ಸಮುದ್ರದಲ್ಲಿ ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಡಾಲ್ಪಿನ್ ಮರಿಯೊಂದನ್ನು ವ್ಯಕ್ತಿಯೊಬ್ಬರು ಬಲೆಯಿಂದ ಬಿಡಿಸಿ ರಕ್ಷಣೆ ಮಾಡಿ ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಮೂಲತಃ ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದನ್ನು ಯೂಟ್ಯೂಬ್‌ನಲ್ಲಿ ವೈರಲ್‌ಹಾಗ್ ಚಾನಲ್ ಈಗ ಹಂಚಿಕೊಂಡಿದೆ. ಇದು ಹಳೆಯ ವಿಡಿಯೋ ಆಗಿದ್ದರೂ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಈ ಘಟನೆ ನಡೆದಿದೆ.
ಡಾಲ್ಫಿನ್ (Dolphin) ಮರಿಯನ್ನು ಬಲೆಯಿಂದ ಬಿಡಿಸಿದ ನಂತರ ಅವರು ಮರಿ ಡಾಲ್ಫಿನ್ ಅನ್ನು ಮತ್ತೆ ಸಮುದ್ರಕ್ಕೆ ಬಿಟ್ಟರು ಬಲೆಯಿಂದ ಮುಕ್ತವಾಗಿ ಸಮುದ್ರಕ್ಕೆ ಬಿಡುತ್ತಿದ್ದಂತೆ ಡಾಲ್ಪಿನ್ ಮರಿ ಸ್ವಚ್ಛಂದವಾಗಿ ಈಜುವುದನ್ನು ನೋಡಬಹುದು.
ಮೀನಿನ ಬಲೆಗೆ ಸಿಲುಕಿ ಪರದಾಡಿದ ಕಾಡಾನೆ
ಘಟನೆಯ ಬಗ್ಗೆ ವಿವರಿಸಿದ ಅವರು, ನಾನು ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದೆ. ಮೀನುಗಾರಿಕೆಯಿಂದ ಹಿಂದಿರುಗಿದ ನಂತರ, ನೀರಿನ ಮಧ್ಯದಲ್ಲಿ ಏನೋ ಚಲಿಸುತ್ತಿರುವುದನ್ನು ನಾನು ನೋಡಿದೆ ಮತ್ತು ನಾನು ನನ್ನ ದೋಣಿಯನ್ನು ಅದು ಇರುವ ದಿಕ್ಕಿನತ್ತ ತಿರುಗಿಸಿದೆ. ನಂತರ ಅದರ ಹತ್ತಿರ ಹೋಗಿ ನೋಡಿದಾಗ ಮೀನು ಹಿಡಿಯುವ ಬಲೆಯಲ್ಲಿ ಸಿಕ್ಕಿಬಿದ್ದಿದ್ದು ಡಾಲ್ಫಿನ್ ಮರಿ ಎಂಬುದು ಗೊತ್ತಾಯಿತು. ನಂತರ ಅದು ದೋಣಿಯನ್ನು ನೋಡಿ ನನ್ನ ಹತ್ತಿರ ಬಂತು ಎಂದರು. ನಾನು ಡಾಲ್ಫಿನ್ ಅನ್ನು ಹಿಡಿದಾಗ ಅದು ಶಾಂತವಾಗಿತ್ತು. ನಂತರ ನಾನು ಅದನ್ನು ಮೀನುಗಾರಿಕಾ ಬಲೆಯಿಂದ ಬಿಡಿಸಿ ಮತ್ತೆ ಸಮುದ್ರಕ್ಕೆ ಎಸೆದಿದ್ದೇನೆ ಎಂದು ಆ ವ್ಯಕ್ತಿ ಹೇಳಿದರು.
ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯ ರಕ್ಷಿಸಿದ ಕಸ್ಟಮ್ಸ್ ತಂಡ
ಕಳೆದ ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯೊಂದನ್ನು ಚೆನ್ನೈ ಕಸ್ಟಮ್ಸ್ ತಂಡವೊಂದು ರಕ್ಷಣೆ ಮಾಡಿತ್ತು. ತಂಡ ರಕ್ಷಣೆ ಮಾಡಿದ ಆಮೆಯೂ ಆಲಿವ್ ರಿಡ್ಲಿ ಆಮೆಯಾಗಿದ್ದು, ಈ ಆಲಿವ್ ರಿಡ್ಲಿ ಆಮೆಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿವೆ.
ಸಮುದ್ರದಲ್ಲಿರುವ ಅನೇಕ ಜೀವ ಸಂಕುಲಗಳು ಮಾಲಿನ್ಯ ಸಮಸ್ಯೆಯಿಂದಾಗಿ ಬದುಕಲು ಕಷ್ಟ ಪಡುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಮೀನುಗಾರಿಕೆ ಬಲೆಗಳಲ್ಲಿ ಸಿಲುಕಿ ಹೊರಳಾಡುವ ಸಮುದ್ರದ ಜೀವ ವೈವಿಧ್ಯಗಳ ವಿಡಿಯೋವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರಬಹುದು. ಅಂತಹ ಒಂದು ವೀಡಿಯೊ ಇದಾಗಿದ್ದು, ಸಮುದ್ರ ಆಮೆಯೊಂದು ಸಮುದ್ರದಲ್ಲಿ ಮೀನುಗಾರಿಕಾ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಹೆಣಗಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ. ಆಲಿವ್ ರಿಡ್ಲಿ ಆಮೆಯನ್ನು ಜನವರಿ 30 ರಂದು ಚೆನ್ನೈ ಕಸ್ಟಮ್ಸ್ ಇಲಾಖೆಯ ತಂಡವು ಮೀನಿನ ಬಲೆಯಿಂದ ರಕ್ಷಿಸಿ ಸಮುದ್ರಕ್ಕೆ ಬಿಟ್ಟಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು(Supriya Sahu) ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ಸಮುದ್ರದ ಅಲೆಗಳ ನಡುವೆ ಬಲೆಯಲ್ಲಿ ಸಿಲುಕಿದ ಆಮೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ದೃಶ್ಯವಿದೆ. ಈ ಆಮೆಯನ್ನು ಯಾರೋ ಕೋಲನ್ನು ಬಳಸಿ, ಗಸ್ತು ತಿರುಗುವ ದೋಣಿಯ ಮೇಲೆಳೆದು ತರುತ್ತಾರೆ. ನಂತರ, ವ್ಯಕ್ತಿಯೊಬ್ಬ ಆಮೆಗೆ ಸಿಕ್ಕಿ ಹಾಕಿಕೊಂಡಿರುವ ಮೀನುಗಾರಿಕಾ ಬಲೆಯನ್ನು ಕತ್ತರಿಸಿ ಬಳಿಕ ಆಮೆಯನ್ನು ಸಮುದ್ರಕ್ಕೆ ಬಿಡುತ್ತಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