ಉತ್ತರ ಕೊರಿಯಾದ ಗನ್‌, ಬಾಂಬ್‌ಗಳ ಹೆಸರನ್ನು ನಿಮ್ಮ ಮಕ್ಕಳಿಗೆ ಇಡಿ: ಕಿಮ್‌ ಜಾಂಗ್ ಹೊಸ ಅದೇಶ!

By Santosh NaikFirst Published Dec 5, 2022, 1:14 PM IST
Highlights

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತನ್ನ ದೇಶದ ನಾಗರಿಕರಿಗೆ ಹೊಸ ಆದೇಶ ಜಾರಿ ಮಾಡಿದ್ದಾನೆ. ದೇಶದ ಜನರಲ್ಲಿ ರಾಷ್ಟ್ರೀಯತೆ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಉತ್ತರ ಕೊರಿಯಾದ ಗನ್‌ ಹಾಗೂ ಬಾಂಬ್‌ಗಳಿಗೆ ಇಟ್ಟಿರುವ ಹೆಸರನ್ನು ಪ್ರಜೆಗಳು ತಮ್ಮ ಹೆಸರನ್ನಾಗಿ ಬದಲಾಯಿಸಿಕೊಳ್ಳಬೇಕು. ಹುಟ್ಟುವ ಮಗುವಿಗೂ ಇದೇ ರೀತಿಯ ಹೆಸರಿಡಬೇಕು ಎಂದು ಆಜ್ಞೆ ಮಾಡಿದ್ದಾನೆ.
 

ಸಿಯೋಲ್‌ (ಡಿ.5): ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯೂಕ್ಲಿಯರ್‌ ದೇಶವನ್ನಾಗಿ ಉತ್ತರಕೊರಿಯಾವನ್ನು ರೂಪಿಸಬೇಕು ಎನ್ನುವ ಗುರಿಯಲ್ಲಿರುವ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಅದೇ ಥೀಮ್‌ನಲ್ಲಿ ತನ್ನ ಜನರಿಗೆ ಹೆಸರನ್ನು ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಸ್ತುತ ಉತ್ತರ ಕೊರಿಯಾದ ಜನರ ಹೆಸರುಗಳು ತುಂಬಾ ಮೃದು ಸ್ವಭಾವದ್ದಾಗಿದೆ. ಹಾಗಾಗಿ ದೇಶದ ವಯಸ್ಕರು ಮತ್ತು ಮಕ್ಕಳು ತಮ್ಮ ಹೆಸರನ್ನು ಕ್ರಾಂತಿಕಾರಿ ರೀತಿಯ ಹೆಸರಿಗೆ ಪರಿವರ್ತನೆ ಮಾಡಿಕೊಳ್ಳಬೇಕು.  ದೇಶದ ಪರವಾಗಿ ನಿಷ್ಠೆ, ಬಾಂಬ್‌ ಅಥವಾ ಗನ್‌ ಎನ್ನುವ ಅರ್ಥ ನೀಡುವ ಇಲ್ಲವೇ ಉತ್ತರ ಕೊರಿಯಾದ ಶಸ್ತ್ರಾಸ್ತ್ರಗಳಿಗೆ ನೀಡಿರುವ ಹೆಸರುಗಳನ್ನು ಈಗಷ್ಟೇ ಹುಟ್ಟಿರುವ ಮಕ್ಕಳಿಗೆ ಇಡಬೇಕು ಎಂದು ಹೇಳಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಈ ಅದೇಶ ನೀಡಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸಮಾಜವಾದಿ ವಿರೋಧಿಯಾಗಿರುವ ಹೆಸರುಗಳನ್ನು ಆದಷ್ಟು ಶೀಘ್ರವಾಗಿ ಬದಲಾಯಿಸಬೇಕು ಎಂದು ಪ್ಯೋಂಗ್ಯಾಂಗ್‌ ಹೇಳಿದೆ ಎನ್ನುವುದು ವರದಿಯಾಗಿದೆ.ದೇಶದೊಳಗಿನ ಮೂಲಗಳನ್ನು ಉಲ್ಲೇಖಿಸಿ ರೇಡಿಯೊ ಫ್ರೀ ಏಷ್ಯಾ ಈ ವರದಿ ಮಾಡಿದೆ.

ಮೃದುವಾದ ಹೆಸರುಗಳನ್ನು ಹೊಂದಿರುವ ನಾಗರಿಕರು - ಉದಾಹರಣೆಗೆ ಎ ರಿ (ಪ್ರೀತಿಪಾತ್ರರು), ಸೋ ರಾ  ಮತ್ತು ಸು ಮಿ (ಸೂಪರ್ ಬ್ಯೂಟಿ) ಎಂದು ಹೆಸರಿರುವ ವ್ಯಕ್ತಿಗಳು ಹೆಚ್ಚು ಸೈದ್ದಾಂತಿಕವಾದ ಪದಗಳನ್ನು ತಮ್ಮ ಹೆಸರನ್ನಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇನ್ನು ತಮ್ಮ ಮಕ್ಕಳಿಗೆ, ಚುಂಗ್ ಸಿಮ್ (ನಿಷ್ಠೆ), ಚೋಂಗ್ ಇಲ್ (ಗನ್), ಪೋಕ್ ಇಲ್ (ಬಾಂಬ್) ಅಥವಾ ಉಯಿ ಸಾಂಗ್ (ಉಪಗ್ರಹ) ಮುಂತಾದ ಹೆಸರುಗಳನ್ನು ನೀಡುವಂತೆ ಹೇಳಲಾಗಿದೆ.

