
ವಾಷಿಂಗ್ಟನ್: ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾಗಿಯಾಗಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿ ಥಾಮಸ್ ಅಲೆನ್ ಅವರನ್ನು ಬಂಧಿಸಲಾಗಿದ್ದು, ಆತ ಯಾರು ಏನು ಮಾಡ್ತಿದ್ದ. ಎಂಬ ಬಗ್ಗೆ ಡಿಟೇಲ್ ಇಲ್ಲಿದೆ. ಗುಂಡಿನ ದಾಳಿ ನಡೆದ ವಾಷಿಂಗ್ಟನ್ ಹಿಲ್ಟನ್‌ನಲ್ಲಿ ನಡೆದ ಈ ಉನ್ನತ ಮಟ್ಟದ ಔತಣ ಕೂಟದಲ್ಲಿ 2500ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಆದರೆ ಈಗ ದಾಳಿಕೋರ ಅಲೆನ್ ಯಾರು ಎಂಬ ಬಗ್ಗೆ ಅನೇಕರಿಗೆ ಕುತೂಹಲವಿದ್ದು, ಈತನೇನು ಸಾಮಾನ್ಯನಲ್ಲ, ಈತನ ಲಿಂಕ್ಡಿನ್ ಪ್ರೊಫೈಲ್ ಪ್ರಕಾರ ಈತ ಮೆಕಾನಿಕಲ್ ಇಂಜಿನಿಯರ್, ಕಂಪ್ಯೂಟರ್ ಸೈಂಟಿಸ್ಟ್ ಆಗಿದ್ದು, ಇಂಡಿ ಗೇಮ್ ಡೆವಲಪರ್ ಆಗಿದ್ದಾನೆ. ಇದರ ಜೊತೆಗೆ ಆತ ಲಾಸ್ ಏಂಜಲೀಸ್‌ನಲ್ಲಿ ಪಾರ್ಟ್ ಟೈಮ್ ಶಿಕ್ಷಕನಾಗಿಯೂ ಆತ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆತನ ಆನ್‌ಲೈನ್ ಪ್ರೊಫೈಲ್ ಪ್ರಕಾರ ಅಲೆನ್, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದಿದ್ದಾನೆ. ನಂತರ ಈತ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಾದ ಡೊಮಿಂಗ್ಯೂಜ್ ಹಿಲ್ಸ್‌ನಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾನೆ.
ಇದರ ಜೊತೆಗೆ ಆತ ಐಜಿಕೆ ಕಂಟ್ರೋಲ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕ್ಯಾಲ್ಟೆಕ್‌ನಲ್ಲಿ ಬೋಧನಾ ಸಹಾಯಕನಾಗಿ ಕೆಲಸ ಮಾಡಿದ್ದಾನೆ. ಮಹತ್ವಾಕಾಂಕ್ಷಿ ಕಾಲೇಜು ವಿದ್ಯಾರ್ಥಿಗಳಿಗೆ ಅಡ್ಮಿಷನ್ ಕೌನ್ಸಿಲಿಂಗ್ ಹಾಗೂ ಪರೀಕ್ಷೆಗೆ ಸಿದ್ಧತೆ ನೀಡುವ ಕಂಪನಿಯಾದ C2 ಎಜುಕೇಶನ್‌ನಲ್ಲಿ ಅರೆಕಾಲಿಕ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಕಂಪನಿಯ ಫೇಸ್‌ಬುಕ್ ಪುಟದಲ್ಲಿನ 2024 ರ ಪೋಸ್ಟ್‌ನಲ್ಲಿ ಅಲೆನ್ ಅವರನ್ನು ಕಂಪನಿಯ ತಿಂಗಳ ಶಿಕ್ಷಕ ಎಂದು ಲಿಸ್ಟ್ ಮಾಡಲಾಗಿತ್ತು. 2014 ರಲ್ಲಿ, ಅಲೆನ್ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಬೇಸಿಗೆಯ ಪದವಿಪೂರ್ವ ಸಂಶೋಧನಾ ಫೆಲೋಶಿಪ್‌ನಲ್ಲಿ ಭಾಗವಹಿಸಿದ್ದರು.
