* ಹಾಲಿ ರಷ್ಯಾದಲ್ಲಿ ವಾಸಿಸುತ್ತಿರುವ ಮಾಜಿ ಅಧ್ಯಕ್ಷ ವಿಕ್ಟರ್
* ತನ್ನ ಕೈಗೊಂಬೆ ವಿಕ್ಟರ್‌ಗೆ ಉಕ್ರೇನ್ ಅಧ್ಯಕ್ಷ ಗಾದಿ ನೀಡಲು ರಷ್ಯಾ ಪ್ಲ್ಯಾನ್
ಕೀವ್(ಮಾ.03): ಉಕ್ರೇನ್ ವಶಕ್ಕೆ ತೀವ್ರ ಯತ್ನ ನಡೆಸುತ್ತಿರುವ ರಷ್ಯಾ, ಈ ಯತ್ನ ಫಲ ಕೊಟ್ಟಕೂಡಲೇ ತನ್ನ ಕೈಗೊಂಬೆಯಾಗಿರುವ ವಿಕ್ಟರ್ ಯನುಕೋವಿಚ್ ಅವರನ್ನೇ ಉಕ್ರೇನ್‌ನ ಹೊಸ ಅಧ್ಯಕ್ಷರಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಮೂಲಕ ಉಕ್ರೇನ್ ದೇಶವು, ನ್ಯಾಟೋ ಒಕ್ಕೂಟದತ್ತ ವಾಲದೇ ತನ್ನ ಹಿಡಿತದಲ್ಲೇ ಇರುವಂತೆ ನೋಡಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ವಿಕ್ಟರ್, ಪುಟಿನ್ ಅವರ ಬೆಂಬಲಿಗರಾಗಿದ್ದು, 2006-2007ರ ಅವಧಿಗೆ ಉಕ್ರೇನ್ ಪ್ರಧಾನಿಯಾಗಿ, 2010-2014ರವರೆಗೆ ಉಕ್ರೇನ್ ಅಧ್ಯಕ್ಷರಾಗಿದ್ದರು. ಆದರೆ ಭಾರೀ ಭ್ರಷ್ಟಾಚಾರ ಮತ್ತು ಜನರ ವಿರೋಧ ಕಟ್ಟಿಕೊಂಡು 2014ರಲ್ಲಿ ಹುದ್ದೆಯಿಂದ ಕಿತ್ತುಹಾಕಲ್ಪಟ್ಟಿದ್ದರು. ಅಧ್ಯಕ್ಷರಾಗಿ ಇವರ ಆಯ್ಕೆಯ ವೇಳೆ ಭಾರೀ ಅಕ್ರಮ ನಡೆದಿದ್ದು, ಸ್ವತಃ ರಷ್ಯ ಅಧ್ಯಕ್ಷ ಪುಟಿನ್ ಇದರ ವಿಕ್ಟರ್ ಆಯ್ಕೆ ಖಚಿತಪಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ 2014ರಲ್ಲಿ ಅಧಿಕಾರದಿಂದ ಕಿತ್ತುಹಾಕಲ್ಪಟ್ಟವಿಕ್ಟರ್ ರಷ್ಯಾಕ್ಕೆ ಪರಾರಿಯಾಗಿ ಅಲ್ಲೇ ವಾಸಿಸುತ್ತಿದ್ದಾರೆ.
ಹೀಗಾಗಿ, ಇದೀಗ ಉಕ್ರೇನ್ ತಮ್ಮ ಕೈವಶವಾಗುತ್ತಲೇ, ಮರಳಿ ವಿಕ್ಟರ್ ಅವರನ್ನು ಉಕ್ರೇನ್‌ಗೆ ಕರೆತಂದು ಅವರನ್ನೇ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲು ರಷ್ಯಾ ಯೋಜನೆ ರೂಪಿಸಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಉಕ್ರೇನ್‌ನ ‘ಉಕ್ರೇನ್‌ಸ್ಕಾ ಪ್ರಾವ್ಡಾ’ ಪತ್ರಿಕೆ ವರದಿ ಮಾಡಿದೆ.
ಉಕ್ರೇನ್ ಪರ ಹೋರಾಡಲು ವಿದೇಶಿಯರಿಗೂ ಅವಕಾಶ!
