
ಲುಂಬಿನಿ(ಮೇ.16): ಬುದ್ಧ ಪೂರ್ಣಿಮಾ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸ ಮಾಡಿದ್ದಾರೆ. ಬುದ್ಧನ ಜನ್ಮಸ್ಥಳ ಲುಂಬಿನಿಯಲ್ಲಿ ಬೌದ್ಧ ಸಂಸ್ಕೃತಿ ಹಾಗೂ ಪರಂಪರೆಯ ಅಂತಾರಾಷ್ಟ್ರೀಯ ಕೇಂದ್ರದ ಶಿಲಾನ್ಯಾಸ ನೆರವೇರಿಸಿದ ಮೋದಿ, ಹಲವು ಮಹತ್ವದ ಒಪ್ಪಂದಗಳಿಗೂ ಸಹಿ ಹಾಕಿದ್ದಾರೆ. ಲುಂಬಿನಿಯಲ್ಲಿ ಆಯೋದಿಸಿದ್ದ ಕಾರ್ಯಕ್ರಮದಲ್ಲಿ ಮೋದಿಗೂ ಮೊದಲು ಮಾತನಾಡಿದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಧನ್ಯವಾದ ಹೇಳಿದ್ದಾರೆ.
ಇತ್ತೀಚೆಗೆ ಭಾರತ ಪ್ರವಾಸದ ವೇಳೆ ಕಾಶಿ ವಿಶ್ವನಾಥ್ ಮಂದಿರಕ್ಕೆ ಬೇಟಿ ನೀಡುವ ಹಾಗೂ ದರ್ಶನ ಪಡೆಯುವ ಸೌಭಾಗ್ಯ ನನಗೆ ಒಲಿದು ಬಂದಿತ್ತು. ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಶೇರ್ ಬಹದ್ದೂರ್ ದೇವುಬಾ ಹೇಳಿದ್ದಾರೆ.
ಭಗವಾನ್ ಬುದ್ಧನ ಮೇಲಿನ ಭಕ್ತಿ ಭಾರತ ಹಾಗೂ ನೇಪಾಳ ಸಂಬಂಧವನ್ನು ಗಟ್ಟಿಗೊಳಿಸಿದೆ. ಪ್ರಧಾನಿ ಮೋದಿ!
ಉತ್ತರ ಪ್ರದೇಶದಲ್ಲಿ ಕಾಶ್ಮೀ ವಿಶ್ವನಾಥನ ಮಂದಿರ ಪುನರುಜ್ಜೀವನಗೊಳಿಸಿದ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಭಾರತ ಪ್ರವಾಸದಲ್ಲಿ ದೇವುಬಾ ಶ್ಲಾಘಿಸಿದ್ದರು. ಪವಿತ್ರ ದೇಗುಲವನ್ನು ಭಕ್ತಿಯ ಕೇಂದ್ರವಾಗಿ ಜೀರ್ಣೋದ್ಧಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಕಾರ್ಯವನ್ನು ಮೆಚ್ಚಿಕೊಂಡಿದ್ದರು. ಇದೀಗ ನೇಪಾಳದಲ್ಲಿ ಯೋಗಿ ಆದಿತ್ಯನಾಥ್ ಹೆಸರು ಉಲ್ಲೇಖವಾಗಿದೆ. ಇದು ಯೋಗಿ ವರ್ಚಸ್ಸು ದೇಶದ ಹೊರಭಾಗದಲ್ಲೂ ಪಸರಿಸುತ್ತಿದೆ ಎಂದು ಯೋಗಿ ಬೆಂಬಲಿಗರು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಆತಿಥ್ಯ, ಉತ್ತರ ಪ್ರದೇಶದಲ್ಲಿನ ಅಭಿವೃದ್ಧಿ, ಹಿಂದೂ ಮಂದಿರಗಳ ಜೀರ್ಣೋದ್ಧಾರ, ಭಾರತೀಯ ಸಂಸ್ಕೃತಿ, ಭಾರತೀಯತೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ವರ್ಚಸನ್ನು ಹೆಚ್ಚಿಸಿದೆ. ಯೋಗಿ ಇದೀಗ ಉತ್ತರ ಪ್ರದೇಶದ ನಾಯಕನಾಗಿ ಮಾತ್ರ ಉಳಿದಿಲ್ಲ, ಭಾರತದ ಪ್ರಬಲ ನಾಯಕನಾಗಿ ಬೆಳೆದಿದ್ದಾರೆ ಎಂದು ಯೋಗಿ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುದ್ಧ ಪೂರ್ಣಿಮಾ ಜಯಂತಿ ಆಚರಣೆಗೆ ಪ್ರಧಾನಿ ಮೋದಿ ಆಗಮಿಸಿರುವುದು ಮತ್ತಷ್ಟು ಮೆರೆಗು ನೀಡಿದೆ. ಈ ಮೂಲಕ ಭಾರತ ಹಾಗೂ ನೇಪಾಳ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಪುರಾಣಕಾಲದಿಂದ ಭಾರತ ಹಾಗೂ ನೇಪಾಳ ಅತ್ಯುತ್ತಮ ಸಂಬಂಧ ಹೊಂದಿದೆ ಎಂದು ದೇವುಬಾ ಹೇಳಿದ್ದಾರೆ.