ಹೆಸರು ಬದಲಾವಣೆಯ ಆಜ್ಞೆಯನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕೇ ಇಲ್ಲವೇ ಎನ್ನುವುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಆದರೆ, ವರದಿಗಳ ಪ್ರಕಾರ, ಕಳೆದ ಅಕ್ಟೋಬರ್‌ನಿಂದಲೂ ಈ ಕುರಿತಾಗಿ ಜನರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಹೆಸರಿನ ಕೊನೆಯನ್ನು ಹೊಸ ಮಾದರಿಯ ಹೆಸರಿನೊಂದಿಗೆ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಇನ್ನು ತಮ್ಮ ಹೆಸರಿನ ಕೊನೆಯಲ್ಲಿ ಯಾವುದೇ ರೀತಿಯ ವಿಶೇಷಣಗಳನ್ನು ಹೊಂದಿಲ್ಲದ ವ್ಯಕ್ತಿಗಳು ಈ ವರ್ಷದ ಒಳಗಾಗಿ ರಾಜಕೀಯ ಅರ್ಥವಿರುವ ಅಥವಾ ಕ್ರಾಂತಿಕಾರಿ ಮಾನದಂಡಗಳನ್ನು ಹೊಂದಿರುವ ಹೆಸರನ್ನು ಸೇರಿಸಿಕೊಳ್ಳಬೇಕು ಎಂದು ಅನಾಮಧೇಯ ಮೂಲವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಕಿಮ್‌ ಜಾಂಗ್‌ ಉನ್‌ 'ಪ್ಲೆಶರ್‌ ಸ್ಕ್ವಾಡ್‌', ವೇಶ್ಯಾವಾಟಿಕೆ ಕೂಪಕ್ಕೆ ಶಾಲಾ ಬಾಲಕಿಯರು!

ಇದಕ್ಕೆ ಒಪ್ಪದ ನಾಗರೀಕರಿಗೆ ಶಿಕ್ಷೆ ವಿಧಿಸುವ ಪ್ರಸ್ತಾಪ ಕೂಡ ಇದರಲ್ಲಿದೆ. ರಾಜಕೀಯ ಅರ್ಥದ ಹೆಸರುಗಳನ್ನು ಹೊಂದಿರದ ವ್ಯಕ್ತಿಗಳಿಗೆ ಅಧಿಕಾರಿಗಳು ಯಾವ ಕ್ಷಣದಲ್ಲಿ ಬೇಕಾದರೂ ದಂಡ ವಿಧಿಸಬಹುದು. ಇನ್ನೊಂದೆಡೆ ಉತ್ತರ ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ಹೊರಜಗತ್ತಿಗೆ ಹೆಚ್ಚಾಗಿ ತೆರೆದುಕೊಂಡಿದೆ. ನಾಗರಿಕರು ಸಾಂಪ್ರದಾಯಿಕವಾಗಿ ಉತ್ತರ ಕೊರಿಯಾದ ಹೆಸರುಗಳಿಗಿಂತ ಚೈನೀಸ್, ಜಪಾನೀಸ್ ಮತ್ತು ದಕ್ಷಿಣ ಕೊರಿಯಾದ ಹೆಸರುಗಳ ಮಿಶ್ರಣವನ್ನು ಬಳಸುತ್ತಾರೆ. ಆದರೆ ಪಶ್ಚಿಮದೊಂದಿಗಿನ ಉತ್ತರ ಕೊರಿಯಾದ ಸಂಬಂಧಗಳು ಉದ್ವಿಗ್ನತೆಯಲ್ಲಿ ಇರುವ ಕಾರಣ, ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಯ ನಕಲಾಗಿರುವ ಹೆಸರುಗಳನ್ನು ಹೊಂದುವಂತಿಲ್ಲ ಎಂದು ತಿಳಿಸಿದೆ.

ಕಳೆಗುಂದಿದ ಮುಖ: ಕಿಮ್‌ಜಾಂಗ್‌ ಆರೋಗ್ಯದ ಬಗ್ಗೆ ಆತಂಕ!

ಈ ನಡುವೆ ಕಿಮ್ ಜಾಂಗ್ ಉನ್ ವರ್ಷಾಂತ್ಯದ ಮೊದಲು ಪ್ರಮುಖ ರಾಜಕೀಯ ಸಮ್ಮೇಳನಕ್ಕೆ ಕರೆ ನೀಡಿದ್ದಾರೆ, ಅದರಲ್ಲಿ ಅವರು ತಮ್ಮ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ವಿಸ್ತರಣೆಯ ಬಗ್ಗೆ ಹಾಗೂ ವಾಷಿಂಗ್ಟನ್ ಮತ್ತು ಸಿಯೋಲ್‌ ಜೊತೆಗಿನ ಬಿಕ್ಕಟ್ಟಿನ ಮಾತುಕತೆಯ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಈ ವರ್ಷ ಉತ್ತರ ಕೊರಿಯಾ ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದು, ಅಮೆರಿಕದ ಭೂಭಾಗವನ್ನು ತಲುಪುವಷ್ಟು ಸಾಮರ್ಥ್ಯದ ರೇಂಜ್‌ ಅನ್ನು ಹೊಂದಿದೆ.

click me!