇಶವನ್ನು ಸಾಂಕ್ರಾಮಿಕದ ಕೇಂದ್ರಬಿಂದುವನ್ನಾಗಿಸಿದೆ. ಒಂದು ವರ್ಷದ ಹಿಂದೆ ಯಾವ ಪರಿಸ್ಥಿತಿ ಇತ್ತೋ ಅದೇ ಮತ್ತೆ ಮರುಕಳಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ 53 ದೇಶಗಳಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಳೆದ ವಾರ ದ್ವಿಗುಣಗೊಂಡಿದೆ. ಈ ಏರಿಕೆ ಗತಿ ಹೀಗೆಯೇ ಮುಂದುವರೆದರೆ ಫೆಬ್ರವರಿ ವೇಳೆಗೆ ಇನ್ನೂ 5 ಲಕ್ಷ ಜನರು ಸೋಂಕಿಗೆ ಬಲಿಯಾಗಲಿದ್ದಾರೆ. ಈ ದೇಶಗಳಲ್ಲಿ ಪ್ರತಿ ವಾರ 18 ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲುತ್ತಿದೆ. ಇದು ಹಿಂದಿನ ವಾರಕ್ಕಿಂತ ಶೇ.6ರಷ್ಟು ಹೆಚ್ಚು. ಇನ್ನು ವಾರಕ್ಕೆ 24000 ಜನರು ಸಾವನ್ನಪ್ಪುತ್ತಿದ್ದಾರೆ. ಇದು ಹಿಂದಿನ ವಾರಕ್ಕಿಂತ ಶೇ.12ರಷ್ಟುಹೆಚ್ಚು ಎಂದು ಹೇಳಿದ್ದಾರೆ.
ಜನರು ಲಸಿಕೆ ಪಡೆಯದೇ ಇರುವುದು, ಕೋವಿಡ್ ಮಾರ್ಗಸೂಚಿಗಳಲ್ಲಿ (Covid Guidelines) ಸಡಿಲಿಕೆ ಮಾಡಿದ್ದೇ ಈ ಬೆಳವಣಿಗಳಿಗೆ ಕಾರಣ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು (Vaccination), ಕೋವಿಡ್ ನಿಯಂತ್ರಣ ಕ್ರಮಗಳನ್ನು ಮತ್ತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಡಾ.ಹನ್ಸ್ ಸಲಹೆ ನೀಡಿದ್ದಾರೆ.
ಇದುವರೆಗೆ ಯುರೋಪ್ ದೇಶಗಳಲ್ಲಿ 6.5 ಕೋಟಿ ಜನರಿಗೆ ಸೋಂಕು ತಗುಲಿದ್ದು, 13.16 ಲಕ್ಷ ಜನರು ಸಾವನ್ನಪ್ಪಿದ್ದಾರೆ.