ಕನ್ನಡದ ಕಂಪು ಹೊತ್ತ ಫಿಲಡೆಲ್ಫಿಯಾ ರಸ್ತೆ, ಅದ್ಧೂರಿಯಾಗಿ ಅಕ್ಕ ರಜತ ಮಹೋತ್ಸವಕ್ಕೆ ಚಾಲನೆ

Published : Sep 05, 2026, 07:34 PM IST
Akka kannada Sammelana Philadelphia US

ಸಾರಾಂಶ

ಅಮೆರಿಕದಲ್ಲಿ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಈ ಬಾರಿ ಹಲುವ ವಿಶೇಷತೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ವೀರಗಾಸೆ ಸೇರಿದಂತೆ ಹಲವು ಕನ್ನಡದ ಕಲೆಗಗಳ ಮೂಲಕ ಅದ್ದೂರಿ ಮೆರವಣಿಗೆ ಸಾಗಿತ್ತು.

ಫಿಲಡೆಲ್ಫಿಯಾ (ಫೆ.05): ಅಮೆರಿಕದ ನೆಲದಲ್ಲಿ ಕನ್ನಡದ ಕಂಪು ಮತ್ತೊಮ್ಮೆ ಪಸರಿಸಿತು. ಕನ್ನಡಿಗರ ಬಹು ನಿರೀಕ್ಷಿತ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಫಿಲಡೆಲ್ಫಿಯಾದ ಪ್ರಮುಖ ರಸ್ತೆಗಳಲ್ಲಿ ನಡೆದ ಅದ್ದೂರಿ ಮೆರವಣಿಗೆಯೊಂದಿಗೆ ಅಕ್ಕ ಕನ್ನಡ ಸಮ್ಮೇಳನ ಆರಂಭಗೊಂಡಿತು. ಕನ್ನಡದ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಒಗ್ಗಟ್ಟನ್ನು ಬಿಂಬಿಸಿದ ಮೆರವಣಿಗೆ, ವಿದೇಶದ ನೆಲದಲ್ಲೂ ಕನ್ನಡದ ಜೀವಂತಿಕೆಯನ್ನು ಸಾರಿತು.

ಹಲವು ಗಣ್ಯರು ಭಾಗಿ

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕ್ಷೇತ್ರದ ಕೃಷ್ಣೇಗೌಡ, ಬಿ. ಸುರೇಶ, ಧರ್ಮೇಂದ್ರ, ಸಾಯಿ ಗೋಲ್ಡ್ ಪ್ಯಾಲೇಸ್ ಶರವಣ ಸೇರಿದಂತೆ ಹಲವು ಗಣ್ಯರು ಕನ್ನಡಿಗರ ಸಂಭ್ರಮಕ್ಕೆ ಸಾಥ್ ನೀಡಿದರು.

ಅಮೆರಿಕದ ವಿವಿಧ ರಾಜ್ಯಗಳು ಹಾಗೂ ನಗರಗಳ ಕನ್ನಡ ಕೂಟಗಳಿಗೆ ಸೇರಿದ ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಿಗಳು, ಕುಟುಂಬ ಸಮೇತ ಆಗಮಿಸಿದ ಕನ್ನಡಿಗರು, ಮಕ್ಕಳು ಹಾಗೂ ಯುವಕರು ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ಕನ್ನಡದ ಬಾವುಟಗಳು, ಘೋಷಣೆಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ವೀರಗಾಸೆಯ ವೈಭವ

ಮೆರವಣಿಗೆಯಲ್ಲಿ ವೀರಗಾಸೆ ಕಲಾವಿದರ ನರ್ತನ ವಿಶೇಷ ಆಕರ್ಷಣೆಯಾಗಿತ್ತು. ವೀರಗಾಸೆಯ ಸಾಂಪ್ರದಾಯಿಕ ವೇಷಭೂಷಣ, ಹೆಜ್ಜೆ ಹಾಗೂ ನೃತ್ಯದ ಮೂಲಕ ಕನ್ನಡದ ಜಾನಪದ ಸಂಸ್ಕೃತಿಯನ್ನು ಅಮೆರಿಕದ ನೆಲದಲ್ಲಿ ಅನಾವರಣಗೊಳಿಸಲಾಯಿತು. ಕಲಾವಿದರ ಪ್ರದರ್ಶನಕ್ಕೆ ಕನ್ನಡಿಗರು ಚಪ್ಪಾಳೆ, ಘೋಷಣೆಗಳ ಮೂಲಕ ಉತ್ತೇಜನ ನೀಡಿದರು.

