ಅಮೆರಿಕ ಅಧ್ಯಕ್ಷ ಚುನಾವಣೆ: 73ರ ಟ್ರಂಪ್ ವರ್ಸಸ್ 77ರ ಬೈಡೆನ್| ಅಮೆರಿಕ ಅಧ್ಯಕ್ಷೀಯ ಚುನಾವಣೆ| ಡೆಮೊಕ್ರಾಟಿಕ್ ಅಭ್ಯರ್ಥಿಯಾಗಲು ಬೈಡೆನ್ ಅರ್ಹ
ವಾಷಿಂಗ್ಟನ್(ಜೂ.07): ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಲು ಹಾತೊರೆಯುತ್ತಿರುವ ಡೊನಾಲ್ಡ್ ಟ್ರಂಪ್ ಎದುರು ಡೆಮೊಕ್ರಾಟಿಕ್ ಅಭ್ಯರ್ಥಿಯಾಗಿ ಜೋ ಬೈಡೆನ್ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಬೈಡೆನ್ ಅವರು ಡೆಮೊಕ್ರಾಟಿಕ್ ಪಕ್ಷದಿಂದ ಉಮೇದುವಾರರಾಗಲು ಬೇಕಾದ ಅರ್ಹತೆಯನ್ನು ಸಂಪಾದಿಸಿದ್ದಾರೆ.
77 ವರ್ಷದ ಬೈಡೆನ್ ಅವರಿಗೆ ಡೆಮೊಕ್ರಾಟಿಕ್ ಉಮೇದುವಾರರಾಗಲು ಪಕ್ಷದ 3979 ಪ್ರತಿನಿಧಿಗಳ ಪೈಕಿ ಅರ್ಧದಷ್ಟು, ಅಂದರೆ 1991 ಮತಗಳು ಬಿದ್ದಿವೆ. ಈ ಮೂಲಕ ಅವರು ರಿಪಬ್ಲಿಕನ್ ಪಕ್ಷದ ಮುಖಂಡ, 73 ವರ್ಷದ ಟ್ರಂಪ್ ವಿರುದ್ಧ ಸ್ಪರ್ಧೆಗೆ ವಿಪಕ್ಷದಿಂದ ಅರ್ಹತೆ ಪಡೆದುಕೊಂಡಂತಾಗಿದೆ. ಇವರೇ ಅಧಿಕೃತ ಅಭ್ಯರ್ಥಿ ಎಂದು ಔಪಚಾರಿಕವಾಗಿ ಆಗಸ್ಟ್‌ನಲ್ಲಿ ನಡೆಯಲಿರುವ ಡೆಮೊಕ್ರಾಟಿಕ್ ರಾಷ್ಟ್ರೀಯ ಸಮ್ಮೇಳನದಲ್ಲಿ ಘೋಷಣೆಯಾಗಲಿದ್ದು, ಔಪಚಾರಿಕತೆ ಮಾತ್ರ ಬಾಕಿ ಉಳಿದಿದೆ. ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
'ಹೆಚ್ಚು ಕೊರೋನಾ ಟೆಸ್ಟ್ ನಡೆದರೆ ಭಾರತ ಅಮೆರಿಕವನ್ನು ಮೀರಿಸುತ್ತೆ!'
‘ದೇಶಕ್ಕೆ ಬಲಶಾಲಿ ನಾಯಕ ಬೇಕೆಂದು ಜನ ರೋದಿಸುತ್ತಿದ್ದಾರೆ. ಅಮೆರಿಕ ಕಷ್ಟದಲ್ಲಿದೆ. ಟ್ರಂಪ್ ಅವರ ದ್ವೇಷದ, ವಿಭಜಕ ರಾಜಕೀಯವು ಈ ಕಷ್ಟಪರಿಹರಿಸಲ್ಲ. ಉತ್ತಮ ನಾಯಕತ್ವ ನಮ್ಮನ್ನು ಒಟ್ಟುಗೂಡಿಸಲಿದೆ’ ಎಂದು ಬೈಡೆನ್ ಪ್ರತಿಕ್ರಿಯಿಸಿದ್ದಾರೆ.
2009ರಿಂದ 2017ರವರೆಗೆ ಬೈಡೆನ್ ಅವರು ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ವೇಳೆ ಅಮೆರಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬೈಡೆನ್ ಅವರು ಭಾರತ-ಅಮೆರಿಕದ ಸ್ನೇಹದ ಪ್ರತಿಪಾದಕರು.