ಗಡಿಯಲ್ಲಿ ನೇಪಾಳ ರೇಡಿಯೋ ಕಿರಿಕಿರಿ| ಎಫ್‌ಎಂಗಳಲ್ಲಿ ಭಾರತ ವಿರೋಧಿ ಭಾಷಣ, ಹಾಡು| ನಮ್ಮ ಜಾಗ ಕಳವಾಗಿದೆ, ಎದ್ದೇಳಿ ಜನರೇ ಎಂದು ಕರೆ| ಉತ್ತರಾಖಂಡದ ಗಡಿ ಭಾಗದ ಚಾನೆಲ್‌ಗಳಲ್ಲಿ ಪ್ರಸಾರ| ಹೊಸ ನಕ್ಷೆ ರಚನೆ ಬೆನ್ನಲ್ಲೇ ನೇಪಾಳದ ಮತ್ತೊಂದು ಕ್ಯಾತೆ
ಪೀಥೋರಗಢ(ಜೂ.22): ಭಾರತದೊಂದಿಗೆ ಹೊಸದಾಗಿ ಗಡಿ ಕ್ಯಾತೆ ತೆಗೆದಿರುವ ನೇಪಾಳ, ಇದೀಗ ಗಡಿಗೆ ಹೊಂದಿಕೊಂಡಿರುವ ತನ್ನ ಪ್ರದೇಶದ ಎಫ್‌ಎಂ ರೇಡಿಯೋ ಚಾನೆಲ್‌ಗಳಲ್ಲಿ ಭಾರತ ವಿರೋಧಿ ಭಾಷಣ ಮತ್ತು ಹಾಡುಗಳನ್ನು ಪ್ರಸಾರ ಮಾಡಲು ಆರಂಭಿಸಿದೆ.
ನೇಪಾಳ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ಚೀನಾದಿಂದ ಗಾಳ!
undefined
ನೇಪಾಳದ ಗಡಿ ಭಾಗದ ದಾರ್ಚುಲಾದಲ್ಲಿನ ಹಲವು ಎಫ್‌ಎಂ ಕೇಂದ್ರಗಳ ಪ್ರಸಾರವು ಉತ್ತರಾಖಂಡದ ಗಡಿಭಾಗದ ಹಲವು ಜಿಲ್ಲೆಗಳವರೆಗೂ ಪ್ರಸಾರ ವ್ಯಾಪ್ತಿ ಹೊಂದಿದೆ. ಇತ್ತೀಚೆಗೆ ನೇಪಾಳ ಸರ್ಕಾರ ಭಾರತದ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ತನ್ನದೆಂದು ಘೋಷಿಸಿಕೊಂಡು ಹೊಸ ನಕ್ಷೆ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ, ಹಲವು ಎಫ್‌ಎಂ ಚಾನೆಲ್‌ಗಳಲ್ಲಿ ಹಾಡುಗಳ ನಡುವೆ ನೇಪಾಳಿ ಮಾವೋವಾದಿ ನಾಯಕರ ಭಾಷಣದ ತುಣುಕು, ಭಾರತ ವಿರೋಧಿ ಹಾಡುಗಳ ಪ್ರಸಾರ ಆರಂಭಿಸಿದೆ.
ಈ ಹಾಡುಗಳಲ್ಲಿ ‘ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ನಮ್ಮದು. ನಮ್ಮ ಭೂಮಿ ಕಳವಾಗಿದೆ, ಎದ್ದೇಳಿ ಧೈರ್ಯಶಾಲಿ ಜನರೇ’ ಎಂದು ಕರೆ ಕೊಡುವ ಅಂಶಗಳಿವೆ. ಅಲ್ಲದೆ ಭಾರತದ ಪ್ರದೇಶಗಳ ಹವಾಮಾನ ವರದಿಯನ್ನೂ ಪ್ರಸಾರ ಮಾಡಲಾಗುತ್ತಿದೆ. ಗಡಿಭಾಗದ ನಯಾ ನೇಪಾಳ್, ಕಾಲಾಪಾನಿ ರೇಡಿಯೋ, ಲೋಕ್‌ದರ್ಪಣ್, ಮಲ್ಲಿಕಾರ್ಜುನ ರೇಡಿಯೋ ಸೇರಿದಂತೆ ಹಲವು ರೇಡಿಯೋ ಚಾನೆಲ್‌ಗಳಲ್ಲಿ ಇಂಥ ಪ್ರಚಾರ ನಡೆಯುತ್ತಿದೆ.
ಭಾರತದ ಭೂಮಿ ಕಬಳಿಸಿದ ನೇಪಾಳ ನಕ್ಷೆಗೆ ಅಂಗೀಕಾರ
ಭಾರತದ ಗಡಿಭಾಗದ ಜನರು ನೇಪಾಳಿ ಹಾಡು ಮತ್ತು ವಾರ್ತೆಗಳನ್ನು ಕೇಳುವ ಅಭ್ಯಾಸ ಹೊಂದಿರುವ ಕಾರಣ, ಉದ್ದೇಶಪೂರ್ವಕವಾಗಿಯೇ ನೇಪಾಳ ಸರ್ಕಾರ ಇಂಥದ್ದೊಂದು ಭಾರತ ವಿರೋಧಿ ಪ್ರಚಾರ ಆರಂಭಿಸಿದೆ ಎನ್ನಲಾಗಿದೆ. ಈ ವಿಷಯ ನೇಪಾಳಿ ರೇಡಿಯೋ ಆಲಿಸುವ ಭಾರತೀಯರ ಮೂಲಕ ಬೆಳಕಿಗೆ ಬಂದಿದೆ. ಆದರೆ ಸ್ಥಳೀಯ ಪೊಲೀಸರು ಮಾತ್ರ ಇಂಥ ಯಾವುದೇ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.