ರೇಷ್ಮೆ ಸೀರೆಯಲ್ಲಿ ಕನ್ನಡದ ಬಣ್ಣ

ಮೆರವಣಿಗೆಯಲ್ಲಿ ಕನ್ನಡತಿಯರ ಉಪಸ್ಥಿತಿಯೂ ಗಮನ ಸೆಳೆಯಿತು. ವಿವಿಧ ಬಗೆಯ ರೇಷ್ಮೆ ಸೀರೆಗಳನ್ನುಟ್ಟು ಆಗಮಿಸಿದ್ದ ಮಹಿಳೆಯರು ಕನ್ನಡದ ಸಾಂಪ್ರದಾಯಿಕ ಸೊಬಗನ್ನು ಪ್ರದರ್ಶಿಸಿದರು. ಸಾಂಪ್ರದಾಯಿಕ ಉಡುಗೆ, ಕನ್ನಡದ ಬಾವುಟ ಹಾಗೂ ಆಭರಣಗಳೊಂದಿಗೆ ಪಾಲ್ಗೊಂಡ ಮಹಿಳೆಯರಿಂದ ಮೆರವಣಿಗೆಗೆ ಮತ್ತಷ್ಟು ಕಳೆ ಬಂದಿತ್ತು.

ವಿದೇಶದ ನೆಲದಲ್ಲಿ ನೆಲೆಸಿದ್ದರೂ ಭಾಷೆ ಮತ್ತು ಸಂಸ್ಕೃತಿಯ ನಂಟನ್ನು ಕಳೆದುಕೊಂಡಿಲ್ಲ ಎಂಬುದನ್ನು ಮೆರವಣಿಗೆ ಸಾರಿತು. ವಿವಿಧ ದೇಶ, ರಾಜ್ಯ ಹಾಗೂ ನಗರಗಳಿಂದ ಬಂದ ಕನ್ನಡಿಗರು ಒಂದೇ ವೇದಿಕೆಯಡಿ, ಒಂದೇ ಭಾಷೆಯ ಹೆಸರಿನಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ್ದು ಅಕ್ಕ ರಜತ ಮಹೋತ್ಸವದ ವಿಶೇಷತೆಯಾಗಿ ಕಂಡುಬಂತು. ಕನ್ನಡ ಕೇವಲ ಭಾಷೆಯಲ್ಲ; ಅದು ಭಾವನೆ, ಬದುಕಿನ ಬಂಧ ಮತ್ತು ಸಂಸ್ಕೃತಿಯ ಗುರುತು ಎಂಬ ಸಂದೇಶವನ್ನು ಹೊತ್ತು ಸಾಗಿದ ಈ ಮೆರವಣಿಗೆ, ಅಕ್ಕ ಸಮ್ಮೇಳನದ ರಜತ ಮಹೋತ್ಸವಕ್ಕೆ ಅದ್ದೂರಿ ಮುನ್ನುಡಿಯಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವಸಂಸ್ಥೆಯಲ್ಲಿ ಹೊಸ ವಿಶ್ವ ಭೂಪಟಕ್ಕೆ ಅಂಗೀಕಾರ! ಮ್ಯಾಪ್‌ನಲ್ಲಿ ಹಿಂದಿಗಿಂತ ದೊಡ್ಡದಾಗಿ ಕಾಣಲಿದೆ ಭಾರತ!
ಶನಿಯ ದಕ್ಷಿಣ ಧ್ರುವದಲ್ಲಿ ಮತ್ತೊಂದು ವಿಸ್ಮಯ: ಷಡ್ಭುಜಾಕೃತಿಯ ನಂತರ ಪತ್ತೆಯಾಯ್ತು 10 ಬದಿಗಳ 'ದಶಭುಜಾಕೃತಿ'!