
ಸೋಲ್ (ಸೆ.25) : ಕೊರೋನಾ ತಡೆಗೆ ಲಾಕ್‌ಡೌನ್, ವೈರಸ್ ಪರೀಕ್ಷೆ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯದಂತಹ ನಿಯಮಗಳನ್ನು ವಿವಿಧ ದೇಶಗಳು ಜಾರಿಗೆ ತಂದಿದ್ದರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ವಿಕೃತ ನೀತಿಯೊಂದನ್ನು ಅನುಷ್ಠಾನಗೊಳಿಸಿದ್ದಾನೆ. ಕೊರೋನಾ ಬರಬಹುದು ಎಂಬ ಭೀತಿಯಿಂದ ಉತ್ತರ ಕೊರಿಯಾ ಪ್ರವೇಶಿಸಲು ಯತ್ನಿಸುವವರನ್ನು ಗುಂಡಿಟ್ಟು ಕೊಲ್ಲುವ ನೀತಿಯನ್ನು ಜಾರಿಗೆ ತಂದಿದ್ದಾನೆ.
ಇದರ ಭಾಗವಾಗಿ, ದಕ್ಷಿಣ ಕೊರಿಯಾದ ಅಧಿಕಾರಿಯೊಬ್ಬನನ್ನು ಗುಂಡಿಟ್ಟು ಕೊಲ್ಲಿಸಿ, ಪೆಟ್ರೋಲ್ ಹಾಕಿ ಸುಟ್ಟು ಹಾಕಿಸಿದ್ದಾನೆ. ಈ ಬೆಳವಣಿಗೆ, ಮೊದಲೇ ಸಂಘರ್ಷವಿರುವ ಉತ್ತರ- ದಕ್ಷಿಣ ಕೊರಿಯಾಗಳ ನಡುವೆ ಮತ್ತಷ್ಟುವೈರತ್ವಕ್ಕೆ ಕಾರಣವಾಗಿದೆ.
ಅಂಕಲ್ ತಲೆ ಕತ್ತರಿಸಿ ಪ್ರದರ್ಶನಕ್ಕಿಟ್ಟಿದ್ದ ಕಿಮ್
ದಕ್ಷಿಣ ಕೊರಿಯಾದ ಅಧಿಕಾರಿಯೊಬ್ಬರು ಮೀನುಗಾರಿಕಾ ಪ್ರದೇಶದ ತಪಾಸಣೆಯಲ್ಲಿದ್ದಾಗ ಸೋಮವಾರ ನಾಪತ್ತೆಯಾಗಿದ್ದರು. ಎಷ್ಟೇ ಶೋಧಿಸಿದರೂ ಸಿಕ್ಕಿರಲಿಲ್ಲ. ಅವರ ಶವ ಇದೀಗ ಗುಂಡೇಟು ತಿಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ನೀರಿನಲ್ಲಿ ಪತ್ತೆಯಾಗಿದೆ. ಈ ಅಧಿಕಾರಿ ಉತ್ತರ ಕೊರಿಯಾಕ್ಕೆ ವಲಸೆ ಹೋಗಲು ಯತ್ನಿಸಿದ್ದ. ಆತನಿಂದ ಕೊರೋನಾ ಬರಬಹುದು ಎಂಬ ಕಾರಣಕ್ಕೆ ಆತನನ್ನು ಕೊಂದು ಎಸೆಯಲಾಗಿದೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಏಕೈಕ ಸ್ನೇಹಿತ ರಾಷ್ಟ್ರ ಚೀನಾ ವಿರುದ್ಧವೂ ಕಿಮ್ ವಿಕೃತಿ
ಉತ್ತರ ಕೊರಿಯಾದಲ್ಲಿ ಯಾರಿಗಾದರೂ ಕೊರೋನಾ ಬಂದರೆ ಅವರನ್ನು ಗುಂಡಿಟ್ಟು ಸಾಯಿಸಿ, ಎಂದು ಈ ಹಿಂದೆ ಆದೇಶ ಹೊರಡಿಸಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ಏಕೈಕ ಸ್ನೇಹಿತ ರಾಷ್ಟ್ರವಾಗಿರುವ ಚೀನಾದಿಂದ ಯಾರಾದರೂ ಗಡಿ ದಾಟಿ ಬರಲು ಯತ್ನಿಸಿದರೆ ಅವರನ್ನೂ ಗುಂಡಿಟ್ಟು ಸಾಯಿಸಿ ಎಂದೂ ಈ ಹಿಂದೆ ಆದೇಶಿಸಿದ್ದ.
