ವಿಶ್ವಸಂಸ್ಥೆಯಲ್ಲಿ ಹೊಸ ವಿಶ್ವ ಭೂಪಟಕ್ಕೆ ಅಂಗೀಕಾರ! ಮ್ಯಾಪ್‌ನಲ್ಲಿ ಹಿಂದಿಗಿಂತ ದೊಡ್ಡದಾಗಿ ಕಾಣಲಿದೆ ಭಾರತ!

Published : Sep 05, 2026, 03:07 PM IST
Correction world map

ಸಾರಾಂಶ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 'ಈಕ್ವಲ್ ಅರ್ಥ್' ಎಂಬ ಹೊಸ ವಿಶ್ವ ನಕ್ಷೆಯನ್ನು ಬಿಡುಗಡೆ ಮಾಡಿದೆ. ಈ ನಕ್ಷೆಯಲ್ಲಿ ಆಫ್ರಿಕಾ ಖಂಡವು ದೊಡ್ಡದಾಗಿ ಮತ್ತು ಉತ್ತರ ಅಮೆರಿಕ ಹಾಗೂ ಯುರೋಪ್ ಚಿಕ್ಕದಾಗಿ ಕಾಣಿಸಲಿದ್ದು, ಖಂಡಗಳ ನೈಜ ಗಾತ್ರವನ್ನು ನಿಖರವಾಗಿ ತೋರಿಸುವ ಗುರಿ ಹೊಂದಿದೆ. ಅಮೆರಿಕ ವಿರೋಧ ಏಕೆ?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೊಸ ವಿಶ್ವ ಭೂಪಟ ಅಂಗೀಕಾರ ಮಾಡಿದ್ದು. ಹೊಸ ವಿಶ್ವ ಭೂಪಟದಲ್ಲಿ ಭಾರತ ಸೇರಿದಂತೆ ಆಫ್ರಿಕಾ ಹಿಂದಿನ ನಕ್ಷೆಗಿಂತ ದೊಡ್ಡದಾಗಿ ಕಾಣಿಲಿದೆ. ಉತ್ತರ ಅಮೆರಿಕ, ಯುರೋಪ್ ಸಣ್ಣದಾಗಿ ಕಾಣಿಸಲಿದೆ.

ಶುಕ್ರವಾರ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ಆದರೆ ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ.

ವಿಶ್ವ ಸಂಸ್ಥೆಯ ಹೊಸ ವಿಶ್ವ ಭೂಪಟ ನಿರ್ಣಯಕ್ಕೆ 164 ದೇಶಗಳು ಬೆಂಬಲ ನೀಡಿವೆ. ಆದರೆ ಅಮೆರಿಕ ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿರುದ್ಧವಾಗಿ ಮತ ಹಾಕಿದರೆ ಇನ್ನುಳಿದ ಆರು ದೇಶಗಳು ಮತದಾನದಿಂದ ದೂರ ಉಳಿದಿವೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಏನಿದು Equal Earth ವಿಶ್ವ ಭೂಪಟ?

ಈ ಹೊಸ ನಕ್ಷೆಯನ್ನು ‘ಈಕ್ವಲ್ ಅರ್ಥ್’ (Equal Earth) ಭೂಪಟ ಎಂದು ಕರೆಯಲಾಗುತ್ತದೆ. ವಿಶ್ವದ ನಕ್ಷೆಯಲ್ಲಿ ಖಂಡಗಳ ಗಾತ್ರವನ್ನು ಸಾಧ್ಯವಾದಷ್ಟು ನಿಖರವಾಗಿ ತೋರಿಸುವುದು ಇದರ ಉದ್ದೇಶವಾಗಿದೆ. ಸದ್ಯ ಹೆಚ್ಚು ಬಳಕೆಯಲ್ಲಿರುವ ‘ಮರ್ಕೇಟರ್ ಪ್ರೊಜೆಕ್ಷನ್’ ಬದಲಿಗೆ ಈ ಹೊಸ ಭೂಪಟ ಬಳಸುವಂತೆ ವಿಶ್ವಸಂಸ್ಥೆಯ ನಿರ್ಣಯದಲ್ಲಿ ಸದಸ್ಯ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ಮರ್ಕೇಟರ್ ಭೂಪಟ ಫ್ಲೆಮಿಷ್ ನಕ್ಷೆ ತಜ್ಞ ಗೆರಾರ್ಡಸ್ ಮರ್ಕೇಟರ್ 1569ರಲ್ಲಿ ಸಮುದ್ರಯಾನಕ್ಕೆ ಅನುಕೂಲವಾಗುವಂತೆ ರಚಿಸಿದ್ದರು. ಈ ನಿರ್ಣಯವನ್ನು ಪ್ರಸ್ತಾಪಿಸಿದ ಆಫ್ರಿಕಾದ ಟೋಗೋ ದೇಶ, ನಕ್ಷೆಗಳು ಜಗತ್ತಿನ ಬಗ್ಗೆ ಜನರ ಅರಿವಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಗೋದ ವಿದೇಶಾಂಗ ಸಚಿವ ರಾಬರ್ಟ್ ಡಸ್ಸಿ ಮಾತನಾಡಿ, ನಕ್ಷೆಗಳು ಶಿಕ್ಷಣಕ್ಕೆ ಮಾರ್ಗದರ್ಶನ ನೀಡುತ್ತವೆ, ಕಲ್ಪನೆಗೆ ಆಹಾರ ನೀಡುತ್ತವೆ ಮತ್ತು ಜಗತ್ತಿನ ಬಗ್ಗೆ ಜನರ ಸಾಮೂಹಿಕ ಅಭಿಪ್ರಾಯವನ್ನು ರೂಪಿಸುತ್ತವೆ. ನಕ್ಷೆಯಲ್ಲಿ ಭೂಮಿಯ ಗಾತ್ರವನ್ನು ತಪ್ಪಾಗಿ ತೋರಿಸಿದರೆ, ಆ ತಪ್ಪು ಕಲ್ಪನೆ ಹಲವು ತಲೆಮಾರುಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ನಿರ್ಣಯಕ್ಕೆ ಅಮೆರಿಕ ವಿರೋಧ ಯಾಕೆ?