ತಮ್ಮ ದೇಶದ ಪರವಾಗಿ ಯಾರಾದರೂ ವಿದೇಶಿಯರು ಸಿದ್ಧವಾಗಿದ್ದರೆ ಅವರಿಗೆ ಮುಕ್ತ ಅವಕಾಶ ನೀಡುವುದಾಗಿ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಘೋಷಿಸಿದ್ದಾರೆ. ಈಗಾಗಲೇ ಸಾಮಾನ್ಯ ಪ್ರಜೆಗಳು ಮತ್ತು ಕೈದಿಗಳಿಗೆ ನೀಡಿದ್ದ ಅವಕಾಶವನ್ನು ಇದೀಗ ವಿದೇಶಿ ಪ್ರಜೆಗಳಿಗೂ ವಿಸ್ತರಿಸಲಾಗಿದೆ. ಈ ನಿಯಮಕ್ಕೆ ಮಂಗಳವಾರ ಅವರು ಸಹಿ ಹಾಕಿದ್ದು, ಇದು ಯುದ್ಧ ನಡೆಯುವವರೆಗೂ ಮುಂದುವರೆಯುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಹೀಗೆ ಬರುವವರಿಗೆ ದೇಶ ಪ್ರವೇಶ ಪಡೆಯಲು ಇದ್ದ ವೀಸಾ ನಿಯಮವನ್ನೇ ರದ್ದು ಮಾಡಲಾಗಿದೆ.
ಉಕ್ರೇನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳ ಒತ್ತೆ
ತಮ್ಮ ಮೇಲೆ ಉಕ್ರೇನಿ ಯೋಧರು ದಾಳಿ ನಡೆಸುತ್ತಿದ್ದಾರೆ. ತಮಗೆ ಉಕ್ರೇನ್ ಗಡಿಯಿಂದ ತೆರಳಲು ಬಿಡುತ್ತಿಲ್ಲ ಎಂಬ ಹಲವು ಭಾರತೀಯ ವಿದ್ಯಾರ್ಥಿಗಳ ದೂರಿನ ಬೆನ್ನಲ್ಲೇ, ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಸೇನೆ ಒತ್ತೆಯಾಗಿ ಹಿಡಿದುಕೊಟ್ಟುಕೊಂಡಿದೆ ಎಂದು ರಷ್ಯಾ ಸೇನೆ ಗಂಭೀರ ಆರೋಪ ಮಾಡಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ರಕ್ಷಣಾ ಸಚಿವಾಲಯ, ‘ನಮ್ಮ ದಾಖಲೆಗಳ ಅನ್ವಯ ಖಾರ್ಕಿವ್‌ನಿಂದ ನೆರೆಯ ದೇಶಕ್ಕೆ ತೆರಳಲು ಸಿದ್ಧವಾಗಿದ್ದ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಅಧಿಕಾರಿಗಳು ಬಲವಂತವಾಗಿ ತಡೆದುಹಿಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದೆ.
ಜೊತೆಗೆ ‘ರಷ್ಯಾ ಸಶಸ್ತ್ರ ಪಡೆಗಳು, ಎಲ್ಲಾ ಭಾರತೀಯರ ಸುರಕ್ಷಿತ ತೆರವಿಗೆ ಸಿದ್ಧವಿದೆ. ಭಾರತದ ಸರ್ಕಾರದ ಕೋರಿಕೆಯಂತೆ ಅವರ ಸೇನಾ ಮತ್ತು ಇತರೆ ವಿಮಾನಗಳ ಮೂಲಕ ಅವರನ್ನು ರಷ್ಯಾ ನೆಲೆಗಳಿಂದ ತವರಿಗೆ ಕಳುಹಿಕೊಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದೆ.
ಉಕ್ರೇನ್ ತಿರುಗೇಟು
ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಸೇನೆ ಒತ್ತೆಯಾಗಿರಿಸಿಕೊಂಡಿದೆ ಎಂದು ರಷ್ಯಾ ಆರೋಪ ಮಾಡಿದ ಬೆನ್ನಲ್ಲೇ ಉಕ್ರೇನ್ ತಿರುಗೇಟು ನೀಡಿದೆ. ‘ಖಾರ್ಕೀವ್ ಮತ್ತು ಸುಮಿಯಲ್ಲಿ ವಿದ್ಯಾರ್ಥಿಗಳನ್ನು ರಷ್ಯಾಸೇನೆಯೇ ತನ್ನ ದಾಳಿ ಮೂಲಕ ಒತ್ತೆಯಾಗಿರಿಸಿಕೊಂಡಿದೆ. ಹೀಗಾಗಿ ಮಾನವೀಯ ಕಾರಿಡಾರ್ ಅನ್ನು ರಷ್ಯಾನೇ ತೆರೆಯಬೇಕು ಎಂದು ರಷ್ಯಾಗೆ ಆಗ್ರಹಿಸಿ’ ಎಂದು ಭಾರತ, ಚೀನಾ, ಪಾಕಿಸ್ತಾನ ಮತ್ತು ಇತರ ದೇಶಗಳಿಗೆ ಮನವಿ ಮಾಡಿದೆ.