ಭಾರತದ ಮೋಸ್ಟ್ ವಾಂಟೆಡ್ ಉಗ್ರನಿಗೆ ಪಾಕ್‌ನಲ್ಲೇ ನರಕ! ಲಷ್ಕರ್ ಸ್ಥಾಪಕ ಅಮೀರ್ ಹಮ್ಜಾಗೆ ಗುಂಡೇಟು, ಸ್ಥಿತಿ ಗಂಭೀರ!

Published : Apr 16, 2026, 02:38 PM IST
LeT Founder Terrorist Amir Hamza Shot in Lahore

ಸಾರಾಂಶ

ಪಾಕಿಸ್ತಾನದ ಲಹೋರ್‌ನಲ್ಲಿ, ಲಷ್ಕರ್-ಎ-ತೈಬಾ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆದಿದೆ. ತೀವ್ರ ಗಾಯಗೊಂಡಿರುವ ಈ ಜಾಗತಿಕ ಭಯೋತ್ಪಾದಕ, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪಾಕಿಸ್ತಾನದಲ್ಲಿ ಆಶ್ರಯ ಪಡೆದ ಉಗ್ರರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.

ಲಹೋರ್: ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಲಷ್ಕರ್-ಎ-ತೈಬಾ (LeT) ಉಗ್ರಗಾಮಿ ಸಂಘಟನೆಯ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಪಾಕಿಸ್ತಾನದ ಲಹೋರ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಹಮ್ಜಾ ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ವರದಿಯಾಗಿದೆ.

ಘಟನೆಯ ವಿವರ:

ಲಹೋರ್‌ನ ಹಮ್ದರ್ದ್ ಚೌಕ್‌ನಲ್ಲಿರುವ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ಈ ಘಟನೆ ನಡೆದಿದೆ. ಹಮ್ಜಾ ಚಲಿಸುತ್ತಿದ್ದ ವಾಹನದ ಮೇಲೆ ಅಪರಿಚಿತ ಗನ್‌ಮ್ಯಾನ್‌ಗಳು ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ಹಮ್ಜಾನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಹೋರ್ ಪೊಲೀಸರು ಈ ಬಗ್ಗೆ ಹೇಳಿಕೆ ನೀಡಿದ್ದು, ದಾಳಿ ನಡೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಯಾರಿದು ಅಮೀರ್ ಹಮ್ಜಾ?

ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್ ಜೊತೆಗೂಡಿ ಲಷ್ಕರ್-ಎ-ತೈಬಾ ಸಂಘಟನೆಯನ್ನು ಕಟ್ಟಿದವರಲ್ಲಿ ಅಮೀರ್ ಹಮ್ಜಾ ಕೂಡ ಒಬ್ಬ. ಈತನನ್ನು ಅಮೆರಿಕದ ಟ್ರೆಜರಿ ಇಲಾಖೆಯು 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿ ನಿರ್ಬಂಧಗಳನ್ನು ಹೇರಿತ್ತು. ಅಫಘಾನ್ ಮುಜಾಹಿದ್ದೀನ್‌ಗಳ ಕಾಲದಿಂದಲೂ ಸಕ್ರಿಯನಾಗಿದ್ದ ಹಮ್ಜಾ, ಲಷ್ಕರ್ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯನಾಗಿದ್ದ. ಹಮ್ಜಾ ಕೇವಲ ಶಸ್ತ್ರಾಸ್ತ್ರ ಹಿಡಿದ ಉಗ್ರನಲ್ಲದೆ, ಲಷ್ಕರ್‌ನ ಬೌದ್ಧಿಕ ಮತ್ತು ಹಣಕಾಸು ವಿಭಾಗದ ಪ್ರಮುಖನಾಗಿದ್ದ. ಸಂಘಟನೆಯ ಮುಖವಾಣಿ 'ಮಜಲ್ಲಾ ಅಲ್-ದವಾ'ದ ಸ್ಥಾಪಕ ಸಂಪಾದಕನಾಗಿದ್ದ ಈತ, ತನ್ನ ಲೇಖನಗಳು ಮತ್ತು ಉದ್ರೇಕಕಾರಿ ಭಾಷಣಗಳ ಮೂಲಕ ಯುವಕರನ್ನು ಉಗ್ರಗಾಮಿ ಜಾಲಕ್ಕೆ ಸೆಳೆಯುತ್ತಿದ್ದ. 2002 ರಲ್ಲಿ ಈತ ಬರೆದ 'ಖಾಫಿಲಾ ದಾವತ್ ಔರ್ ಶಹಾದತ್' ಎಂಬ ಪುಸ್ತಕವು ತೀವ್ರಗಾಮಿ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಬಳಸಲಾಗುತ್ತಿತ್ತು.

ಭಾರತದ ವಿರುದ್ಧದ ಸಂಚು:

ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಾದಾಗ, ಹಮ್ಜಾ ತನ್ನ ಲಷ್ಕರ್ ಸಂಬಂಧವನ್ನು ಮರೆಮಾಚಲು 'ಜೈಶ್-ಎ-ಮಂಕಾಫಾ' ಎಂಬ ಹೊಸ ಬಣವನ್ನು ರಚಿಸಿಕೊಂಡಿದ್ದ. ಈ ಬಣವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ವರದಿಗಳು ತಿಳಿಸಿವೆ. ನಿಧಿ ಸಂಗ್ರಹಣೆ, ನೇಮಕಾತಿ ಮತ್ತು ಜೈಲಿನಲ್ಲಿರುವ ಉಗ್ರರ ಬಿಡುಗಡೆಗಾಗಿ ಸಂಧಾನ ನಡೆಸುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದನು.

ಅಪರಿಚಿತ ದುಷ್ಕರ್ಮಿಗಳ ಭಯ:

ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾಗಿರುವ ಉಗ್ರರು ಒಬ್ಬೊಬ್ಬರಾಗಿಯೇ ಸಾಯುತ್ತಿದ್ದಾರೆ. 'ಅಪರಿಚಿತ ದುಷ್ಕರ್ಮಿಗಳ' ದಾಳಿಗೆ ಸಿಲುಕಿ ಲಷ್ಕರ್ ಮತ್ತು ಜೈಶ್-ಎ-ಮೊಹಮ್ಮದ್‌ನ ಹಲವು ಪ್ರಮುಖ ಕಮಾಂಡರ್‌ಗಳು ಹತರಾಗಿದ್ದಾರೆ. ಈಗ ಅಮೀರ್ ಹಮ್ಜಾ ಮೇಲೆ ನಡೆದಿರುವ ದಾಳಿಯು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರಲ್ಲಿ ತಲ್ಲಣ ಮೂಡಿಸಿದೆ. ಇನ್ನು ಹಮ್ಜಾ ಮೇಲೆ ಕಳೆದ ವರ್ಷವೂ ಗುಂಡಿನ ದಾಳಿ ನಡೆದಿತ್ತು. ಆಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದನು. ಇದೀಗ ಅಪರಿಚಿತರ ಗುಂಡಿನ ದಾಳಿ ಯಶಸ್ವಿಯಾಗಿದ್ದು, ಗುಂಡಿನ ಪೆಟ್ಟು ತಿಂದಿರುವ ಹಮ್ಜಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕದ ದಾಳಿ ಬೆದರಿಕೆ: ಫ್ಲೈಟ್ ಹತ್ತಿ ಬಂದಿದ್ದ ಇರಾನ್ ನಿಯೋಗ ಬಸ್‌ನಲ್ಲಿ ವಾಪಸ್!
ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ!