ನ್ಯೂಯಾರ್ಕ್(ಜು.02): ಕೊರೋನಾ ವೈರಸ್ ವಿರುದ್ಧ ಹೋರಾಡಲು ಈಗಾಲೇ ಬಹುತೇಕ ರಾಷ್ಟ್ರಗಳಲ್ಲಿ ಲಸಿಕಾ ಅಭಿಯಾನ ಆರಂಭಗೊಂಡಿದೆ. ಆದರೆ ಈ ಲಸಿಕೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಕೊರೋನಾ ರೂಪಾಂತರಿ ವೈರಸ್ ಡೆಲ್ಟಾ ಹರಡುತ್ತಿದೆ. ಆದರೆ ಡೆಲ್ಟಾ ಎಂದು ಆತಂಕ ಪಡುವ ಅಗತ್ಯವಿಲ್ಲ. ಕಾರಣ ಡೆಲ್ಟಾ ಸೇರಿದಂತೆ ಕೊರೋನಾ ಡಬಲ್ ಮ್ಯೂಟೇಶನ್ ವೈರಸ್ ವಿರುದ್ಧ ಹೋರಾಡಬಲ್ಲ ಶಕ್ತಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಇದೆ ಎಂದು ಅಧ್ಯಯನ ವರದಿ ಹೇಳಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಜುಲೈನಲ್ಲಿ ಭಾರತಕ್ಕೆ?
ಜಾನ್ಸನ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಇದೀಗ ಡೆಲ್ಟಾ ಪ್ಲಸ್ ವೇರಿಯೆಂಟ್ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ವೈರಸ್ ಹಾಗೂ ಅದರ ರೂಪಾಂತರಿ ತಳಿಗಳ ವಿರುದ್ಧವೂ ಜಾನ್ಸನ್ ಲಸಿಕೆ ಪರಿಣಾಮಕಾರಿಯಾಗಿದೆ. ಅದರಲ್ಲೂ ಬೀಟಾ ರೂಪಾಂತರಿ ವೈರಸ್‌ಗಿಂತ ಡೆಲ್ಟಾ ವೇರಿಯೆಂಟ್ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ.
ಲಸಿಕೆಯಿಂದ ದೇಹದಲ್ಲಿ ನಿಧಾನವಾಗಿ ಪ್ರತಿಕಾಯ ಶಕ್ತಿ ವೃದ್ಧಿಸಲಿದೆ. ಇದರಿಂದ ರೂಪಾಂತರಿ ವೈರಸ್ ವಿರುದ್ಧ ಹೋರಾಡಬಲ್ಲ ಶಕ್ತಿಯನ್ನು ಈ ಲಸಿಕೆ ನೀಡಲಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ನಡೆಸಿದ ಅಧ್ಯಯನ ವರದಿ ಅಮೇರಿಕ ಜನರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿದೆ. ಕಾರಣ ಅಮೆರಿಕದಲ್ಲಿ ಈಗಾಗಲೇ 11 ಮಿಲಿಯನ್ ಜನ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದುಕೊಂಡಿದ್ದಾರೆ.
ಜಾನ್ಸನ್ ಅಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಭಾರತದಲ್ಲಿ ಪರೀಕ್ಷೆ?
ಜಾನ್ಸನ್ ಅಂಡ್ ಜಾನ್ಸನ್ ಬಿಡುಗಡೆ ಮಾಡಿರುವ ವರದಿ ಇದೀಗ ಅಮೆರಿಕನ್ನರ ಆತ್ಮವಿಶ್ವಾಸ ಹೆಚ್ಚಿಸಿದೆ. ಇಷ್ಟೇ ಅಲ್ಲ ಡೆಲ್ಟಾ ವೇರಿಯೆಂಟ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ ನಿರ್ಬಂಧಗಳನ್ನು ವಿಧಿಸಲಾಗುತ್ತಿತ್ತು. ಇದೀಗ ಡೆಲ್ಟಾ ಪ್ಲಸ್ ವೇರಿಯೆಂಟ್ ವಿರುದ್ಧ ಹೋರಾಡಬಲ್ಲ ಪರಿಣಾಮಕಾರಿ ಲಸಿಕೆ, ಅಮೆರಿಕದ ಜನರ ಜೀವನವನ್ನು ಸಹಜ ಸ್ಥಿತಿಗೆ ತರಲಿದೆ.