ಲುಂಬಿನಿಯ ಮಹಾಮಾಯ ಮಂದಿರದಲ್ಲಿ ಪೂಜೆ ಮಾಡಿದ ಮೋದಿ, 2014ರ ಬಳಿಕ 5ನೇ ನೇಪಾಳ ಪ್ರವಾಸ!
ದೇವುಬಾ ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡಿದ ಒಂದು ತಿಂಗಳ ಅಂತರದಲ್ಲೇ ಮೋದಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಬುದ್ಧನ ತಾಯಿ ಮಾಯಾವತಿ ಅವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ಮೂಲಕ ಮೋದಿ ನೇಪಾಳ ಪ್ರವಾಸ ಆರಂಭಿಸಿದ್ದರು. ಬಳಿಕ ಲುಂಬಿನಿಯಲ್ಲಿ ಬುದ್ಧನ ಜನ್ಮಸ್ಥಳದಲ್ಲಿ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.
* ಬುದ್ಧನ ಪರಿನಿರ್ವಾಣ ಸ್ಥಳಕ್ಕೆ ಇನ್ನು ನೇರ ವಿಮಾನ
ದೇಶದಲ್ಲಿ ಬೌದ್ಧಧರ್ಮ ಟೂರಿಸಂ ಸರ್ಕೀಟ್ ವ್ಯಾಪ್ತಿಯನ್ನು ಇನ್ನಷ್ಟುವಿಸ್ತರಿಸಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದೆ. ಗೌತಮ ಬುದ್ಧ ಮಹಾಪರಿನಿರ್ವಾಣ ಹೊಂದಿದ ಸ್ಥಳವಾದ ಕುಶಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದು ದೇಶದ 123ನೇ ವಿಮಾನ ನಿಲ್ದಾಣ ಹಾಗೂ 35ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನಿಸಿಕೊಳ್ಳಲಿದೆ.
ಬೆಳಗ್ಗೆ 9 ಗಂಟೆಗೆ ಬೌದ್ಧ ಸನ್ಯಾಸಿಗಳು ಹಾಗೂ ಗಣ್ಯರನ್ನು ಒಳಗೊಂಡ ವಿಮಾನ ಶ್ರೀಲಂಕಾದಿಂದ ಆಗಮಿಸಿತು. ಈ ವೇಳೆ ಬೌದ್ಧ ಪ್ರಾಚ್ಯವಸ್ತುಗಳನ್ನೂ ಸರ್ಕಾರಿ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಭವ್ಯ ಸಮಾರಂಭದಲ್ಲಿ ಮೋದಿ ಅವರು ಏರ್‌ಪೋರ್ಟ್ ಉದ್ಘಾಟಿಸಿದರು. ಹೊಸ ವಿಮಾನ ನಿಲ್ದಾಣ 260 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇಡೀ ವಿಶ್ವದ ಬೌದ್ಧ ಯಾತ್ರಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