
ಢಾಕಾ (ಮಾ.28): ಬಾಂಗ್ಲಾದೇಶಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಈ ವೇಳೆ ಭಾರತ- ಮತ್ತು ಬಾಂಗ್ಲಾದೇಶದ ಮಧ್ಯೆ ವಿಪತ್ತು ನಿರ್ವಹಣೆ, ಯುವಜನ ಹಾಗೂ ಕ್ರೀಡೆ, ವ್ಯಾಪಾರ ವಹಿವಾಟು, ಸಂಪರ್ಕ ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ ಐದು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಬಾಂಗ್ಲಾದೇಶ ವಿಮೋಚನೆಗೊಂಡ 50ನೇ ವರ್ಷಾಚರಣೆಯ ನಿಮಿತ್ತ ಅಂಚೆ ಚೀಟಿ, ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.
ಭಾರತ- ಬಾಂಗ್ಲಾ ಮಧ್ಯೆ ನೂತನ ರೈಲು:
ಇದೇ ವೇಳೆ ಮೋದಿ ಹಾಗೂ ಶೇಕ್ ಹಸೀನಾ ಅವರು ಪಶ್ಚಿಮ ಬಂಗಾಳದ ನ್ಯೂ ಜಲ್‌ಪೈಗುರಿ ಮತ್ತು ಬಾಂಗ್ಲಾದೇಶದ ರಾಜಧಾನಿ ಢಾಕಾ ಮಧ್ಯೆ ಸಂಪರ್ಕ ಕಲ್ಪಿಸುವ ನೂತನ ಪ್ಯಾಸೆಂಜರ್ ರೈಲಿಗೆ ಜಂಟಿಯಾಗಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿದರು. ಭಾರತ ಮತ್ತು ಬಾಂಗ್ಲಾ ನಡುವಿನ 3ನೇ ಪ್ಯಾಸೆಂಜರ್ ರೈಲು ಇದಾಗಿದೆ.
ಮೋದಿ ಬಾಂಗ್ಲಾ ಪ್ರವಾಸಕ್ಕೆ ಕೆರಳಿದ ಮಮತಾ; ಆಯೋಗಕ್ಕೆ ದೂರು ನೀಡಲು ಮುಂದಾದ ಸಿಎಂ! ..
ಸಭೆಯ ಬಳಿಕ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪ್ರಧಾನಿ ಮೋದಿ ಹಾಗೂ ಶೇಖ್ ಹಸೀನಾ ಸುಮಾರು ಒಂದು ಗಂಟೆಗಳ ಕಾಲ ಆರೋಗ್ಯ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟುಬಲಗೊಳ್ಳಲಿದೆ ಎಂದು ಹೇಳಿದ್ದಾರೆ.
ಆ್ಯಂಬುಲೆನ್ಸ್ ಹಸ್ತಾಂತರ:
ಬಾಂಗ್ಲಾ ದೇಶಕ್ಕೆ ಭಾರತ ಮಾನವೀಯ ನೆಲೆಯ ಮೇಲೆ 12 ಲಕ್ಷ ಕೋವಿಡ್ ಲಸಿಕೆ ಹಾಗೂ 109 ಆ್ಯಂಬುಲೆನ್ಸ್‌ಗಳನ್ನು ಪೂರೈಸಲು ಉದ್ದೇಶಿಸಿದೆ. ಇದರ ಧ್ಯೋತಕವಾಗಿ ನರೇಂದ್ರ ಮೋದಿ ಅವರು ಆ್ಯಂಬುಲೆನ್ಸ್‌ನ ಕೀ ಹಾಗೂ ಕೊರೋನಾ ಲಸಿಕೆಯನ್ನು ಒಳಗೊಂಡ ಬಾಕ್ಸ್ ಅನ್ನು ಪ್ರಧಾನಿ ಶೇಖ್ ಹಸೀನಾ ಅವರಿಗೆ ಹಸ್ತಾಂತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