ಇದರ ಜೊತೆಗೆ ಆಣ್ವಿಕ ರಸಾಯನಶಾಸ್ತ್ರವನ್ನು ಆಧರಿಸಿದ ಸ್ಟೀಮ್ ಪ್ಲಾಟ್‌ಫಾರ್ಮ್‌ಗಾಗಿ ವೀಡಿಯೊ ಗೇಮ್ ಅನ್ನು ಅಭಿವೃದ್ಧಿಪಡಿಸಿದ್ದಾಗಿ ಅಲೆನ್ ಪೋಸ್ಟ್ ಮಾಡಿದ್ದಾರೆ. ಅಲೆನ್ ಹೆಸರಿನಲ್ಲಿರುವ ಪೋಸ್ಟ್‌ನಲ್ಲಿ ಅವರು ಬಾಹ್ಯಾಕಾಶದಲ್ಲಿ ಹೊಸ ಟಾಪ್-ಡೌನ್ ಶೂಟರ್ ವಾರ್ ಗೇಮ್ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಬೋರ್ಡಮ್ ಮತ್ತು ಫಸ್ಟ್ ಲಾನಂತಹ ಆಟಗಳನ್ನು ರಚಿಸಿದ ಸ್ವಯಂ ಉದ್ಯೋಗಿ ಇಂಡೀ ಗೇಮ್ ಡೆವಲಪರ್ ಎಂದೂ ತಮ್ಮ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಫೆಡರಲ್ ಪ್ರಚಾರ ಹಣಕಾಸು ದಾಖಲೆಗಳ ಪ್ರಕಾರ, 2024 ರಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಲು ಅಲೆನ್ ಡೆಮಾಕ್ರಟಿಕ್ ಪಕ್ಷದ ರಾಜಕೀಯ ಕ್ರಿಯಾ ಸಮಿತಿಗೆ $25 ಡಾಲರ್ ಕೊಡುಗೆ ನೀಡಿದ್ದಾಗಿ ವರದಿಯಾಗಿದೆ. ಈಗ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೆನ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದ್ದು, ಕೊಲಂಬಿಯಾ ಜಿಲ್ಲಾ ಯುಎಸ್ ಅಟಾರ್ನಿ ಜೀನೈನ್ ಪಿರೊ ಪ್ರಕಾರ, ಅಲೆನ್ ವಿರುದ್ಧ ಅಪಾಯಕಾರಿ ಆಯುಧವನ್ನು ಬಳಸಿ ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ಹಾಗೂ ಬಂಧೂಕು ಬಳಕೆ ಆರೋಪ ಹೊರಿಸಲಾಗಿದೆ. ಸೋಮವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಒಬ್ಬ ಅಧಿಕಾರಿ ಮಾತ್ರ ಗಾಯಗೊಂಡಿದ್ದರೂ, ಈ ವ್ಯಕ್ತಿ ಸಾಧ್ಯವಾದಷ್ಟು ಹಾನಿ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ನಮಗೆ ಇಲ್ಲಿಯವರೆಗೆ ತಿಳಿದಿರುವ ಆಧಾರದ ಮೇಲೆ ಸ್ಪಷ್ಟವಾಗಿದೆ ಎಂದು ಪಿರೋ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಗುಂಡಿನ ದಾಳಿ: ಹೈ ಪ್ರೊಫೈಲ್ ಕೇಸ್ ನಿರ್ವಹಿಸುತ್ತಿದ್ದ ಪ್ರಭಾವಿ ವಕೀಲೆಯ ನಿವಾಸದ ಮೇಲೆ ಫೈರಿಂಗ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