ಹೊಸ ಭೂಪಟ ಅಂಗೀಕರಿಸುವ ವಿಶ್ವಸಂಸ್ಥೆಯ ನಿರ್ಧಾರವನ್ನು ಅಮೆರಿಕ ಟೀಕಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇನ್ನಷ್ಟು ಗಂಭೀರವಾದ, ತುರ್ತು ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಅಮೆರಿಕದ ಪ್ರತಿನಿಧಿ ಯರಿನಾ ಫೆರೆನ್ಸೆವಿಚ್ ಹೇಳಿದ್ದಾರೆ.

ನಿಜವಾದ ಸಮಸ್ಯೆಗಳತ್ತ ಗಮನ ಹರಿಸುವ ಬದಲು 16ನೇ ಶತಮಾನದ ಭೂಪಟ ಬಗ್ಗೆ ಚರ್ಚೆ ನಡೆಸುತ್ತಿರುವುದು ವಿಶ್ವಸಂಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಅವರು ಮತದಾನದ ಮೊದಲು ಹೇಳಿದ್ದಾರೆ.

ಮರ್ಕೇಟರ್ ಭೂಪಟ ಏಕೆ ಗಾತ್ರದ ವ್ಯತ್ಯಾಸ?

ಮರ್ಕೇಟರ್ ಭೂಪಟ ಪ್ರಮುಖ ಉದ್ದೇಶ ಭೂಭಾಗಗಳ ಆಕಾರ ಮತ್ತು ಕೋನಗಳನ್ನು ಸರಿಯಾಗಿ ತೋರಿಸುವುದಾಗಿತ್ತು. ಆದರೆ ಇದರಲ್ಲಿ ಖಂಡಗಳ ನಿಜವಾದ ವಿಸ್ತೀರ್ಣವನ್ನು ಸರಿಯಾಗಿ ತೋರಿಸಲು ಸಾಧ್ಯವಾಗುವುದಿಲ್ಲ. ಭೂಮಿ ಗೋಳಾಕಾರದಲ್ಲಿದೆ. ಅದನ್ನು ಸಮತಟ್ಟಾದ ಕಾಗದದ ಮೇಲೆ ತೋರಿಸುವಾಗ ಗಾತ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಉತ್ತರ ಭಾಗದಲ್ಲಿರುವ ಪ್ರದೇಶಗಳು ನಿಜವಾದ ಗಾತ್ರಕ್ಕಿಂತ ದೊಡ್ಡದಾಗಿ ಕಾಣುತ್ತವೆ. ಸಮಭಾಜಕ ರೇಖೆಯ ಸಮೀಪದಲ್ಲಿರುವ ಪ್ರದೇಶಗಳು ಸಣ್ಣದಾಗಿ ಕಾಣುತ್ತವೆ. ಹೀಗಾಗಿ ಯುರೋಪ್ ಮತ್ತು ಉತ್ತರ ಅಮೆರಿಕ ದೊಡ್ಡದಾಗಿ ಕಂಡರೆ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ತಮ್ಮ ನಿಜವಾದ ಗಾತ್ರಕ್ಕಿಂತ ಸಣ್ಣದಾಗಿ ಕಾಣುತ್ತಿದ್ದವು.