ಉತ್ತರ ಕೊರಿಯಾ ತನಗೆ ಅಗತ್ಯವಿರುವ ಬಹುತೇಕ ವಸ್ತುಗಳಿಗೆ ನೆರೆ ರಾಷ್ಟ್ರವಾದ ಚೀನಾವನ್ನೇ ಅವಲಂಬಿಸಿದೆ. ಮತ್ತು ಚೀನಾದ ಜೊತೆಗೆ ಮಾತ್ರ ಸ್ನೇಹ ಹೊಂದಿದೆ. ಆದರೆ, ಚೀನಾದಿಂದ ವೈರಸ್ ಪ್ರವೇಶಿಸಬಹುದು ಎಂಬ ಭೀತಿಯಿಂದ ಕಳೆದ ಜನವರಿ ತಿಂಗಳಲ್ಲೇ ಚೀನಾದ ಗಡಿಯನ್ನು ಕಿಮ್ ಜಾಂಗ್ ಮುಚ್ಚಿದ್ದ. ಅಲ್ಲಿ 2 ಕಿ.ಮೀ.ನಷ್ಟುಬಫರ್ ವಲಯ ಸೃಷ್ಟಿಸಿದ್ದು, ಅದನ್ನು ದಾಟಿ ಯಾರಾದರೂ ಬಂದರೆ ಗುಂಡಿಟ್ಟು ಸಾಯಿಸಿ ಎಂದು ಆದೇಶ ಹೊರಡಿಸಿದ್ದ. ‘ಕೊರೋನಾ ಪಹರೆ’ಗೆಂದೇ ಅಲ್ಲಿ ‘ಉತ್ತರ ಕೊರಿಯಾ ವಿಶೇಷ ಕಾರ್ಯಾಚರಣೆ ಪಡೆ’ (ಎಸ್‌ಒಎಫ್) ನಿಯೋಜಿಸಿದ್ದಾನೆ ಎಂದು ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಸೇನೆಯ ಮುಖ್ಯಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದರು.
ಚೀನಾದಿಂದ ಉತ್ತರ ಕೊರಿಯಾಕ್ಕೆ ಮಾಡಿಕೊಳ್ಳುತ್ತಿದ್ದ ಅಗತ್ಯ ವಸ್ತುಗಳ ಆಮದು ಶೇ.85ರಷ್ಟುಕುಸಿದಿತ್ತು. ಇದರಿಂದ ಉತ್ತರ ಕೊರಿಯಾದಲ್ಲಿ ಆಹಾರದ ತೀವ್ರ ಕೊರತೆ ಎದುರಾಗಿತ್ತು. ಅದಕ್ಕೆ ಎಲ್ಲರೂ ನಾಯಿಯ ಮಾಂಸವನ್ನು ಅವಲಂಬಿಸಬೇಕಾದ ಪರಿಸ್ಥಿತಿಯೂ ಸೃಷ್ಟಿಯಾಗಿತ್ತು. ಹೀಗಾಗಿ ಕಿಮ್ ಜಾಂಗ್ ಉನ್, ಮನೆಯಲ್ಲಿ ಸಾಕಿದ ನಾಯಿಗಳನ್ನು ನೀಡುವಂತೆ ನಾಗರಿಕರಿಗೆ ಸೂಚಿಸಿದ್ದ.
ಸರ್ವಾಧಿಕಾರಿ ನಾಡಲ್ಲಿ ಮಕ್ಕಳು ಬ್ಲೂ ಫಿಲ್ಮ್ ನೋಡಿದರೆ ತಂದೆ ತಾಯಿಗೆ ಜೈಲು
ಉತ್ತರ ಕೊರಿಯಾದಲ್ಲಿ ಸಾಮಾನ್ಯ ಜನರು ಜಾನುವಾರು ಸಾಕಿದರೆ, ಶ್ರೀಮಂತರು ಮಾತ್ರ ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕತೆ ನೆಲಕಚ್ಚಿದ್ದು, ಜನರು ಆಹಾರವಿಲ್ಲದೇ ಹಸಿವಿನಿಂದ ಬಳಲುತ್ತಿದ್ದಾರೆ. ಉತ್ತರ ಕೊರಿಯಾದಲ್ಲಿ ನಾಯಿ ಮಾಂಸವನ್ನು ಕೂಡ ಮಾಂಸಕ್ಕಾಗಿ ಬಳಕೆ ಮಾಡುವ ಕಾರಣ, ಕಿಮ್ ಜಾಂಗ್ ಉನ್ ಕಣ್ಣು ಈಗ ಶ್ರೀಮಂತರ ಮನೆಯ ಸಾಕು ನಾಯಿಯ ಮೇಲೆ ಬಿದ್ದಿದೆ. ಮನೆಯಲ್ಲಿ ನಾಯಿಯನ್ನು ಸಾಕುವುದು ಅಪರಾಧ ಮತ್ತು ಬಂಡವಾಳಶಾಹಿತನದ ಸಂಕೇತ. ನಾಯಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಕಿಮ್ ಜಾಂಗ್ ಆದೇಶ ಹೊರಡಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