ಹೊಸ ಭೂಪಟದಲ್ಲಿ ಆಫ್ರೀಕಾ ದೊಡ್ಡದು

ಈಕ್ವಲ್ ಅರ್ಥ್ ನಕ್ಷೆಯನ್ನು ನಕ್ಷೆ ತಜ್ಞರ ತಂಡ 2018ರಲ್ಲಿ ಅಭಿವೃದ್ಧಿಪಡಿಸಿತು. ಈ ನಕ್ಷೆಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಗಳು ಹಿಂದಿನ ನಕ್ಷೆಗಿಂತ ಹೆಚ್ಚು ವಿಸ್ತಾರವಾಗಿ ಕಾಣಿಸಿವೆ. ಈಕ್ವಲ್ ಅರ್ಥ್ ಭೂಪಟದಲ್ಲಿ ವಿನ್ಯಾಸಕರಲ್ಲಿ ಒಬ್ಬರಾದ ಬೋಜನ್ ಸವ್ರಿಕ್, ಈ ನಕ್ಷೆ ಖಂಡಗಳ ನಿಜವಾದ ವಿಸ್ತೀರ್ಣದ ತೋರಿಸಿದೆ. ಸಾಧ್ಯವಾದಷ್ಟು ಅವುಗಳು ಭೂಗೋಳದ ಮೇಲೆ ಕಾಣುವ ರೀತಿಯಲ್ಲೇ ಇವೆ ಎಂದು 2025ರಲ್ಲಿ AFPಗೆ ತಿಳಿಸಿದ್ದರು.

ಮರ್ಕೇಟರ್ ನಕ್ಷೆ ಕೈಬಿಡಲಿದೆ ಫ್ರಾನ್ಸ್

ಈ ನಿರ್ಣಯಕ್ಕೆ ಸಹ-ಪ್ರಾಯೋಜಕವಾಗಿದ್ದ ಫ್ರಾನ್ಸ್ ಕೂಡ ಶುಕ್ರವಾರ ಮರ್ಕೇಟರ್ ನಕ್ಷೆಯನ್ನು ಕೈಬಿಡುವುದಾಗಿ ಘೋಷಿಸಿದೆ. ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬರೋಟ್ ಮಾತನಾಡಿ, ಮರ್ಕೇಟರ್ ನಕ್ಷೆಯಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಆಗ್ನೇಯ ಏಷ್ಯಾಕ್ಕೆ ಹೋಲಿಸಿದರೆ ಹೆಚ್ಚು ದೊಡ್ಡದಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಗ್ರೀನ್‌ಲ್ಯಾಂಡ್ ಬಹುತೇಕ ಆಫ್ರಿಕಾದಷ್ಟು ದೊಡ್ಡದಾಗಿ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ನಕ್ಷೆಗಳನ್ನು ಬದಲಾಯಿಸುವುದರಿಂದ ಜಗತ್ತು ಬದಲಾಗುವುದಿಲ್ಲ. ಆದರೆ ತಪ್ಪಾದ ಚಿತ್ರಣವನ್ನು ಸರಿಪಡಿಸುವುದು ಸತ್ಯವನ್ನು ತೋರಿಸುವ ಒಂದು ಹೆಜ್ಜೆ ಎಂದು ಬರೋಟ್ ಹೇಳಿದ್ದಾರೆ. ಆಫ್ರಿಕಾದೊಂದಿಗೆ, ವಿಶೇಷವಾಗಿ ತನ್ನ ಹಿಂದಿನ ವಸಾಹತು ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸಲು ಫ್ರಾನ್ಸ್ ಪ್ರಯತ್ನಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶನಿಯ ದಕ್ಷಿಣ ಧ್ರುವದಲ್ಲಿ ಮತ್ತೊಂದು ವಿಸ್ಮಯ: ಷಡ್ಭುಜಾಕೃತಿಯ ನಂತರ ಪತ್ತೆಯಾಯ್ತು 10 ಬದಿಗಳ 'ದಶಭುಜಾಕೃತಿ'!
9 ದಿನ ಬಳಿಕ ರಕ್ಷಿಸಿದ ನೇಪಾಳ ಕಾರ್ಮಿಕರ ಬದುಕಿಸಿದ ಶ್ರೀಕೃಷ್ಣ ಮಹಾಮಂತ್ರ, ಸಂಜಯ್ ಶಾ ಹೇಳಿದ್ದೇನು